ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವೇ? ಭಾರತೀಯ ಕಾನೂನು ಹೇಳೋದೇನು?
ಪ್ರೇಮ ವಿವಾಹವೆಂದರೆ ಸಾಕಷ್ಟು ಅಡೆತಡೆಗಳಿರುತ್ತವೆ. ಅನೇಕ ಸಂದರ್ಭದಲ್ಲಿ ಜಾತಿ, ಧರ್ಮ, ಪ್ರತಿಷ್ಠೆಯ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ವಿರೋಧಗಳ ನಡುವೆಯೂ ಮದುವೆಯಾದ ಅದೆಷ್ಟೋ ಜೋಡಿಗಳಿದ್ದಾರೆ. ಆದರೆ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮಿಗಳು ಲವ್ ಮ್ಯಾರೇಜ್ ಆದ್ರೆ ಅದು ತಪ್ಪೇ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಿರಿ.

ನಮ್ಮ ಸಮಾಜದಲ್ಲಿ ಇಂದಿಗೂ ಪ್ರೇಮ ವಿವಾಹಕ್ಕೆ (love marriage) ಸಾಕಷ್ಟು ಅಡೆತಡೆಗಳಿವೆ. ವಿಶೇಷವಾಗಿ ಪೋಷಕರ ವಿರೋಧ. ಹೌದು ಜಾತಿ, ಧರ್ಮ, ಪ್ರತಿಷ್ಠೆ ಹಾಗೂ ಮಗ ಅಥವಾ ಮಗಳು ಲವ್ ಮ್ಯಾರೇಜ್ ಆಗಿದ್ದಾಳೆ ಅಂತ ಸಮಾಜ ಏನನ್ನುತ್ತೋ ಎಂಬ ಕಾರಣಕ್ಕೆ ಅನೇಕ ಸಂದರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳ ಪ್ರೇಮಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ಕೆಲವರು ಪೋಷಕರ ಮಾತಿಗೆ ಮಣಿದು ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರೆ ಇನ್ನೂ ಕೆಲವರು ಪೋಷಕರನ್ನು ಕಷ್ಟಪಟ್ಟು ಒಪ್ಪಿಸಿ ಇಲ್ಲವೇ ವಿರೋಧದ ನಡುವೆಯೂ ಮದುವೆಯಾಗುತ್ತಾರೆ. ನಮ್ಮ ಭಾರತದಲ್ಲಿ ಲವ್ ಮ್ಯಾರೇಜ್ ಆಗುವ ಜೋಡಿ ಕಡ್ಡಾಯವಾಗಿ ಪೋಷಕರ ಒಪ್ಪಿಗೆಯನ್ನು ಪಡೆಯಲೇಬೇಕೇ? ಪಾಲಕರ ಒಪ್ಪಿಗೆಯಿಲ್ಲದೆ ಮದುವೆಯಾಗೋದು ತಪ್ಪೇ? ಈ ಪ್ರೇಮ ವಿವಾಹದ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ನೋಡಿ.
ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿದೆಯೇ?
ಭಾರತೀಯ ಕಾನೂನಿನ ಪ್ರಕಾರ, ಮದುವೆಗೆ ಕಾನೂನುಬದ್ಧ ವಯಸ್ಸು ಇದೆ. ಮದುವೆಯಾಗುವ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. 18 ವರ್ಷ ವಯಸ್ಸು ಮೇಲ್ಪಟ್ಟವರು ತಮ್ಮ ಸ್ವಂತ ಇಚ್ಛೆಯಂತೆ ತಾವು ಬಯಸಿದವರೊಂದಿಗೆ ಮದುವೆಯಾಗಬಹುದು. ಇದಕ್ಕೆ ಪೋಷಕರ ಒಪ್ಪಿಗೆ ಬೇಕೆಂದಿಲ್ಲ.
ವಿಶೇಷ ವಿವಾಹ ಕಾಯ್ದೆ, 1954 ರ ಪ್ರಕಾರ, ವಿವಿಧ ಜಾತಿಗಳು, ಧರ್ಮಗಳು ಅಥವಾ ಸಮುದಾಯಗಳ ಜನರು ಕಾನೂನುಬದ್ಧವಾಗಿ ಮದುವೆಯಾಗಬಹುದು. ಈ ಕಾಯ್ದೆಯಡಿಯಲ್ಲಿ, ಮದುವೆಗೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ. ಮದುವೆಯ ನೋಟೀಸ್ ನೀಡುವುದು ಮತ್ತು ರಿಜಿಸ್ಟ್ರರ್‌ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಿದೆ.
ಪೋಷಕರ ಒಪ್ಪಿಗೆ ಅಗತ್ಯವಿಲ್ಲ:
ಸಾಮಾಜಿಕ ಕಾರಣಗಳು ಅಥವಾ ಕೌಟುಂಬಿಕ ಕಾರಣದಿಂದಾಗಿ ಪೋಷಕರು ಹಲವು ಬಾರಿ ಪ್ರೇಮ ವಿವಾಹವನ್ನು ವಿರೋಧಿಸುತ್ತಾರೆ. ಆದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಭಾರತದ ಸಂವಿಧಾನದ ಅಡಿಯಲ್ಲಿ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಸಹ ಈ ವಿಷಯವನ್ನು ಹಲವು ಬಾರಿ ಸ್ಪಷ್ಟಪಡಿಸಿವೆ.
ಕಾನೂನಿನ ಪ್ರಕಾರ ಪ್ರೇಮ ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯವಿಲ್ಲದಿದ್ದರೂ, ಕುಟುಂಬದ ಬೆಂಬಲ ಮತ್ತು ಹಿರಿಯರ ಆಶೀರ್ವಾದ, ಸಲಹೆ ದಾಂಪತ್ಯ ಜೀವನ ಸುಖವಾಗಿ ಮುಖ್ಯವೆಂದು ಹೇಳಲಾಗುತ್ತದೆ. ಪೋಷಕರು ಪ್ರೇಮ ವಿವಾಹಕ್ಕೆ ಸಿದ್ಧರಿಲ್ಲದಿದ್ದರೆ, ದಂಪತಿಗಳಿಗೆ ಕಾನೂನುಬದ್ಧ ಆಯ್ಕೆಗಳಿವೆ. ಅವರು ನ್ಯಾಯಾಲಯದ ಮೂಲಕ (ಕೋರ್ಟ್ ಮ್ಯಾರೇಜ್) ವಿವಾಹ ಮಾಡಿಕೊಂಡು ಕಾನೂನುಬದ್ಧವಾಗಿ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ: ಮದುವೆಯಾಗಿದ್ದರೂ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ?
ಭಾರತದಲ್ಲಿ, ಪ್ರೇಮ ವಿವಾಹಕ್ಕೆ ಕಾನೂನುಬದ್ಧವಾಗಿ ಪೋಷಕರ ಒಪ್ಪಿಗೆ ಅಗತ್ಯವಿಲ್ಲ, ಆದರೆ ಪ್ರೇಮ ವಿವಾಹವಾಗಲು ಹುಡುಗನಿಗೆ 21 ವರ್ಷ ಮತ್ತು ಹುಡುಗಿಗೆ 18 ವರ್ಷ ತುಂಬಿರಬೇಕು. ಆದರೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವುದನ್ನು ಸಮಾಜದಲ್ಲಿ ಯಾರೂ ಒಪ್ಪುವುದಿಲ್ಲ. ಸಾಧ್ಯವಾದರೆ, ಪೋಷಕರ ಸಮ್ಮುಖದಲ್ಲಿ ಮತ್ತು ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗುವುದೇ ಉತ್ತಮ. ಏಕೆಂದರೆ ಪೋಷಕರ ಮಾರ್ಗದರ್ಶನ, ಬೆಂಬಲ ಮತ್ತು ಹಿರಿಯರ ಆಶೀರ್ವಾದ ದಾಂಪತ್ಯ ಜೀವನವನ್ನು ಇನ್ನಷ್ಟು ಬಲಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Tue, 14 October 25








