Health Tips: ಚಳಿಗಾಲದಲ್ಲಿ ಬಿಸಿಯಾದ ಆಹಾರ ಸೇವಿಸುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ
ಮೈ ಕೊರೆಯುವ ಚಳಿಯಲ್ಲಿ ಬಿಸಿ ಬಿಸಿಯಾದ ಆಹಾರವನ್ನು ತಂದು ಮುಂದೆ ಇಟ್ಟರೆ ಬೇಡ ಎನ್ನಲು ಮನಸ್ಸಾಗುವುದಿಲ್ಲ. ತಂಪಾದ ವಾತಾವರಣದ ನಡುವೆ ಬಿಸಿಯಾಗಿರುವ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಕೆಲವರಂತೂ ಯಾವಾಗಲೂ ಬಿಸಿ ಆಹಾರವನ್ನು ತಿನ್ನಲು ಇಷ್ಟ ಪಡುತ್ತಾರೆ. ಆದರೆ ಈ ರೀತಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಸಿ ಆಹಾರ ಸೇವನೆಯೂ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಬಿಸಿ ಆಹಾರ ಸೇವನೆಯೂ ಏನೆಲ್ಲಾ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಲ್ಲದು ಎನ್ನುವ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ದೇಹ ಹಾಗೂ ಮನಸ್ಸು ಬಿಸಿಯಾದ ಆಹಾರವನ್ನು ತಿನ್ನಲು ಬಯಸುತ್ತದೆ. ಹೀಗಾಗಿ ತಂಪಾದ ವಾತಾವರಣವಿರುವ ಕಾರಣ ದೇಹವನ್ನು ಬೆಚ್ಚಗಿರಿಸಲು ಬಿಸಿ ಬಿಸಿ ಆಹಾರ ಸೇವನೆ ಮಾಡುವುದು ಸಹಜ. ನಿಮಗೂ ಕೂಡ ಈ ರೀತಿ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟು ಬಿಡುವುದು ಒಳ್ಳೆಯದು. ಹೌದು, ಹೆಚ್ಚು ಬಿಸಿಯಾದ ಆಹಾರ ಸೇವಿಸಿದರೆ ಈ ಆಹಾರವು ಮಾಂಸ ಮತ್ತು ದೇಹದ ಅನೇಕ ಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
- ನಾಲಿಗೆ ಹಾಗೂ ಗಂಟಲಿಗೆ ಹಾನಿ : ಹೆಚ್ಚು ಬಿಸಿಯಾದ ಆಹಾರವು ಆರೋಗ್ಯಕ್ಕೆ ಮಾತ್ರವಲ್ಲದೇ ನಾಲಿಗೆಗೂ ಹಾನಿಯಾಗುತ್ತದೆ. ಬಿಸಿ ನೀರು ಮೈ ಮೇಲೆ ಬಿದ್ದರೆ ಹೇಗೆ ಉರಿಯುತ್ತದೆಯೋ, ಅದೇ ರೀತಿ ಬಿಸಿ ಆಹಾರ ಸೇವನೆಯಿಂದ ನಾಲಿಗೆಯೂ ಸುಡಬಹುದು. ನಾಲಿಗೆಯೂ ಸೂಕ್ಷ್ಮವಾಗಿದ್ದು, ಬಿಸಿ ಆಹಾರ ಸೇವನೆಯ ಪರಿಣಾಮವಾಗಿ ಕೆಲವು ದಿನಗಳವರೆಗೆ ಆಹಾರದ ರುಚಿಯೇ ತಿಳಿಯುವುದಿಲ್ಲ. ಅದಲ್ಲದೇ, ತುಂಬಾ ಬಿಸಿಯಾದ ಆಹಾರ ಸೇವನೆಯೂ ಗಂಟಲಿನಲ್ಲಿ ಊತವನ್ನು ಉಂಟು ಮಾಡುತ್ತದೆ.
- ಹೊಟ್ಟೆ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ : ಹೊಟ್ಟೆಯ ಒಳಗಿನ ಚರ್ಮವು ಸೂಕ್ಷ್ಮವಾಗಿರುವ ಕಾರಣ ಬೆಚ್ಚಗಿನ ಆಹಾರವನ್ನು ದೇಹವು ಸ್ವೀಕರಿಸುವುದಿಲ್ಲ. ಇದನ್ನು ಸೇವಿಸುವುದರಿಂದ ಹೊಟ್ಟೆ ನೋವು, ಸೆಳೆತ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರೊಂದಿಗೆ ಗ್ಯಾಸ್ ಸಮಸ್ಯೆ, ಕರುಳಿಗೆ ಹಾನಿಯಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಬಿಸಿ ಇರುವ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
- ಹಲ್ಲುಗಳಿಗೂ ಹಾನಿಯಾಗುತ್ತದೆ : ಬಿಸಿ ಆಹಾರ ಸೇವನೆ ಹಾಗೂ ಬಿಸಿ ಬಿಸಿಯಾದ ಸೂಪ್ ಕುಡಿಯುವುದು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಆಹಾರವು ಬಿಸಿಯಾಗಿರುವ ಕಾರಣ ದಂತ ಕವಚ ಬಿರುಕು ಬಿಡಲು ಪ್ರಾರಂಭಿಸಿ, ಶಾಶ್ವತವಾಗಿ ಹಾನಿಗೊಳಗಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ