‘ಪುರುಷೋತ್ತಮನ ಪ್ರಸಂಗ’ ಟ್ರೇಲರ್ ಬಿಡುಗಡೆ, ಶರಣ್ ಸಾಥ್
Purushothama Prasanga: ತುಳು ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ದೇವದಾಸ್ ಕಾಪಿಕಾಡ್ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ಟ್ರೈಲರ್ ಅನ್ನು ನಟ ಶರಣ್ ಬಿಡುಗಡೆ ಮಾಡಿದ್ದಾರೆ.
ತುಳು ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ದೇವದಾಸ್ ಕಾಪಿಕಾಡ್ (Devadas Kapikad) ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಹೊಸ ಸಿನಿಮಾ ಘೋಷಣೆ ಮಾಡಿ ಕೆಲವೇ ತಿಂಗಳಲ್ಲಿ ಚಿತ್ರೀಕರಣವನ್ನು ಸಹ ಮುಗಿಸಿದ್ದು ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಮಾಡಿದ್ದಾರೆ. ‘ಪುರುಷೋತ್ತಮನ ಪ್ರಸಂಗ’ ಸಿನಿಮಾವನ್ನು ದೇವದಾಸ್ ಕಾಪಿಕಾಡ್ ನಿರ್ದೇಶನ ಮಾಡಿದ್ದು, ಖ್ಯಾತ ನಟ ಶರಣ್ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ್, ‘ಪರುಷೋತ್ತಮನ ಪ್ರಸಂಗ’ ಶೀರ್ಷಿಕೆಯೇ ಗಮನ ಸೆಳೆಯುವಂತಿದೆ. ಪುರುಷೋತ್ತಮ ಎಂದರೆ ರಾಮ. ಆ ರಾಮನ ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾ ಖಂಡಿತವಾಗಿಯೂ ಗೆಲ್ಲಲಿದೆ. ಸಿನಿಮಾದ ಟ್ರೇಲರ್ ನೋಡಿದಾಗ ಅಜಯ್ ಅವರು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅನಿಸುವುದಿಲ್ಲ, ಅಷ್ಟು ಚೆನ್ನಾಗಿ ಅಜಯ್ ನಟಿಸಿದ್ದಾರೆ. ನಾನು ಟ್ರೇಲರ್ ಗೆ ಧ್ವನಿ ನೀಡಿದ್ದೇನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದರು.
ಇದನ್ನೂ ಓದಿ:ಹಾಲಿವುಡ್ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?
‘ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ ಎಂದು ನಾಯಕ ಅಜಯ್ ತಿಳಿಸಿದರು. ಅಜಯ್ ಅವರ ತಂದೆಯವರೇ ಈ ಸಿನಿಮಾದ ನಿರ್ಮಾಪಕರು.
‘ಪರಿಶುದ್ಧ ಮನೋರಂಜನೆಯ ಈ ಸಿನಿಮಾ ಮಾರ್ಚ್ ಒಂದರಂದು ಬಿಡುಗಡೆ ಆಗುತ್ತಿದೆ. ದುಬೈ, ಕತಾರ್ ನಲ್ಲೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ಸಹ ನಿರ್ಮಾಪಕ ಶಂಶುದ್ದೀನ್. ನಿರ್ಮಾಪಕ ರವಿಕುಮಾರ್ ಹಾಗೂ ನಾಯಕಿ ರಿಷಿಕಾ ನಾಯ್ಕ್ ಚಿತ್ರದ ಕುರಿತು ಮಾತನಾಡಿದರು. ಇದೊಂದು ಉತ್ತಮ ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರವಿದು. ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ಅರ್ಜುನ್ ಕಾಪಿಕಾಡ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ