Barley Tea Benefits: ಸಾದ ಚಹಾದ ಬದಲಿಗೆ ಬಾರ್ಲಿ ಚಹಾ ಕುಡಿಯಿರಿ, ಇದರಲ್ಲಿದೆ ಆರೋಗ್ಯ ಪ್ರಯೋಜನ
ಚಹಾ ಮತ್ತು ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ದಿನವಿಡೀ ನಮ್ಮನ್ನು ಸಕ್ರಿಯವಾಗಿಡಲು ಇದು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಅನೇಕರು ಚಹಾವನ್ನು ಸೇವನೆ ಮಾಡುತ್ತಾರೆ. ಆದರೆ ಚಹಾ ಮತ್ತು ಕಾಫಿಯಲ್ಲಿ ಕಂಡುಬರುವ ಕೆಫಿನ್ ನಮ್ಮ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಹಾಗಾಗಿ ನಿಮ್ಮ ದೈನಂದಿನ ಚಹಾಕ್ಕೆ ಆರೋಗ್ಯಕರ ಪರ್ಯಾಯವನ್ನು ಹುಡುಕುತ್ತಿದ್ದರೆ, ನೀವು ಪ್ರತಿದಿನ ಪರಿಮಳಯುಕ್ತ ಬಾರ್ಲಿ ಚಹಾವನ್ನು ಸೇವಿಸಬಹುದು. ಇದು ಅದ್ಭುತ ರುಚಿಯನ್ನು ನೀಡುವುದು ಮಾತ್ರವಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ.
ಹೆಚ್ಚಿನ ಜನರು ಬೆಳಗ್ಗೆ ಎದ್ದ ಬಳಿಕ ದಿನವನ್ನು ಆರಂಭಿಸಲು ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಅದರಲ್ಲಿ ಕೆಫಿನ್ ಅಂಶ ಇರುವುದರಿಂದ ಅದು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಹಾಗಾಗಿ ಇತ್ತೀಚಿಗೆ ಹೆಚ್ಚಿನವರು ಕಾಫಿ ಟೀಯ ಪರ್ಯಾಯವಾಗಿ ಗ್ರೀನ್ ಟೀ ಯನ್ನು ಕುಡಿಯುತ್ತಿದ್ದಾರೆ. ಇದರ ಹೊರತಾಗಿ ನೀವು ಬಾರ್ಲಿ ಚಹಾವನ್ನು (Barley Tea Benefits) ಕೂಡಾ ಸೇವಿಸಬಹುದು. ಪರಿಮಳಯುಕ್ತವಾದ ಈ ಚಹಾ ರುಚಿಕರವಾದುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬಾರ್ಲಿಯಲ್ಲಿ ಸೋಡಿಯಂ, ಪೊಟ್ಯಾಸಿಯಂ, ಫೈಬರ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಮುಂತಾದ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಅನೇಕ ರೋಗಗಳನ್ನು ಸಹ ಗುಣಪಡಿಸುತ್ತದೆ. ಅಲ್ಲದೆ ಇದು ಒತ್ತಡವನ್ನು ನಿವಾರಿಸಲು ಕೂಡಾ ಸಹಕಾರಿಯಾಗಿದೆ. ವಿಶೇಷವಾಗಿ ಬಾರ್ಲಿ ಚಹಾ ಕೊರಿಯಾ ಮತ್ತು ಜಪಾನ್ ನಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಕೊರಿಯಾದ ಮಹಿಳೆಯರ ಹೊಳೆಯುವ ಸುಂದರ ತ್ವಚೆಯ ಹಿಂದಿನ ರಹಸ್ಯವೇ ಬಾರ್ಲಿ ಚಹಾ. ಹೌದು ಇದು ತ್ವಚೆಯನ್ನು ಪೋಷಿಸುವ ಹಾಗೂ ಹೊಳೆಯುವಂತೆ ಮಾಡುವ ಗುಣಗಳನ್ನು ಹೊಂದದೆ. ಕೇವಲ ತ್ವಚೆಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
ಬಾರ್ಲಿ ಚಹಾವನ್ನು ತಯಾರಿಸುವುದು ಹೇಗೆ?
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬಾರ್ಲಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗೇ ಬಾರ್ಲಿ ಚಹಾವನ್ನು ಪ್ರತಿನಿತ್ಯ ಸೇವನೆ ಮಾಡುವ ಮೂಲಕ ಅನೇಕ ಕಾಯಿಲೆಗಳಿಂದ ಮುಕ್ತಿಯನ್ನು ಪಡೆಯಬಹುದು. ಹಾಗಾದರೇ ಈ ಚಹಾವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಬೇಕಾಗುವ ಸಾಮಾಗ್ರಿಗಳು:
• 1 ಲೀಟರ್ ನೀರು
• 2 ಚಮಚ ಹುರಿದ ಬಾರ್ಲಿ
• ಜೇನುತುಪ್ಪ ಸಿಹಿಗೆ ತಕ್ಕಂತೆ
ತಯಾರಿಸುವು ವಿಧಾನ:
ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ನೀರನ್ನಿಟ್ಟು ಕಡಿಮೆ ಉರಿಯಲ್ಲಿ ಅದನ್ನು ಕುದಿಸಿ. ಕುದಿ ಬಂದ ನಂತರ ಅದಕ್ಕೆ ಹುರಿದ ಬಾರ್ಲಿ ಮತ್ತು ಜೇನು ತುಪ್ಪವನ್ನು ಸೇರಿಸಿ, ಚೆನ್ನಾಗಿ ಬೆರೆಸಿಕೊಳ್ಳಿ, ಈ ಮಿಶ್ರಣವನ್ನು ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಂತರ ಶೋಧಿಸಿ ಕುಡಿಯಿರಿ.
ಬಾರ್ಲಿ ಚಹಾದ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಬಾರ್ಲಿ ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಇದು ಗ್ಯಾಸ್, ಅಸಿಡಿಟಿ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಬಾರ್ಲಿ ಟೀ ಕುಡಿಯುವುದರಿಂದ ವಾಕರಿಕೆ ಮತ್ತು ವಾಂತಿಯಿಂದ ಮುಕ್ತಿ ಸಿಗುತ್ತದೆ.
ರಕ್ತಪರಿಚಲನೆಯನ್ನು ಸುಧಾರಿಸುತ್ತದೆ:
ಬಾರ್ಲಿ ಚಹಾವನ್ನು ಕುಡಿಯುವುದು ಆರೋಗ್ಯಕರ ರಕ್ತ ಪರಿಚಲನೆಗೆ ಸಹ ಪ್ರಯೋಜನಕಾರಿಯಾಗಿದೆ. ಇದು ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ ಹೃದಯಸಂಬಂಧಿ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತದೆ. ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಬಾರ್ಲಿ ಚಹಾವು ಜೀವತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ . ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಈ ಕಾರಣದಿಂದಾಗಿ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿದ್ರೆಯನ್ನು ಉತ್ತೇಜಿಸುತ್ತದೆ:
ಬಾರ್ಲಿ ಚಹಾದಲ್ಲಿ ಅಮೈನೋ ಆಮ್ಲಗಳು, ಮೆಲಟೋನಿನ್ ಮತ್ತು ಟ್ರಿಟ್ಟೊಫಾನ್ ನ ಸಂಯೋಜನೆಯು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಇದು ಮುಖ್ಯವಾಗಿ ಯಾವುದೇ ಕೆಫಿನ್ ಅಂಶವನ್ನು ಹೊಂದಿರುವುದಿಲ್ಲ. ಆದ್ದರಿಂದ ಇದು ನಿದ್ರಾಹೀನತೆಯನ್ನು ಹೋಗಲಾಡಿಸಿ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ರೋಗವನ್ನು ತಡೆಯಲು ಸಹಕಾರಿ:
ಬಾರ್ಲಿ ಚಹಾವು ಫೈಬರ್ ಮತ್ತು ಫೈಟೊನ್ಯೂಟ್ರಿಯೆಂಟ್ ಗಳಿಂದ ತುಂಬಿದೆ. ಇದು ಕೆಲವು ರೀತಿಯ ಕ್ಯಾನ್ಸರ್ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಈ ಚಹಾದಲ್ಲಿರುವ ಉತ್ಕರ್ಷಣ ನಿರೋಧಕ ಅಂಶ ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
ಶೀತ ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ:
ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಬಾರ್ಲಿ ಚಹಾವು ಶೀತ ಮತ್ತು ಜ್ವರದಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಇದು ಗಂಟಲು ನೋವು ಮತ್ತು ಆಸ್ತಮಾದಿಂದಲೂ ಪರಿಹಾರವನ್ನು ನೀಡುತ್ತದೆ.
ರಕ್ತವನ್ನು ಶುದ್ಧೀಕರಿಸಲು ಸಹಕಾರಿ:
ಬಾರ್ಲಿ ಚಹಾದ ಸಾಮಾನ್ಯ ಆರೋಗ್ಯ ಪ್ರಯೋಜನವೆಂದರೆ, ಅದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಧುಮೇಹಿ ರೋಗಿಗಳಿಗೆ ಬಾರ್ಲಿ ಚಹಾವು ತುಂಬಾ ಪ್ರಯೋಜನಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ