
ಆಗಸ್ಟ್ 6, 1945 ಮಾನವ ಇತಿಹಾಸದಲ್ಲಿ ಒಂದು ಕರಾಳ ದಿನ. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಿನ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಜಪಾನಿನ ಹಿರೋಷಿಮಾ (Hiroshima) ನಗರದ ಮೇಲೆ ಪರಮಾಣು ಬಾಂಬ್ ದಾಳಿಯನ್ನು ನಡೆಸಿತು. ಈ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಇಡೀ ನಗರವು ಕ್ಷಣಗಳಲ್ಲಿ ಬೆಂಕಿಯಲ್ಲಿ ಆವರಿಸಿತು. ಸರಿಸುಮಾರು 70,000 ಜನರು ಕ್ಷಣದಲ್ಲೇ ಸಾವನ್ನಪ್ಪಿದರು. ಈ ದಾಳಿ ನಡೆದ ಮೂರು ದಿನಗಳ ನಂತರ, ಅಮೆರಿಕ ಫ್ಯಾಟ್ ಮ್ಯಾನ್ ಎಂಬ ಪರಮಾಣು ಬಾಂಬ್ ಅನ್ನು ನಾಗಸಾಕಿಯ ಮೇಲೆ ಹಾಕಿತು. ಈ ದಾಳಿ ಎಷ್ಟ್ರು ತೀವ್ರವಾಗಿತ್ತೆಂದರೆ ಸಾವಿರಾರು ಕಟ್ಟಡಗಳು ಕ್ಷಣಾರ್ಧದಲ್ಲಿ ಬೂದಿಯಾದವು, ಸುಮಾರು 74,000 ಜನರು ಸಾವನ್ನಪ್ಪಿದರು. ಈ ಕರಾಳ ಘಟನೆ ಹಾಗೂ ಆ ಸಮಯದಲ್ಲಿ ಸಾವನ್ನಪ್ಪಿದ್ದ ಮುಗ್ಧ ಜೀವಗಳ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ. ಹಿರೋಷಿಮಾ ದಿನವು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವ ದಿನವಲ್ಲ, ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಪರಿಣಾಮಗಳ ಬಗ್ಗೆ ಜಗತ್ತಿಗೆ ಸಂದೇಶವನ್ನು ಸಾರುವ ದಿನವಾಗಿದೆ.
ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 6, 1945 ರಂದು ಅಮೆರಿಕ ಜಪಾನಿನ ಹಿರೋಷಿಮಾ ನಗರದ ಮೇಲೆ ನಡೆದ ಪರಮಾಣು ಬಾಂಬ್ ದಾಳಿ ನಡೆಸಿತು. ಯುನೈಟೆಡ್ ಸ್ಟೇಟ್ಸ್ ಜಪಾನಿನ ಹಿರೋಷಿಮಾ ನಗರವನ್ನು ಗುರಿಯಾಗಿಸಿಕೊಂಡು ಎನೋಲಾ ಗೇ ವಿಮಾನದಿಂದ ಲಿಟಲ್ ಬಾಯ್ ಎಂಬ ಪರಮಾಣು ಬಾಂಬ್ ಅನ್ನು ಹಾಕಿತು. ಕೆಲವೇ ಸೆಕೆಂಡುಗಳಲ್ಲಿ, ಇಡೀ ಹಿರೋಷಿಮಾ ನಗರವೇ ನಾಶವಾದವು. ಸಾವಿರಾರು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಲಕ್ಷಾಂತರ ಜನರು ಗಾಯಗೊಂಡರು. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಪ್ರಮುಖ ಕಟ್ಟಡಗಳು ಭೀಕರವಾಗಿ ನಾಶವಾದವು. ಈ ದಾಳಿಯ ಮೂರು ದಿನಗಳ ನಂತರ, ನಾಗಸಾಕಿಯ ಮೇಲೆ ಎರಡನೇ ಪರಮಾಣು ಬಾಂಬ್ ದಾಳಿ ನಡೆಸಲಾಯಿತು.
ಲಿಟಲ್ ಬಾಯ್ ಎಂಬ ಹೆಸರು ಕೇಳಲು ಚಿಕ್ಕದಾಗಿದ್ದರೂ, ಇದರ ಶಕ್ತಿ ಮಾತ್ರ ವಿನಾಶಕಾರಿಯಾಗಿತ್ತು. ಈ ಪರಮಾಣು ಬಾಂಬ್ ಯುರೇನಿಯಂ-235 ಅನ್ನು ಆಧರಿಸಿದ ಬಾಂಬ್ ಆಗಿತ್ತು. ಇದು ಸರಿಸುಮಾರು 4,400 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಪರಮಾಣು ಅಸ್ತ್ರವು 15 ಕಿಲೋಟನ್‌ಗಳಷ್ಟು ಟಿಎನ್‌ಟಿಗೆ ಸಮಾನವಾದ ಶಕ್ತಿಯನ್ನು ಹೊಂದಿತ್ತು. ಈ ಭಯಾನಕ ದಾಳಿಯು ತಕ್ಷಣವೇ ಇಡೀ ಹಿರೋಷಿಮಾ ನಗರಗಳನ್ನು ಬೂದಿ ಮಾಡಿತು. ಈ ಅಣುಬಾಂಬ್‌ನ ವಿಕಿರಣದಿಂದಾಗಿ ಗಾಳಿ ಮತ್ತು ನೀರು ಸಂಪೂರ್ಣವಾಗಿ ವಿಷಪೂರಿತವಾಗಿತ್ತು. ಪರಮಾಣು ದಾಳಿಯ ನಂತರ, 30 ಕಿಲೋಮೀಟರ್ ಪ್ರದೇಶದಲ್ಲಿ ಕಪ್ಪು ಮಳೆ ಸುರಿಯಿತು.
ಇದನ್ನೂ ಓದಿ: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಅಂದು ಪರಮಾಣು ದಾಳಿಗೆ ತುತ್ತಾಗಿ ನಲುಗಿ ಹೋಗಿದ್ದ ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಇಂದು ಅಭಿವೃದ್ಧಿ ಹೊಂದಿದ ನಗರಗಳಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿವೆ. ಅಭಿವೃದ್ಧಿಯ ಮೂಲಕವೇ ಜಪಾನ್ ತನ್ನ ಶಕ್ತಿಯನ್ನು ಜಗತ್ತಿಗೆ ಸಾರಿದೆ. ಹಿರೋಷಿಮಾ ನಗರವು ಜಪಾನ್‌ನ ಅತಿದೊಡ್ಡ ದ್ವೀಪವಾದ ಹೊನ್ಶುನಲ್ಲಿದೆ. ಪರಮಾಣು ಬಾಂಬ್ ದಾಳಿಯಿಂದ ನಗರವು ಧ್ವಂಸಗೊಂಡಿತು. ಇಂದು, ಇದು ಸುಂದರವಾದ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ನಗರವಾಗಿ ವಿಕಸನಗೊಂಡಿದೆ. ನಗರವು ಅಸ್ಟ್ರಾಮ್ ಲೈನ್, ಸೀನೋ ಲೈನ್ ಮತ್ತು ರೈಲು ಸೇವೆಗಳನ್ನು ಹೊಂದಿದೆ. ಆಧುನಿಕ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ಪ್ರಮುಖ ಕಂಪನಿಗಳು ಅಲ್ಲಿ ನೆಲೆಗೊಂಡಿವೆ. ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿರೋಷಿಮಾವು ಸುಂದರವಾದ ವಿಮಾನ ನಿಲ್ದಾಣವನ್ನು ಸಹ ಹೊಂದಿದೆ.ಶಾಂತಿ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಸಹ ನಿರ್ಮಿಸಲಾಗಿದ್ದು, ಇವು ಪರಮಾಣು ಬಾಂಬ್ ದಾಳಿಯಿಂದ ಉಂಟಾದ ವಿನಾಶವನ್ನು ಜನರಿಗೆ ನೆನಪಿಸುತ್ತಲೇ ಇದೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ