‘ಸೋಲೋ ಟ್ರಿಪ್’ ಎನ್ನುವುದು ಈಗಿನ ಕಾಲಮಾನದ ಟ್ರೆಂಡ್. ನಮ್ಮೊಳಗಿನ ಹುಡುಕಾಟಕ್ಕೆ, ಹೊಸ ಹೊಸ ಜಾಗ, ಜನಗಳನ್ನು ನೋಡಿ ಬದುಕಿನ ಪಾಠಗಳನ್ನು ಕಲಿಯಲು ಈಗಿನ ತಲೆಮಾರಿನ ಯುವಕ ಯುವತಿಯರು ‘ಸೋಲೋ ಟ್ರಿಪ್’ ಮೊರೆ ಹೋಗುತ್ತಾರೆ. ಇವುಗಳಲ್ಲದೇ ಇನ್ನೂ ಅನೇಕ ವೈಯಕ್ತಿಕ ಕಾರಣಗಳಿಗಾಗಿ ಸೋಲೋ ಟ್ರಿಪ್ ಹೋಗುವವರೂ ಇದ್ದಾರೆ. ಏನೇ ಆದರೂ, ಸೋಲೋ ಟ್ರಿಪ್ ಎನ್ನುವುದು ಸ್ನೇಹಿತರೊಂದಿಗೆ ಹೋಗುವ ಜಾಲಿ ಟ್ರಿಪ್ಗಿಂತ ಸಂಪೂರ್ಣ ಭಿನ್ನ. ಆದ್ದರಿಂದಲೇ ಈಗಿನ ಕಾಲದವರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ನೀವೂ ಕೂಡ ಬ್ಯಾಗನ್ನು ಹೆಗಲಿಗೇರಿಸಿ ಎಲ್ಲಾದರೂ ಒಂಟಿಯಾಗಿ ಹೊರಟುಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಅಂತಹ ಕೆಲವು ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕಸೋಲ್:
ಕಸೋಲ್ ಒಂದು ಅದ್ಭುತವಾದ ಸ್ಥಳವಾಗಿದ್ದು, ಸೋಲೋ ಟ್ರಿಪ್ಗೆ ಹೇಳಿಮಾಡಿಸಿದ ಸ್ಥಳವಾಗಿದೆ. ಇದು ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಾಗಿದ್ದು, ಪಾರ್ವತಿ ನದಿಯ ದಂಡೆಯಲ್ಲಿದೆ. ರುದ್ರರಮಣೀಯ ಸೌಂದರ್ಯದಿಂದ ಪ್ರಶಾಂತವಾಗಿರುವ ಈ ಸ್ಥಳವನ್ನು ಸೋಲೋ ಟ್ರಿಪ್ ಹೋಗುವವರು ಮಿಸ್ ಮಾಡಲೇಬಾರದು.ಇಲ್ಲಿ ನೀವು ಟ್ರೆಕ್ಕಿಂಗ್ ಹೋಗಬಹುದು, ರಾಫ್ಟಿಂಗ್ ಮಾಡಬಹುದು ಅಥವಾ ನೀರಿನಲ್ಲಿ ಆಟಗಳನ್ನು ಆಡಿ ಆನಂದಿಸಬಹುದು. ಈ ಸ್ಥಳವು ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಚಾರಣಿಗರನ್ನು ಆಕರ್ಷಿಸುತ್ತದೆ.
ಪುದುಚೇರಿ:
ಏಕಾಂಗಿ ಪ್ರವಾಸಕ್ಕೆ ಪುದುಚೇರಿ ಒಂದು ಸುಂದರ ಸ್ಥಳವಾಗಿದೆ. ಪುದುಚೇರಿಯು 1954 ರವರೆಗೆ ಫ್ರೆಂಚ್ ವಸಾಹತುಗಳನ್ನು ಹೊಂದಿತ್ತು. ಆ ಕಾಲದ ಕಟ್ಟಡಗಳು ಈಗಿನ ಪುದುಚೇರಿಯ ಪ್ರಮುಖ ಆಕರ್ಷಣೆ. ಸಮುದ್ರ ತಟದ ಈ ಸುಂದರ ಪಟ್ಟಣ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ದರಂತೂ ಈ ಸ್ಥಳ ನಿಮಗೆ ಇಷ್ಟವಾಗೋದು ಖಂಡಿತಾ.
ರಿಷಿಕೇಶ:
ಏಕಾಂಗಿ ಪ್ರಯಾಣಕ್ಕೆ ರಿಷಿಕೇಶ ಅದ್ಭುತವಾದ ಸ್ಥಳವಾಗಿದೆ. ಹೃಷಿಕೇಶವು ಪ್ರಸ್ತುತ ರಿಷಿಕೇಶ ಎಂದು ಕರೆಯಲ್ಪಡುತ್ತಿದ್ದು, ಉತ್ತರಾಖಂಡದ ಹರಿದ್ವಾರಕ್ಕೆ ಸಮೀಪದಲ್ಲಿದೆ. ಗಂಗಾ ನದಿಯ ತೀರದಲ್ಲಿರುವ ಈ ಪ್ರದೇಶವು ಏಕಾಂತವನ್ನು ಆಸ್ವಾದಿಸುವವರಿಗೆ ಉತ್ತಮ ಸ್ಥಳವಾಗಿದೆ.
ಮನಾಲಿ:
ಮನಾಲಿ ಒಂದು ಜನಪ್ರಿಯ ಗಿರಿಧಾಮವಾಗಿದ್ದು, ಸೋಲೋ ಟ್ರಿಪ್ಗೂ ಉತ್ತಮ ಸ್ಥಳವಾಗಿದೆ. ಇದು ಪಿರ್ ಪಂಜಾಲ್ ಶ್ರೇಣಿ ಮತ್ತು ಧೌಲಾಧರ್ ಪರ್ವತ ಶ್ರೇಣಿಯ ಹಿಮದಿಂದ ಆವೃತವಾಗಿದೆ. ನಿಮ್ಮ ಪ್ರವಾಸವನ್ನು ಅದ್ಭುತವಾಗಿಸುವ ಎಲ್ಲವೂ ಇಲ್ಲಿದೆ. ವಸ್ತುಸಂಗ್ರಹಾಲಯಗಳು, ದೇವಾಲಯಗಳು ಮತ್ತು ಚಾರಣದಿಂದ ನೀವು ಇಲ್ಲಿ ಉತ್ತಮವಾದ ಸಮಯವನ್ನು ಕಳೆಯಬಹುದು.
ಉದಯಪುರ:
ರಾಜಸ್ಥಾನದ ಉದಯಪುರವು ಸುಂದರವಾದ ಅರಾವಳಿ ಬೆಟ್ಟಗಳಿಂದ ಆವೃತವಾಗಿದೆ. ಇದು ಅನೇಕ ಸರೋವರಗಳನ್ನು ಹೊಂದಿದ್ದು, ಇದನ್ನು ಸರೋವರಗಳ ನಗರವನ್ನಾಗಿಸಿದೆ. ಬೆರಗುಗೊಳಿಸುವ ವಾಸ್ತುಶಿಲ್ಪ ಕಲೆ, ಸುಂದರವಾದ ದೇವಾಲಯಗಳು ಮತ್ತು ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ ಉದಯಪುರ ಹೊಂದಿದೆ. ಈ ನಗರದಲ್ಲಿನ ಭವ್ಯವಾದ ಪುರಾತನ ಕೋಟೆಗಳು ಮತ್ತು ಮಾರುಕಟ್ಟೆಗಳಿಗೆ ಭೇಟಿ ನೀಡುವುದು ಅಥವಾ ಸರೋವರದ ಬಳಿ ಕುಳಿತು ಬಿಸಿ ಚಹಾವನ್ನು ಹೀರುವುದು ಮೊದಲಾದ ಚಟುವಟಿಕೆಗಳನ್ನು ಮಾಡುತ್ತಾ, ನಿಮ್ಮ ‘ಸೋಲೋ ಟ್ರಿಪ್’ ಅನ್ನು ಮತ್ತಷ್ಟು ಆನಂದದಾಯಕವಾಗಿಸಬಹುದು.
ಇದನ್ನೂ ಓದಿ:
ವೀಕೆಂಡ್ ಟ್ರಿಪ್ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ
ಪ್ರವಾಸಕ್ಕೆ ತೆರಳುವ ಆಲೋಚನೆ ಇದ್ದರೆ ಕೊಡಗಿನ ಈ 15 ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ