ಹಣ್ಣಿನ ರಸ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದ್ದು ಹಣ್ಣು ಅಥವಾ ತರಕಾರಿಯಾಗಿರಲಿ, ಒಂದು ಲೋಟ ಕುಡಿದ ತಕ್ಷಣವೇ ನಮ್ಮನ್ನು ಉಲ್ಲಾಸಗೊಳಿಸುತ್ತದೆ ಜೊತೆಗೆ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ಹಣ್ಣಿನ ರಸಗಳು ನಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವುದರೊಂದಿಗೆ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತದೆ. ಇಂತಹ ಹಣ್ಣಿನ ರಸಗಳಲ್ಲಿ ದಾಳಿಂಬೆ ಅತ್ಯಂತ ಆರೋಗ್ಯಕರ ಎಂಬುದು ನಿಮಗೆ ತಿಳಿದಿದೆಯೇ? ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಉರಿಯೂತ ನಿವಾರಕ ಗುಣಲಕ್ಷಣಗಳಿವೆ. ಪ್ರತಿದಿನ ಒಂದು ಲೋಟ ದಾಳಿಂಬೆ ರಸ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.
ಡಾ. ಮುಖೇಶ್ ಸಿಂಗ್ ಹೇಳುವ ಪ್ರಕಾರ, “ದಾಳಿಂಬೆ ರಸವು ಯಾವಾಗಲೂ ನಿಮ್ಮನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಇದು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ತಡೆಗಟ್ಟಲು, ಸ್ಮರಣೆ ನಷ್ಟ, ರಕ್ತಹೀನತೆಯಿಂದ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ. ಜೊತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ” ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ ಎಂದಿದ್ದಾರೆ.
ಅನಾರ್ ಅಥವಾ ದಾಳಿಂಬೆ ರಸದಲ್ಲಿ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳಿವೆ, ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಉತ್ಕರ್ಷಣ ನಿರೋಧಕಗಳು ನಮ್ಮ ಜೀವಕೋಶಗಳನ್ನು ಹಾನಿಗೊಳಿಸುವ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಆರೋಗ್ಯ ಕಾಯಿಲೆಗಳಿಗೆ ಕಾರಣವಾಗುವ ದೇಹದಲ್ಲಿನ ಫ್ರೀ ರಾಡಿಕಲ್ ಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ.
ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತ ತೆಳುವಾಗಲು ಸಹಾಯ ಮಾಡುತ್ತದೆ. ಹೃದಯದಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು.
ಈ ಹಣ್ಣಿನ ರಸವು ಫ್ಲೇವೊನಾಲ್ ಗಳನ್ನು ಹೊಂದಿರುತ್ತದೆ, ಇದು ಕೀಲುಗಳಲ್ಲಿನ ಉರಿಯೂತವನ್ನು ತಡೆಗಟ್ಟಲು ಸಹಾಯ ಮಾಡಿ, ಸಂಧಿವಾತವನ್ನು ತಡೆಯುತ್ತದೆ.
ದಾಳಿಂಬೆ ರಸವು ನಿಮ್ಮ ಹೃದಯಕ್ಕೆ ಉತ್ತಮವಾಗಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಇದು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ.
ಇದನ್ನೂ ಓದಿ: ನಿಮ್ಮ ಗರ್ಲ್ ಫ್ರೆಂಡ್ ಮಾತು ಮಾತಿಗೂ ಕಣ್ಣೀರು ಹಾಕ್ತಾರ? ಹಾಗಾದ್ರೆ ಇಂತವರ ಬಗ್ಗೆ ತಜ್ಞರು ಹೇಳಿದ ರಹಸ್ಯ ಇಲ್ಲಿದೆ
ಪ್ರತಿದಿನ ಈ ಹಣ್ಣಿನ ರಸವನ್ನು ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಯಾವುದೇ ರೀತಿಯ ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಈ ಹಣ್ಣಿನಲ್ಲಿರುವ ಆಂಟಿವೈರಲ್ ಗುಣಲಕ್ಷಣಗಳಿಂದಾಗಿ, ಸಾಮಾನ್ಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿದೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಇ ಇದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ