Protein-rich Foods: ಒಬ್ಬ ವ್ಯಕ್ತಿಗೆ ಪ್ರತಿದಿನ ಎಷ್ಟು ಪ್ರೋಟೀನ್ ಅಗತ್ಯ? ನೀವು ಸೇವಿಸಬಹುದಾದ ಪ್ರೋಟೀನ್ ಭರಿತ ಆಹಾರಗಳಾವುವು?  

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 06, 2023 | 6:25 PM

ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಬಹಳ ಅವಶ್ಯಕ. ಪ್ರೋಟೀನ್ ಕೊರತೆಯಿಂದಾಗಿ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಿರುವಾಗ ಒಬ್ಬ ವ್ಯಕ್ತಿಗೆ ಎಷ್ಟು ಪ್ರೋಟೀನ್ ಅವಶ್ಯಕತೆಯಿದೆ ಹಾಗೂ ಯಾವೆಲ್ಲ ಆಹಾರವನ್ನು ಸೇವನೆ ಮಾಡುವ ಮೂಲಕ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು ಎಂಬುದನ್ನು ನೋಡೋಣ.

Protein-rich Foods: ಒಬ್ಬ ವ್ಯಕ್ತಿಗೆ ಪ್ರತಿದಿನ ಎಷ್ಟು ಪ್ರೋಟೀನ್ ಅಗತ್ಯ? ನೀವು ಸೇವಿಸಬಹುದಾದ ಪ್ರೋಟೀನ್ ಭರಿತ ಆಹಾರಗಳಾವುವು?  
ಸಾಂದರ್ಭಿಕ ಚಿತ್ರ
Follow us on

ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಬಹಳ ಅವಶ್ಯಕ.  ಅಂತಹ ಪೋಷಕಾಂಶಗಳಲ್ಲಿ ಪ್ರೋಟೀನ್ ಕೂಡಾ ಒಂದು. ಪ್ರೋಟೀನ್ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳಲ್ಲಿ ಒಂದಾಗಿದೆ. ಪ್ರೋಟೀನ್ ಕೊರತೆಯು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಕೊರತೆಯು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ದೇಹದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾದರೆ ಅದು ಚರ್ಮ ಮತ್ತು ಕೂದಲಿನ ಮೇಲೂ ಕೂಡಾ ಪರಿಣಾಮವನ್ನು ಬೀರಬಹುದು. ಹಾಗಾಗಿ ಸ್ನಾಯು, ಕೂದಲು, ಚರ್ಮ ಮತ್ತು ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದ ಪ್ರೋಟೀನ್ ನಮ್ಮ ದೇಹಕ್ಕೆ ಅಗತ್ಯವಿದೆ. ಹಾಗಾದರೆ ಪ್ರತಿನಿತ್ಯ ಒಬ್ಬ ವ್ಯಕ್ತಿಗೆ ಎಷ್ಟು ಪ್ರಮಾಣದ ಪ್ರೋಟೀನ್ ಅಗತ್ಯವಿದೆ ಹಾಗೂ ಪ್ರೋಟೀನ್ ಕೊರತೆಯನ್ನು ನೀಗಿಸಲು ಸೇವಿಸಬಹುದಾದ ಆಹಾರಗಳ ಕುರಿತು ನೋಡೋಣ.

ನಮಗೆ ಪ್ರತಿದಿನ ಎಷ್ಟು ಪ್ರೋಟೀನ್ ಅಗತ್ಯವಿದೆ?

ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ದಿನಕ್ಕೆ ಸಮತೋಲಿತ ಪ್ರಮಾಣದ ಪೋಷಕಾಂಶಗಳ ಅಗತ್ಯವಿದೆ. ದೇಹದಲ್ಲಿ  ಜೀವಕೋಶಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ಪ್ರೋಟೀನ್ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.  ತಜ್ಞರು ಜನರು ತಮ್ಮ ತೂಕದ ಪ್ರತಿ ಕಿಲೋಗ್ರಾಂಗೆ 0.75 ಗ್ರಾಂ ಪ್ರೋಟೀನ್ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಒಬ್ಬ ಪುರುಷನು ದಿನಕ್ಕೆ ಕನಿಷ್ಠ 55 ಗ್ರಾಂ ಪ್ರೋಟೀನ್ ಮತ್ತು ಮಹಿಳೆ 45 ಗ್ರಾಂ ಗಳಷ್ಟು ಪ್ರೋಟೀನ್ ಸೇವನೆ ಮಾಡಬೇಕು.

ಪ್ರೋಟೀನ್ ಅತ್ಯುತ್ತಮ ಮೂಲಗಳು:

ಹಾಲು ಮತ್ತು ಮೊಸರು: ಪ್ರೋಟೀನ್ ಕೊರತೆಯನ್ನು ನೀಗಿಸಲು ನೀವು  ಹಾಲು ಮತ್ತು ಮೊಸರನ್ನು ಸೇವನೆ ಮಾಡಬೇಕು. ಪ್ರತಿದಿನ ಹಾಲು ಕುಡಿಯುವುದರಿಂದ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು. 100 ಗ್ರಾಂ ಹಾಲಿನಲ್ಲಿ ಸುಮಾರು 3.6 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದಲ್ಲದೆ ಮೊಸರು, ಮಜ್ಜಿಗೆ ಅಥವಾ ಲಸ್ಸಿ ಕುಡಿಯುವುದರಿಂದಲೂ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನ್ ದೊರೆಯುತ್ತದೆ.

ಒಣ ಹಣ್ಣುಗಳು: ಪ್ರೋಟೀನ್ ಕೊರತೆಯನ್ನು ನೀಗಿಸಲು ನೀವು ಪ್ರತಿನಿತ್ಯ ಒಣಹಣ್ಣುಗಳನ್ನು ತಿನ್ನಬಹುದು. ಗೋಡಂಬಿ ಮತ್ತು ಬಾದಮಿಯಲ್ಲಿ ಬಹಳಷ್ಟು ಪ್ರೋಟೀನ್ ಕಂಡುಬರುತ್ತದೆ.

ಇದನ್ನೂ ಓದಿ: ತೂಕ ಇಳಿಕೆಗೆ ಸಹಾಯಕವಾಗಲಿದೆ ಅಲೋವೆರಾ; ಈ 4 ವಿಧಾನಗಳ ಬಗ್ಗೆ ಮಾತ್ರ ಇರಲಿ ಗಮನ

ಕಡಲೆಕಾಯಿ: ಕಡಲೆಕಾಯಿಯಲ್ಲಿ ಪ್ರೋಟೀನ್, ಮಿಟಮಿನ್ ಗಳು ಸಮೃದ್ಧವಾಗಿದೆ. ಶೇಂಗಾ ಬೀಜವನ್ನು ತಿನ್ನುವುದರಿಂದ  ದೇಹಕ್ಕೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ದೊರೆಯುತ್ತದೆ. ಹಾಗೂ ಪ್ರೋಟೀನ್ ಕೊರತೆಯನ್ನು ಕೂಡಾ ನೀಗಿಸಬಹುದು.

ಕುಂಬಳಕಾಯಿ ಬೀಜ:  ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪ್ರೋಟೀನ್ನ ಉತ್ತಮ ಮೂಲವಾಗಿದೆ. ಅಲ್ಲದೆ ಇದು ಕಬ್ಬಿಣ, ಮೆಗ್ನೇಸಿಯಂ ಮತ್ತು ಸತುಗಳಂತಹ ಪ್ರಮುಖ ಪೋಷಕಾಂಶಗಳ ಮೂಲವಾಗಿದೆ.

ಮೀನು:  ಮೀನು ಕೂಡಾ ಪ್ರೋಟೀನ್ನ ಅತ್ಯುತ್ತಮ ಮೂಲವಾಗಿದೆ. ಇದು ಅನೇಕ ವಿಧದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಇದಲ್ಲದೆ ಕೋಳಿ, ಮೊಟ್ಟೆ, ಸೋಯಾಬೀನ್, ಬೇಳೆಕಾಳುಗಳು, ನವಣೆ ಸೇರಿದಂತೆ  ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಾಕಷ್ಟು ಪ್ರಮಾಣದ ಪ್ರೋಟಿನ್ ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: