
ಅನೇಕ ಜನರು ಕಸದ ಗಾಡಿಗಳಿಗೆ ಕಸ (garbage) ನೀಡುವ ಬದಲು ರಸ್ತೆ ಬದಿ ಅಥವಾ ಯಾರದ್ದೋ ಮನೆಯ ಬಳಿ ಖಾಲಿ ಜಾಗದಲ್ಲಿ ಕಸ ಎಸೆದು ಅನಾಗರೀಕರಂತೆ ವರ್ತಿಸುತ್ತಾರೆ. ಎಷ್ಟೇ ಎಚ್ಚರಿಕರ ಕೊಟ್ಟರು ಅನೇಕ ಮಂದಿ ಇದೇ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇವರ ಈ ತಪ್ಪುಗಳಿಂದ ಸುತ್ತಮುತ್ತಲಿನ ಸಂದರ ಪರಿಸರವೇ ಹಾಳಾಗಿಬಿಡುತ್ತದೆ. ನಿಮ್ಮ ಅಕ್ಕಪಕ್ಕದ ಮನೆಯವರು ಸಹ ನಿಮ್ಮ ಖಾಲಿ ಜಾಗದಲ್ಲಿ ಕಸ ಎಸೆದು ಹೋಗ್ತಾರಾ? ಈ ಸಮಸ್ಯೆಯಿಂದ ನೀವು ಬೇಸತ್ತಿದ್ದೀರಾ? ಹೀಗೆ ಕಸ ಎಸೆದು ತೊಂದರೆ ನೀಡುವವರ ವಿರುದ್ಧ ಎಲ್ಲಿ ದೂರು ನೀಡಬೇಕು, ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ನೆರೆಹೊರೆಯವರು ನಿಮ್ಮ ಜಾಗದಲ್ಲಿ ಕಸ ಎಸೆದರೆ, ಮೊದಲು ಅವರೊಂದಿಗೆ ಶಾಂತವಾಗಿ ಮಾತನಾಡಿ, ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. ಪದೇ ಪದೇ ಎಚ್ಚರಿಕೆ ನೀಡಿದ್ದರೂ ಅವರು ಅದೇ ತಪ್ಪನ್ನು ಮುಂದುವರೆಸಿದರೆ ನೀವು ಕಠಿಣ ಕ್ರಮ ಕೈಗೊಳ್ಳಬಹುದು.
ನಿಮ್ಮ ಖಾಲಿ ಜಾಗದಲ್ಲಿ ನೆರೆಹೊರೆಯವರು ಕಸ ಸುರಿಯುತ್ತಿರುವ ಬಗ್ಗೆ ನೀವು ಸ್ಥಳೀಯ ಪುರಸಭೆ, ಪಂಚಾಯತ್‌ಗೆ ದೂರು ನೀಡಬಹುದು. ಇದಲ್ಲದೆ ಪ್ರತಿಯೊಂದು ನಗರದಲ್ಲಿಯೂ ನೈರ್ಮಲ್ಯ ಮತ್ತು ಅಕ್ರಮ ತ್ಯಾಜ್ಯ ವಿಲೇವಾರಿಗಾಗಿ ಸಹಾಯವಾಣಿ ಪೋರ್ಟಲ್‌ಗಳು, ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ಈ ಸಹಾಯವಾಣಿ ಪೋರ್ಟಲ್ ಮತ್ತು ಅಪ್ಲಿಕೇಶನ್‌ಗಳ ಮೂಲಕ ನೀವು ಪುರಸಭೆಗೆ ದೂರು ಸಲ್ಲಿಸಬಹುದು. ದೂರು ದಾಖಲಿಸಿದ ನಂತರ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿಶ್ಲೇಷಿಸಿ ಕಸ ಎಸೆದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.
ನೆರೆಹೊರೆಯವರು ನಿಮ್ಮ ಖಾಲಿ ಜಾಗದಲ್ಲಿ ಕಸ ಎಸೆಯುವುದರ ಬಗ್ಗೆ ದೂರು ನೀಡುವಾಗ, ಪುರಾವೆಗಳನ್ನು ಸಂಗ್ರಹಿಸಿ. ಪುರಾವೆಯಾಗಿ ಕಸದ ಫೋಟೋಗಳು ಅಥವಾ ಅವರು ಕಸ ಎಸೆಯುತ್ತಿರುವ ವೀಡಿಯೊಗಳನ್ನು ತೆಗೆದುಕೊಳ್ಳಿ. ಕಸ ಎಸೆಯುವ ಸ್ಥಳ, ದಿನಾಂಕ ಮತ್ತು ಸಮಯವನ್ನು ಸಹ ಗಮನಿಸಿ, ದೂರಿನಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿ. ಈ ರೀತಿಯ ಸಾಕ್ಷ್ಯಗಳಿದ್ದರೆ ಕಸ ಎಸೆಯುವವರಿಗೆ ದಂಡ ವಿಧಿಸಬಹುದು ಮತ್ತು ಪುರಸಭೆಯು ನಿಮ್ಮ ಜಾಗವನ್ನು ಸ್ವಚ್ಛಗೊಳಿಸುವಂತಹ ವ್ಯವಸ್ಥೆಗಳನ್ನೂ ವ್ಯವಸ್ಥೆ ಮಾಡಬಹುದು.
ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವೇ? ಭಾರತೀಯ ಕಾನೂನು ಹೇಳೋದೇನು?
ಕೆಲವೊಮ್ಮೆ ಕಸ ವಿಲೇವಾರಿ ಸಮಸ್ಯೆಗಳು ವೈಯಕ್ತಿಕ ವಿವಾದ, ಅಕ್ಕಪಕ್ಕದ ಮನೆಯವರ ಜಗಳಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಬಹುದು. ದೂರು ನೀಡಿದ ನಂತರವೂ ಪರಿಹಾರ ಸಿಗದಿದ್ದರೆ, ನಿಮ್ಮ ಪ್ರದೇಶದ ಉಪ ವಿಭಾಗ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಚೇರಿಯಲ್ಲಿ ಲಿಖಿತ ದೂರು ದಾಖಲಿಸಬಹುದು. ನಿಮ್ಮ ಆರೋಪಗಳು ನಿಜವೆಂದು ಸಾಬೀತಾದರೆ, ಈ ಕೇಸ್‌ನಲ್ಲಿ ನಿಮ್ಮ ನೆರೆಹೊರೆಯವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ