ಸಾಂದರ್ಭಿಕ ಚಿತ್ರ
ದಿನವಿಡೀ ಸಕ್ರಿಯವಾಗಿರಲು ಹಾಗೂ ದಿನದ ಆಯಾಸವನ್ನು ಹೋಗಲಾಡಿಸಲು ಹೆಚ್ಚಿನ ಜನರು ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಒಂದು ಕಪ್
ಬಿಸಿ ಬಿಸಿ ಚಹಾ ಕುಡಿಯುತ್ತಾರೆ. ಆದರೆ ಚಹಾಕ್ಕೆ ಸೇರಿಸಲಾಗುವ ಹೆಚ್ಚುವರಿ ಸಕ್ಕರೆಯು ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಅಲ್ಲದೆ ಸಕ್ಕರೆಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳಿಲ್ಲ. ಇದರ ಅತಿಯಾದ ಸೇವನೆಯು ಸ್ಥೂಲಕಾಯತೆ, ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸಕ್ಕರೆಯ ಬದಲು ಬೆಲ್ಲವನ್ನು ಸೇರಿಸಿ ಮಾಡಲಾದ ಚಹಾವನ್ನು ಸೇವನೆ ಮಾಡಬಹುದು. ಬೆಲ್ಲದ ಚಹಾವು ನಮ್ಮ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಬೆಲ್ಲದಲ್ಲಿ ಪ್ರೋಟೀನ್, ವಿಟಮಿನ್ ಬಿ12, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತದೆ. ಇವೆಲ್ಲವೂ ದೇಹವನ್ನು ಆರೋಗ್ಯಕರವಾಗಿಡಲು ಸಹಕಾರಿ.
ಬೆಲ್ಲದ ಚಹಾದ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:
ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ:
ಸಕ್ಕರೆಯ ಬದಲು ಬೆಲ್ಲ ಸೇರಿಸಿ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದರ ನಿಯಮಿತ ಸೇವನೆಯು ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿ:
ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಲ್ಲದ ಚಹಾವನ್ನು ಕುಡಿಯಬೇಕು. ಬೆಲ್ಲದಿಂದ ತಯಾರಿಸಿದ ಚಹಾದಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಇದು ಕೆಂಪು ರಕ್ತಕಣಗಳ ರಚನೆಗೆ ಸಹಾಯ ಮಾಡುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ರಕ್ತಹೀನತೆಯನ್ನು ನಿವಾರಿಸಲು ನೀವು ನಿಯಮಿತವಾಗಿ ಬೆಲ್ಲದ ಚಹಾವನ್ನು ಸೇವನೆ ಮಾಡಬೇಕು.
ತೂಕ ಇಳಿಸಿಕೊಳ್ಳಲು ಸಹಕಾರಿ:
ತೂಕ ನಷ್ಟದ ಪ್ರಯಾಣದಲ್ಲಿ ನೀವು ದಿನನಿತ್ಯ ಆರೋಗ್ಯಕ ಆಹಾರವನ್ನು ಸೇವನೆ ಮಾಡಲು ಬಯಸಿದರೆ, ನೀವು ಬೆಲ್ಲದ ಚಹಾವನ್ನು ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ಬೆಲ್ಲದ ಚಹಾವನ್ನು ಸೇವನೆ ಮಾಡಿದಾಗ ನೀವು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ಬೆಲ್ಲದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ1, ಬಿ6, ಸತು, ಪೊಟ್ಯಾಸಿಯಂ ಮತ್ತು ಅನೇಕ ಅಗತ್ಯ ಪೋಷಕಾಂಶಗಳಿವೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಬಹಳ ಮುಖ್ಯವಾಗಿದೆ. ಇದಲ್ಲದೆ ಇದು ಫೈಬರ್ ನಲ್ಲಿ ಸಮೃದ್ಧವಾಗಿದ್ದು, ಇದರಿಂದ ನಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಒಂದು ಕಪ್ ಬೆಲ್ಲದ ಚಹಾವನ್ನು ಕುಡಿಯಿರಿ.
ಕಾಲೋಚಿತ ಜ್ವರದ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ:
ಹೆಚ್ಚಿನ ಜನರು ಆಗಾಗ್ಗೆ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅಂತಹ ಜನರು ತಮ್ಮ ದಿನಚರಿಯಲ್ಲಿ ಬೆಲ್ಲದ ಚಹಾವನ್ನು ಸೇರಿಸಬೇಕು. ಇದು ದೇಹಕ್ಕೆ ಅತ್ಯುತ್ತಮವಾದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಮತ್ತು ಬೆಲ್ಲವು ಕಾಲೋಚಿತ ಜ್ವರದಿಂದ ದೇಹವನ್ನು ರಕ್ಷಿಸುತ್ತದೆ. ಇದಲ್ಲದೆ ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ದೇಹವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಸದೃಢವಾಗಿ ಹಾಗೂ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಮೈಗ್ರೇನ್ ನಿಂದ ಪರಿಹಾರ:
ನೀವು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ಆಗಾಗ್ಗೆ ತಲೆನೋವು ಹೊಂದಿದ್ದರೆ, ಬೆಲ್ಲದ ಚಹಾವನ್ನು ನಿಯಮಿತವಾಗಿ ಸೇವನೆ ಮಾಡಲು ಪ್ರಾರಂಭಿಸಿ. ಬೆಲ್ಲದಲ್ಲಿ ಕಂಡುಬರುವ ಪೋಷಕಾಂಶಗಳು ಮೈಗ್ರೇನ್ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.