
ಸಾಮಾನ್ಯವಾಗಿ ಹಣ್ಣು ತರಕಾರಿಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದೇ ಸೇವನೆ ಮಾಡುವಂತೆ, ಅನ್ನ ಮಾಡುವ ಮುನ್ನ ಅಕ್ಕಿಯನ್ನು (rice) ಸಹ ಚೆನ್ನಾಗಿ ತೊಳೆಯುತ್ತೇವೆ. ಹೀಗೆ ಅಕ್ಕಿಯನ್ನು ತೊಳೆದು ಅನ್ನ ಬೇಯಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಕ್ಕಿಯನ್ನು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ಅದರಲ್ಲಿರುವ ಧೂಳು, ಕೊಳಕು ಮತ್ತು ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ಹೋಗುತ್ತವೆ. ಆದರೆ ಅಕ್ಕಿಯನ್ನು ಎಷ್ಟು ಬಾರಿ ತೊಳೆದರೆ ಉತ್ತಮ, ಅಕ್ಕಿಯನ್ನು ತೊಳೆಯುವ ಸರಿಯಾದ ವಿಧಾನ ಯಾವುದು ಎಂಬುದು ನಿಮಗೆ ಗೊತ್ತೇ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಅಕ್ಕಿಯನ್ನು ಬೇಯಿಸುವ ಮೊದಲು ಎರಡರಿಂದ ಮೂರು ಬಾರಿ ತೊಳೆದರೆ ಸಾಕು. ಇದಕ್ಕಿಂತ ಹೆಚ್ಚು ಬಾರಿ ತೊಳೆಯುವ ಅಗತ್ಯವಿಲ್ಲ. ಅದನ್ನು ಚೆನ್ನಾಗಿ ತೊಳೆಯುವುದರಿಂದ ಅಕ್ಕಿ ಶುದ್ಧವಾಗುತ್ತದೆ ಮತ್ತು ಬೇಯಿಸಿದ ನಂತರ ಅನ್ನ ಸಹ ರುಚಿಕರವಾಗಿರುತ್ತದೆ. ಒಂದನೇ ಬಾರಿಗೆ ಅಕ್ಕಿಯನ್ನು ತೊಳೆದಾಗ ಅದು ಸಂಗ್ರಹವಾದ ಧೂಳು, ಕೊಳಕು ಮತ್ತು ಕೆಸರನ್ನು ತೆಗೆದುಹಾಕುತ್ತದೆ. ಅಕ್ಕಿಯನ್ನು ಎರಡು ಮತ್ತು ಮೂರನೇ ಬಾರಿ ತೊಳೆದಾಗ ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ ಪಿಷ್ಟ ನಿವಾರಣೆಯಾಗುತ್ತದೆ. ಅಕ್ಕಿಯಲ್ಲಿ ಹೆಚ್ಚುವರಿ ಪಿಷ್ಟವಿದ್ದರೆ, ಅದು ಬೇಯಿಸಿದ ನಂತರ ಒಟ್ಟಿಗೆ ಅಂಟಿಕೊಳ್ಳುತ್ತದೆ. ಎರಡು ಅಥವಾ ಮೂರು ಬಾರಿ ತೊಳೆಯುವುದರಿಂದ ಅಕ್ಕಿ ಜಿಗುಟಾಗುವುದನ್ನು ತಡೆಯುತ್ತದೆ ಮತ್ತು ಅದನ್ನು ಮೃದುವಾಗಿಸುತ್ತದೆ.
ಯಾವಾಗಲೂ ಅಕ್ಕಿಯನ್ನು ತೊಳೆದೇ ಅನ್ನವನ್ನು ಮಾಡಬೇಕು. ಏಕೆಂದರೆ ಅಕ್ಕಿಯು ಜಮೀನಿನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಅಂಗಡಿಯವರೆಗೆ ಹೋಗುವ ಪ್ರಕ್ರಿಯೆಯಲ್ಲಿ ಅಕ್ಕಿ ಬಹಳಷ್ಟು ಕೊಳಕು, ದೂಳು, ಮರಳಿನೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಅದಕ್ಕಾಗಿಯೇ ಅಕ್ಕಿಯನ್ನು ತೊಳೆಯುವುದು ಅತೀ ಅವಶ್ಯಕ. ಇದಲ್ಲದೆ ಪ್ಯಾಕೆಜಿಂಗ್ ಸಮಯದಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳು ಅಕ್ಕಿಯೊಂದಿಗೆ ಮಿಶ್ರಣವಾಗುತ್ತವೆ. ಹೀಗಿರುವಾಗ ಅಕ್ಕಿಯನ್ನು ಅನ್ನ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು ಅವಶ್ಯಕ. ಹೀಗೆ ಮಾಡುವುದರಿಂದ 20 ರಿಂದ 40% ನಷ್ಟು ಅಕ್ಕಿಯಿಂದ ಮೈಕ್ರೋಪ್ಲಾಸ್ಟಿಕ್ ಅಂಶವನ್ನು ಹೋಗಲಾಡಿಸಬಹುದು.
ಅಕ್ಕಿಯನ್ನು ಚೆನ್ನಾಗಿ ತೊಳೆಯುವುದರಿಂದ ಅದರಲ್ಲಿರುವ ಆರ್ಸೆನಿಕ್ ಸಾಂದ್ರತೆಯು ಕಡಿಮೆಯಾಗುತ್ತದೆ. ಆರ್ಸೆನಿಕ್ ನೈಸರ್ಗಿಕವಾಗಿ ಮಣ್ಣು ಮತ್ತು ನೀರಿನಲ್ಲಿ ಕಂಡು ಬರುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಹಾಗಾಗಿ ಅಕ್ಕಿಯಲ್ಲಿ ಕಂಡು ಬರುವ ಇಂತಹ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಚೆನ್ನಾಗಿ ತೊಳೆಯುವುದು ಮುಖ್ಯವಾಗಿದೆ.
ಇದನ್ನೂ ಓದಿ: ಬಾಳೆಹಣ್ಣು ತಿನ್ನಲು ಸೂಕ್ತ ಸಮಯ ಯಾವುವು?
ಅಕ್ಕಿಯನ್ನು ತೊಳೆಯುವುದರಿಂದ ಅದರ ಮೇಲ್ಮೈಯಿಂದ ಕೆಲವು ಸಡಿಲವಾದ ಧೂಳಿನ ಕಣಗಳು ಮತ್ತು ಹೆಚ್ಚುವರಿ ಪಿಷ್ಟ ನಿವಾರಣೆಯಾಗುತ್ತದೆ. ಈ ಸೂಕ್ಷ್ಮ ಕಣಗಳು ಮತ್ತು ಕೊಳೆಗಳು ನಿವಾರಣೆಯಾಗಲು ಅನೇಕರು ಅಕ್ಕಿಯನ್ನು ಗಟ್ಟಿಯಾಗಿ ಉಜ್ಜಿ ತೊಳೆಯುತ್ತಾರೆ. ಈ ರೀತಿ ಬಲವಾಗಿ ಉಜ್ಜುವುದು ಸೂಕ್ತವಲ್ಲ. ಇದರಿಂದ ಅಕ್ಕಿ ಒಡೆಯಬಹುದು ಮತ್ತು ಇದು ಅಕ್ಕುಯ ವಿನ್ಯಾಸದ ಮೇಲೆಯೂ ಪರಿಣಾಮ ಬೀರಬಹುದು. ವಿಶೇಷವಾಗಿ ಬೇಯಿಸಿದ ನಂತರ ಅಕ್ಕಿ ಉದುರುದುರಾಗಿ ಮತ್ತು ಮೃದುವಾಗಿರಲು ನೀವು ಬಯಸಿದರೆ, ಅದನ್ನು ನಿಧಾನವಾಗಿ ತೊಳೆಯುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ