ಪ್ರತಿನಿತ್ಯ ಒಂದೇ ರೀತಿಯ ಸಾಂಬಾರ್ ಅಥವಾ ಅಡುಗೆ (Cooking) ಮಾಡಿ ಬೇಸರವಾದಾಗ ಹೊಟೇಲ್ಗೆ ಹೋಗೋಣ ಎನ್ನಿಸುವುದು ಸಹಜ. ಆದರೆ ಈಗ ಕೊರೊನಾ ಕಾಲ ಹೊಟೆಲ್ಗಳಿಗೆ ಹೋಗಿ ತಿನ್ನುವುದು ಅಷ್ಟು ಸುರಕ್ಷಿತವಲ್ಲ ಹೀಗಾಗಿ ಆದಷ್ಟು ಮನೆಯಲ್ಲಿಯೇ ಹೊಸ ರುಚಿಯ ಆಹಾರ (Food) ತಯಾರಿಸಿ ಸೇವಿಸಿ. ಅದು ಶುದ್ಧವಾಗಿಯೂ ಪೌಷ್ಟಿಕವಾಗಿಯೂ ಇರುತ್ತದೆ. ಮನೆಯಲ್ಲಿರುವ ಕಾಳು ಮೆಣಸು, ನಿಂಬು (Lemon) ತೊಗರಿ ಬೇಳೆ, ಶುಂಠಿ, ಟೊಮೇಟೋದಂತಹ ಪದಾರ್ಥಗಳ ಮೂಲಕ ಸರಳವಾಗಿ ರುಚಿಯಾದ ಪದಾರ್ಥ ತಯಾರಿಸಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಸಿಂಪಲ್ ಆಗಿ ಶುಂಠಿ, ನಿಂಬು ಸೇರಿಸಿ ರಸಂ ಮಾಡುವ ವಿಧಾನ…
ಬೇಕಾಗುವ ಸಾಮಗ್ರಿ
2 ಕಪ್ ತೊಗರಿಬೇಳೆ
2 ಚಮಚ ತುಪ್ಪ ಮತ್ತು ಕರಿಮೆಣಸು
1 ಚಮಚ ಸಾಸಿವೆ, ಜೀರಿಗೆ
1 ನಿಂಬೆ ಹಣ್ಣು, ಟೊಮೇಟೋ
3 ಚುಂಠಿ ಚೂರುಗಳು
6 ಹಸಿಮೆಣಸಿನಕಾಯಿ
ಅಗತ್ಯಕ್ಕೆ ತಕ್ಕಷ್ಟು ಅರಿಶಿನ, ಉಪ್ಪು
ಮಾಡುವ ವಿಧಾನ
ಮೊದಲು ಅರ್ಧಗಂಟೆ ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಕುಕ್ಕರ್ಗೆ ಹಾಕಿ, ಚಿಟಿಕೆ ಅರಿಶಿನ ಸೇರಿಸಿ 5 ಸೀಟಿ ಕೂಗಿಸಿ, ಮೃದುವಾಗಿ ಬೇಯಿಸಿಕೊಳ್ಳಿ. ಇನ್ನೊಂದೆಡೆ ಕರಿಮೆಣಸು, ಜೀರಿಗೆ ಸೇರಿಸಿ ಹುರಿದು ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಸಾಸಿವೆ, ಜೀರಿಗೆ ಕತ್ತರಿಸಿಕೊಂಡ ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ಅದಕ್ಕೆ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಬೇಯಿಸಿಟ್ಟ ತೊಗರಿಬೇಳೆಯನ್ನು ಹಾಕಿ ಮಿಶ್ರಣ ಮಾಡಿ ನಂತರ ಅದಕ್ಕೆ ಒರಟಾಗಿ ರುಬ್ಬಿಕೊಂಡ ಜೀರಿಗೆ, ಕರಿಮೆಣಸಿನ ಕಾಳನ್ನು ಹಾಕಿ ಕುದಿಸಿ. 5 ನಿಮಿಷ ಕುದಿಸಿದ ಬಳಿಕ ಉಪ್ಪು, ನಿಂಬೆ ರಸ ಹಾಕಿ 5 ನಿಮಿಷ ಲೋ ಪ್ಲೇಮ್ನಲ್ಲಿಡಿ. ನಂತರ ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ನಿಂಬೆ ಶುಂಠಿ ರಸಂ ಸವಿಯಲು ಸಿದ್ಧ.
ಇದನ್ನೂ ಓದಿ:
Published On - 1:28 pm, Tue, 8 February 22