ಮದುವೆಯಾಗಿದ್ದರೂ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ?
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧದ ಪ್ರಕರಣಗಳು ತೀರಾ ಹೆಚ್ಚಾಗಿವೆ. ಹೌದು ಮದುವೆಯಾಗಿ ಮಕ್ಕಳಿದ್ದರೂ ಪರ ಪುರುಷನ ಜೊತೆ ಸಂಬಂಧ ಇಟ್ಟುಕೊಳ್ಳುವಂತಹದ್ದು, ಮದುವೆಯಾಗಿದ್ದರೂ ವಿವಾಹಿತ ಪುರುಷ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಳ್ಳುವುದು ನಡೆಯುತ್ತಲೇ ಇರುತ್ತವೆ. ಈ ರೀತಿಯ ಅನೈತಿಕ ಸಂಬಂಧವನ್ನು ಕಾನೂನಿನ ಪ್ರಕಾರ ಅಪರಾಧವೆಂದು ಪರಿಗಣಿಸಲಾಗುತ್ತದೆಯೇ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ನೋಡಿ.

ನಮ್ಮ ಸಮಾಜದಲ್ಲಿ, ಮದುವೆ, ಗಂಡ ಹೆಂಡತಿಯ ಸಂಬಂಧವನ್ನು ಪವಿತ್ರ ಬಂಧ, ಜೀವನ ಪರ್ಯಂತ ಇರುವ ಶ್ರೇಷ್ಠ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ವಿವಾಹೇತರ ಸಂಬಂಧಗಳ (extramarital affair) ಪ್ರಕರಣಗಳೇ ಹೆಚ್ಚಾಗಿವೆ. ನಾನಾ ಕಾರಣಗಳಿಂದ ವಿವಾಹಿತ ಪುರುಷ ಅಥವಾ ಮಹಿಳೆ ತಮ್ಮ ಸಂಗಾತಿಗೆ ಪೋಸ ಮಾಡಿ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಆದ್ರೆ ಹೀಗೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ? ಇದಕ್ಕೆ ಏನಾದರೂ ಕಾನೂನಿನ ಪ್ರಕಾರ ಶಿಕ್ಷೆ ಇದ್ಯಾ? ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಅಪರಾಧವೇ?
ಐಪಿಸಿ ಸೆಕ್ಷನ್ 497 ರ ಪ್ರಕಾರ, ಹಿಂದೆ, ವಿವಾಹಿತ ಪುರುಷ ಅಥವಾ ಮಹಿಳೆ ವಿವಾಹೇತರ ಸಂಬಂಧವನ್ನು ಹೊಂದಿದ್ದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತಿತ್ತು ಜೊತೆಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿತ್ತು.ಆದರೆ 2018 ರ ನಂತರ ಈ ಕಾನೂನಿನಲ್ಲಿ ಒಂದಷ್ಟು ಬದಲಾವಣೆಗಳಾದವು. ಮತ್ತು ವಿವಾಹೇತರ ಸಂಬಂಧ ಹೊಂದುವುದು ಅಪರಾಧವಲ್ಲ ಎಂಬ ತೀರ್ಪನ್ನು ನೀಡಲಾಯಿತು.
ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು:
ಸೆಪ್ಟೆಂಬರ್ 2018 ರಲ್ಲಿ, ಸುಪ್ರೀಂ ಕೋರ್ಟ್ ವಿವಾಹೇತರ ಸಂಬಂಧಗಳ ವಿಷಯದ ಕುರಿತು ಒಂದು ಮಹತ್ವದ ತೀರ್ಪನ್ನು ನೀಡಿತು, ಜೋಸೆಫ್ ಶೈನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿತು. ಮತ್ತು ಸಂಬಂಧ ಹೊಂದುವುದು ವೈಯಕ್ತಿಕ ಆಯ್ಕೆಯ ವಿಷಯವಾಗಿರುವುದರಿಂದ ವಿವಾಹೇತರ ಸಂಬಂಧ ಹೊಂದುವುದು ಕ್ರಿಮಿನಲ್ ಅಪರಾಧವಲ್ಲ ಎಂಬ ತೀರ್ಪನ್ನು ನೀಡಿತು.
ಇದರ ಪರಿಣಾಮಗಳೇನು?
ಇದನ್ನು ಅಪರಾಧವೆಂದು ಪರಿಗಣಿಸದಿದ್ದರೂ, ಇದು ಗಂಭೀರ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಯಾಗಿ ಪರಿಣಾಮಗಳನ್ನು ಬೀರಬಹುದು. ಇಂತಹ ಸಂದರ್ಭದಲ್ಲಿ ಗಂಡ ಅಥವಾ ಹೆಂಡತಿಯ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಏಕೆಂದರೆ ಈ ಅಂಶವನ್ನು ವಿಚ್ಛೇದನಕ್ಕೆ ಮಾನ್ಯ ಎಂದು ಪರಿಗಣಿಸಲಾಗಿದೆ. ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 (1) (i) ಅಡಿಯಲ್ಲಿ, ಪತಿ ಅಥವಾ ಪತ್ನಿ ವಿವಾಹೇತರ ಸಂಬಂಧಗಳ ಆಧಾರದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ʼತುಳಸಿʼಯ ವೈಜ್ಞಾನಿಕ ಹೆಸರು 95% ಜನರಿಗೆ ಗೊತ್ತೇ ಇಲ್ಲಾ
ಹಾನಿ ಮತ್ತು ಜೀವನಾಂಶ:
ಪತಿ ಅಥವಾ ಪತ್ನಿಯ ವಿವಾಹೇತರ ಸಂಬಂಧದಿಂದ ಹಾನಿಗೊಳಗಾದ ಸಂಗಾತಿಗಳು ನ್ಯಾಯಾಲಯದಲ್ಲಿ ಪರಿಹಾರವನ್ನು ಕೋರಬಹುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಇದರರ್ಥ ಒಬ್ಬ ಸಂಗಾತಿಯು ತನ್ನ ಗಂಡ/ಹೆಂಡತಿಯ ವಿವಾಹೇತರ ಸಂಬಂಧದ ಕಾರಣದಿಂದಾಗಿ ಮಾನಸಿಕ ಅಥವಾ ಸಾಮಾಜಿಕ ಹಾನಿಯನ್ನು ಅನುಭವಿಸಿದರೆ, ಅವರು ಆರ್ಥಿಕ ಪರಿಹಾರವನ್ನು ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Mon, 6 October 25








