Garlic Lemon Rasam: ಫಟಾಫಟ್ ಅಂತ ಹತ್ತೇ ಹತ್ತು ನಿಮಿಷಗಳಲ್ಲಿ ತಯಾರಿಸಿ ʼಸ್ಪೆಷಲ್ ಗಾರ್ಲಿಕ್ ಲೆಮನ್ ರಸಂʼ

| Updated By: ಅಕ್ಷತಾ ವರ್ಕಾಡಿ

Updated on: Mar 03, 2024 | 7:36 PM

ಫಟಾಫಟ್ ಅಂತ ಬಹು ಬೇಗ ತಯಾರಿಸಬಹುದಾದ ರಸಂ ಬಹುತೇಕ ಎಲ್ಲರ ಫೆವರೇಟ್ ಅಂತಾನೇ ಹೇಳಬಹುದು. ಅದರಲ್ಲೂ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ರುಚಿಕರವಾದ ಮತ್ತು ಬಿಸಿಬಿಸಿಯಾದ ಅನ್ನ ರಸಂ ಇದ್ದರಂತೂ ಹೊಟ್ಟೆ ತುಂಬಾ ಊಟ ಮಾಡಬಹುದು. ಆದ್ರೆ ಪ್ರತಿ ಬಾರೀ ಅದೇ ನಾರ್ಮಲ್ ಟೊಮೆಟೊ ರಸಂ ತಿಂದು ಬೋರ್ ಆಗಿದೆ ಅಂತಿದ್ರೆ, ನೀವು ʼಗಾರ್ಲಿಕ್ ಲೆಮನ್ ರಸಂʼ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಈ ರಸಂ ಹಾಗೂ ಅನ್ನದ ಕಾಂಬಿನೇಷನ್ ಅಂತೂ ತುಂಬಾ ರುಚಿಕರವಾಗಿರುತ್ತದೆ.

Garlic Lemon Rasam: ಫಟಾಫಟ್ ಅಂತ ಹತ್ತೇ ಹತ್ತು ನಿಮಿಷಗಳಲ್ಲಿ ತಯಾರಿಸಿ ʼಸ್ಪೆಷಲ್ ಗಾರ್ಲಿಕ್ ಲೆಮನ್ ರಸಂʼ
Garlic lemon rasam
Follow us on

ದಕ್ಷಿಣ ಭಾರತದ ಪ್ರಮುಖ ಭಕ್ಷ್ಯವಾದ ರಸಂ ತನ್ನ ವಿಶೇಷ ರುಚಿಯಿಂದಲೇ ಬಹಳ ಹೆಸರುವಾಸಿಯಾಗಿದೆ. ಸವಿದಷ್ಟು ಮೋಡಿ ಮಾಡುವ ರಸಂನ ಸ್ವಾದವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ರಸಂ ಅನ್ನು ಹುಣಸೆ ರಸ, ಕಾಳು ಮೆಣಸು, ಟೊಮೆಟೊ, ಜೀರಿಗೆ ಮತ್ತು ಇತರೆ ಪ್ರಮುಖ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಬಿಸಿ ಬಿಸಿ ಅನ್ನದ ಜೊತೆಗೆ ರಸಂ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಇದು ಕೇವಲ ಸ್ವಾದಿಷ್ಟಕರವಾದದ್ದು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಆದರೆ ಪ್ರತಿ ಬಾರಿ ಮಾಡುವಂತಹ ನಾರ್ಮಲ್ ಟೊಮೆಟೊ ರಸಂ ಬದಲು ಮದುವೆ ಇತ್ಯಾದಿ ಫಂಕ್ಷನ್ ಗಳಲ್ಲಿ ತಯಾರಿಸುವಂತಹ ಸ್ಪೆಷಲ್ ರಸಂ ರೆಸಿಪಿನ್ನು ತಯಾರಿಸಬೇಕು ಅಂತಿದ್ರೆ ನೀವು ʼಗಾರ್ಲಿಕ್ ಲೆಮನ್ ರಸಂʼ ರೆಸಿಪಿಯನ್ನು ಟ್ರೈ ಮಾಡಬಹುದು. ಈ ರಸಂನ ಸರಳ ಪಾಕವಿಧಾನದ ಮಾಹಿತಿಯನ್ನು ವಿದ್ಯಾ ಜಯರಾಮ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಾರ್ಲಿಕ್ ಲೆಮನ್ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಉದ್ದಿನ ಬೇಳೆ – 1 ಟೀ ಸ್ಪೂನ್

• ಕಾಳು ಮೆಣಸು – ½ ಟೀ ಸ್ಪೂನ್

• ಜೀರಿಗೆ – 1 ಟೀ ಸ್ಪೂನ್

• ಕೊತ್ತಂಬರಿ ಬೀಜ – 1 ಟೀ ಸ್ಪೂನ್

• ತೆಂಗಿನಕಾಯಿ ತುರಿ – ¼ ಕಪ್

• ತೊಗರಿ ಬೇಳೆ – 1 ಕಪ್

• ನಿಂಬೆ

• ಅರಶಿನ

• ಸ್ವಲ್ಪ ಬೆಳ್ಳುಳ್ಳಿ

• ಎಣ್ಣೆ

• ಸಾಸಿವೆ

• ಹಸಿ ಮೆಣಸು, ಒಣ ಮೆಣಸು

• ಕೊತ್ತಂಬರಿ ಸೊಪ್ಪು

• ಟೊಮಾಟೊ

• ರುಚಿಗೆ ತಕ್ಕಷ್ಟು ಉಪ್ಪು

• ಕೊತ್ತಂಬರಿ ಸೊಪ್ಪು

ಇದನ್ನೂ ಓದಿ: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ

ಗಾರ್ಲಿಕ್ ಲೆಮನ್ ರಸಂ ತಯಾರಿಸುವ ಸುಲಭ ವಿಧಾನ:

  1. ಮೊದಲಿಗೆ ಒಂದು ಕಪ್ ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ನಂತರ ಸ್ಟವ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಮೊದಲು ಉದ್ದಿನ ಬೇಳೆ, ಕಾಳು ಮೆಣಸು, ಜೀರಿಗೆ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ, ನಂತರ ಅದಕ್ಕೆ ಕೊತ್ತಂಬರಿ ಬೀಜ, ಸ್ವಲ್ಪ ಬೆಳ್ಳುಳ್ಳಿ, ತುರಿದಿಟ್ಟ ತೆಂಗಿನಕಾಯಿ ತುರಿಯನ್ನು ಸೇರಿಸಿ ಉದ್ದಿನ ಬೇಳೆ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಎಲ್ಲವನ್ನು ಚೆನ್ನಾಗಿ ಹುರಿಯಿರಿ.
  2. ನಂತರ ಹುರಿದಿಟ್ಟ ಈ ಮಿಶ್ರಣವನ್ನು ಮಿಕ್ಸಿಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ನಂತರ ಒಲೆಯ ಮೇಲೆ ಒಂದು ಬಾಣಲೆಯನ್ನಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ, ಎಣ್ಣೆ ಕಾದ ಬಳಿಕ ಸಾಸಿವೆ, ಒಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಟೊಮೆಟೊ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಅದಕ್ಕೆ ಮೊದಲೇ ಪುಡಿ ಮಾಡಿ ಇಟ್ಟುಕೊಂಡಂತಹ ಮಸಾಲೆ ಮಿಶ್ರಣವನ್ನು ಸೇರಿಸಿಕೊಂಡು ಇನ್ನೊಂದು ಬಾರಿ ಹುರಿದುಕೊಳ್ಳಿ.
  3. ಬಳಿಕ ಮೊದಲೇ ಬೇಯಿಸಿಟ್ಟುಕೊಂಡಂತಹ ತೊಗರಿ ಬೇಳೆಯನ್ನು ಈ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ನೀರನ್ನು ಕೂಡಾ ಸೇರಿಸಿಕೊಂಡು, ಸ್ವಲ್ಪ ಅರಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಗ್ಯಾಸ್ ಆಫ್ ಮಾಡಿ, ಈ ಮಿಶ್ರಣಕ್ಕೆ ನಿಂಬೆ ರಸವನ್ನು ಸೇರಿಸಿದರೆ ಗಾರ್ಲಿಕ್ ಲೆಮನ್ ರಸಂ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ