Home Remedies for Fever : ಜ್ವರ ಬಂದ್ರೆ ಅಡುಗೆ ಮನೆಯಲ್ಲಿದೆ ಔಷಧಿ
ಹವಾಮಾನದಲ್ಲಾಗುವ ಬದಲಾವಣೆ ಯಿಂದ ಸಾಮಾನ್ಯವಾಗಿ ಜ್ವರ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಜ್ವರ ಎನ್ನುವುದು ದೊಡ್ಡ ಕಾಯಿಲೆಯೇನಲ್ಲ. ಆದರೆ ಜ್ವರ ಬಂದಾಗ ಕಾಳಜಿ ವಹಿಸದೇ ಸರಿಯಾದ ಚಿಕಿತ್ಸೆಯನ್ನು ಪಡೆಯದೇ ಹೋದಲ್ಲಿ ಅದು ಗಂಭೀರ ಸ್ವರೂಪವನ್ನು ಪಡೆದುಕೊಳ್ಳಬಹುದು. ಜ್ವರ ಬಂದ ತಕ್ಷಣಕ್ಕೆ ವೈದ್ಯರ ಬಳಿ ಹೋಗದೆ ಮನೆಯಲ್ಲಿಯೇ ಸಿಗುವಂತಹ ಮನೆಮದ್ದು ಗಳನ್ನು ಬಳಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಆರೋಗ್ಯವು ಚೆನ್ನಾಗಿದ್ದರೆ ಆ ದಿನ ಲವಲವಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಸ್ವಲ್ಪ ನಮ್ಮ ದೇಹದಲ್ಲಿ ವ್ಯತ್ಯಾಸವಾದರೂ ಕೂಡ ಊಟ ತಿಂಡಿ ಏನು ಬೇಡ ಎಂದೇನಿಸುತ್ತದೆ. ಕೆಲವೊಮ್ಮೆ ಹವಾಮಾನ ಬದಲಾವಣೆ, ವೈರಲ್ ಫೀವರ್ ಸೇರಿದಂತೆ ನಾನಾ ಕಾರಣದಿಂದ ಕಾಡುವ ಜ್ವರದಿಂದ ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕು. ಈ ಸಮಯದಲ್ಲಿ ಊಟ ತಿಂಡಿ ಸೇರುವುದೇ ಇಲ್ಲ, ಮಲಗಿದರೂ ನಿದ್ದೆ ಬರುವುದೇ ಇಲ್ಲ. ಹಾಗೆ ಕಡಿಮೆಯಾಗುತ್ತದೆ ಎಂದು ಚಿಕಿತ್ಸೆಯನ್ನು ಪಡೆಯದೇ ಹೋದರೆ ಆರೋಗ್ಯವು ಮತ್ತಷ್ಟು ಹದಗೆಡಬಹುದು. ಹೀಗಾಗಿ ಆರಂಭದಲ್ಲಿಯೇ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಜ್ವರದಿಂದ ಪಾರಾಗುವುದು ಸುಲಭ ಉಪಾಯವಾಗಿದೆ.
- ಒಂದು ಲೋಟ ಕುದಿಯುವ ನೀರಿಗೆ ಒಂದು ಚಮಚದಷ್ಟು ಸಾಸಿವೆ ಸೇರಿಸಿ ಐದತ್ತು ನಿಮಿಷಗಳ ಬಳಿಕ ಸೋಸಿ, ಈ ನೀರನ್ನು ಕುಡಿಯುವುದರಿಂದ ಜ್ವರವು ನಿವಾರಣೆಯಾಗುತ್ತದೆ.
- ಜ್ವರಯಿದ್ದರೆ ದಂಟಿನ ಸೊಪ್ಪಿನ ಸಾರನ್ನು ಸೇವಿಸಿದರೆ ಗುಣಮುಖವಾಗುತ್ತದೆ.
- ತುಳಸಿರಸದಲ್ಲಿ ಕಾಳುಮೆಣಸನ್ನು ಅರೆದು, ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
- ತುಳಸಿರಸಕ್ಕೆ ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ ಸೇವಿಸುವುದು ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
- ಅಳಲೆಕಾಯಿಯನ್ನು ಶುಂಠಿ ರಸದಲ್ಲಿ ತೇಯ್ದು ತಯಾರಿಸಿದ ಗಂಧವನ್ನು ಜೇನುತುಪ್ಪದಲ್ಲಿ ಬೆರೆಸಿ, ನಾಲಿಗೆ ಮೇಲೆ ಲೇಪಿಸುತ್ತಿದ್ದರೆ ಜ್ವರ ತಾಪಮಾನವು ಕಡಿಮೆಯಾಗುತ್ತದೆ.
- ಮೆಣಸಿನ ಕಾಯಿಯ ಕಷಾಯ ಮಾಡಿ, ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸುವುದರಿಂದ ಜ್ವರ ನಿಲ್ಲುತ್ತದೆ.
- ಬೇವಿನ ಮರದ ಒಣ ತೊಗಟೆಯನ್ನು ನೀರಿನಲ್ಲಿ ಕುದಿಸಿ, ಪ್ರತಿದಿನವೂ ಈ ನೀರನ್ನು ಸೇವಿಸುತ್ತಿದ್ದರೆ ಜ್ವರಕ್ಕೆ ಉತ್ತಮ ಔಷಧಿಯಾಗಿದೆ.
- ತುಳಸಿ ಎಲೆಗಳು ಹಾಗೂ ತುರಿದ ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ, ಅದಕ್ಕೆ ಜೇನು ಬೆರೆಸಿ ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಜ್ವರವು ಶಮನವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಒಣದ್ರಾಕ್ಷಿಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು, ಆ ದ್ರಾಕ್ಷಿಗಳನ್ನು ಹಿಂಡಿ ರಸ ತೆಗೆದು ಅದಕ್ಕೆ ಜೇನು ತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಸೇವಿಸುವುದು ಉತ್ತಮ.
- ಒಂದು ಎಸಳು ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಜಜ್ಜಿ, ಬಿಸಿ ನೀರಿನಲ್ಲಿ ಬೆರೆಸಿ ಸ್ವಲ್ಪ ಸಮಯದ ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಜ್ವರವು ಕಡಿಮೆಯಾಗುತ್ತದೆ.
- ಒಂದು ಕಪ್ ಬಿಸಿ ನೀರಿಗೆ ಹಸಿಶುಂಠಿಯನ್ನು ಜಜ್ಜಿ ಬೆರೆಸಿ, ಸ್ವಲ್ಪ ಸಮಯ ಬಿಟ್ಟು ಆ ಶುಂಠಿ ನೀರಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಜ್ವರವು ಗುಣಮುಖವಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ