ಕೆಫೀನ್ ಕುಡಿಯದೆ ದೇಹ ಶಕ್ತಿಯನ್ನು ಹೆಚ್ಚಿಸುವುದು ಹೇಗೆ? ತಜ್ಞರು ಸಲಹೆ ಇಲ್ಲಿದೆ
ಅನೇಕ ಜನರು ದಿನಪೂರ್ತಿ ಸಕ್ರಿಯವಾಗಿರಬೇಕೆನ್ನುವ ಸಲುವಾಗಿ ಅತಿಯಾದ ಕೆಫೀನ್ ಸೇವನೆಯನ್ನು ಮಾಡುತ್ತಾರೆ. ಈ ಕೆಫಿನ್ ಆರೊಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಕೆಫೀನ್ ಬದಲಾಗಿ ನೈಸರ್ಗಿಕವಾಗಿ ದೇಹದ ಶಕ್ತಿಯ ಮಟ್ಟವನ್ನು ಹೇಗೆ ಹೆಚ್ಚಿಸಬಹುದು ಎಂಬ ಕುರಿತ ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ಅವರು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಕೆಲವರಿಗಂತೂ ದಿನದಲ್ಲಿ ಒಂದು ಅಥವಾ ಎರಡು ಕಪ್ ಕಾಫಿ ಕುಡಿಯದಿದ್ದರೆ, ಆ ದಿನ ಪೂರ್ಣವಾಗುವುದಿಲ್ಲ. ಹಾಗಾಗಿ ದಿನಪೂರ್ತಿ ಸಕ್ರಿಯವಾಗಿರಬೇಕು ಎನ್ನುವ ಸಲುವಾಗಿ ಹೆಚ್ಚಿನವರು ಕಾಫಿ, ಟೀ ಗೆ ಅವಲಂಬಿತರಾಗಿರುತ್ತಾರೆ. ಇದು ನಮ್ಮನ್ನು ನಾವು ಜಾಗರೂಕವಾಗಿರಲು ಮತ್ತು ನಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಕೆಫೀನ್ ನಮ್ಮ ದೇಹದ ಹಲವಾರು ಅಂಗಗಳ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇದು ಮೆದುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದು ಅಡೆನೊಸಿನ್ ಪರಿಣಾಮವನ್ನು ಎದುರಿಸಲು ಸಹಾಯ ಮಾಡುತ್ತದೆ. ಅಡೆನೊಸಿಸ್ ದಣಿದ ಭಾವನೆಯನ್ನು ಉಂಟು ಮಾಡುವ ಒಂದು ಅಂಶವಾಗಿದೆ. ಹಾಗಾಗಿ ಕಾಫಿ, ಚಹಾದಂತಹ ಕಫೀನ್ ಪಾನೀಯಗಳನ್ನು ಸೇವಿಸುವುದರಿಂದ ಈ ಆಲಸ್ಯದಿಂದ ದೂರವಿರಬಹುದು. ಇವುಗಳು ನಿಮ್ಮನ್ನು ಜಾಗರೂಕರಾಗಿರುವಂತೆ ಮಾಡುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ ಹಾಗೆಯೇ ಕೆಫೀನ್ ನ ನಿಯಮಿತ ಸೇವನೆ ನಿಮಗೆ ನಿಜವಾಗಿಯೂ ಪ್ರಯೋಜನಕಾರಿಯಾಗಿದೆ. ಆದರೆ ಕೆಫೀನ್ ನ ಅತಿಯಾದ ಸೇವನೆ ಕಿರಿಕಿರಿ, ತಲೆನೋವು, ಚಡಪಡಿಕೆ, ನಿದ್ರಾಹೀನತೆ, ಜೀರ್ಣಕಾರಿ ಸಮಸ್ಯೆಗಳು, ಸ್ನಾಯುಗಲ ನಡುಕ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಕೆಫೀನ್ ಬದಲಾಗಿ ನೈಸರ್ಗಿಕವಾಗಿ ದೇಹ ಶಕ್ತಿಯನ್ನು ಹೆಚ್ಚು ಮಾಡಲು ಕೆಲವೊಂದು ಸಲಹೆಗಳನ್ನು ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ಅವರು ತಿಳಿಸಿದ್ದಾರೆ.
ಕೆಫೀನ್ ಇಲ್ಲದೆ ದೇಹ ಶಕ್ತಿಯನ್ನು ಹೆಚ್ಚಿಸಲು ಇರುವ ಮಾರ್ಗಗಳು:
ಬೆಳಗ್ಗಿನ ಉಪಹಾರಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ: ಪ್ರೋಟೀನ್ ಅಧಿಕವಾಗಿರುವ ಆಹಾರಗಳು ನಿಮ್ಮ ದೇಹಕ್ಕೆ ಸ್ಥಿರವಾದ ಶಕ್ತಿಯನ್ನು ಒದಗಿಸುತ್ತದೆ. ವಿಶೇಷವಾಗಿ ಅವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರೋಟೀನ್ ಸೇವನೆಯನ್ನು ಹೆಚ್ಚಿಸಲು ಮೊಟ್ಟೆ ಮತ್ತು ಮಾಂಸವನ್ನು ಸೇವಿಸುವುದು ಉತ್ತಮ ಮಾರ್ಗವಾಗಿದೆ. ಡೈರಿ ಉತ್ಪನ್ನಗಳು ನಟ್ಸ್ ಗಳಂತಹ ಆಹಾರಗಳನ್ನು ಸೇವಿಬಹುದು.
ದೇಹವನ್ನು ಹೈಡ್ರೇಟೆಡ್ ಆಗಿರಿಸಿ: ಆಹಾರದ ಹೊರತಾಗಿ, ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಮತ್ತು ದ್ರವ ಪದಾರ್ಥ ಅಗತ್ಯವಿರುತ್ತದೆ. ನಿಯಮಿತವಾಗಿ ನೀರನ್ನು ಸೇವಿಸುವುದು ಮುಖ್ಯವಾಗಿರುತ್ತದೆ. ಜೊತೆಗೆ ತೆಂಗಿನ ನೀರು, ಹರ್ಬಲ್ ಟೀ, ಮನೆಯಲ್ಲಿಯೇ ತಯಾರಿಸಿದ ಮಿಲ್ಕ್ ಶೇಕ್ ಗಳು ಮುಂತಾದ ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ಇವುಗಳು ನಿಮಗೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ.
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಿ: ರಕ್ತದಲ್ಲಿನ ಸಕ್ಕರೆಯು ನಮ್ಮ ದೇಹದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ನೀವು ರಕ್ತದಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಮಟ್ಟವನ್ನು ಹೊಂದಿದ್ದರೆ, ಇದು ಶಕ್ತಿಯ ಕೊರತೆಗೆ ಕಾರಣವಾಗಬಹುದು. ಅಧಿಕ ಪ್ರಮಾಣದ ಸಕ್ಕರೆಯ ಮಟ್ಟವು ಆಯಾಸಕ್ಕೆ ಕಾರಣವಾಗಬಹುದು. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಅದಕ್ಕಾಗಿ ಕಾಬ್ರೋಹೈಡ್ರೇಟ್ ಮತ್ತು ಫೈಬರ್ ನಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸಿ.
ಇದನ್ನೂ ಓದಿ: Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ
ವ್ಯಾಯಾಮದೊಂದಿಗೆ ನಿಮ್ಮ ದಿನಚರಿಯನ್ನು ಪ್ರಾರಂಭಿಸಿ: ವ್ಯಾಯಾಮ ಮಾಡುವಾಗ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಇದರಿಂದ ರಕ್ತದ ಹರಿವು ಸುಧಾರಿಸುತ್ತದೆ, ವ್ಯಾಯಾಮವು ಎಂಡಾರ್ಫಿನ್ ಮತ್ತು ಡೋಪಮೈನ್ಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಇದು ನಿಮಗೆ ಚೈತನ್ಯ ಮತ್ತು ಸಂತೋಷವನ್ನು ನೀಡುತ್ತದೆ. ಹೀಗಾಗಿ ವ್ಯಾಯಾಮ ಮಾಡುವ ಮೂಲಕ ನೀವು ದಿನಪೂರ್ತಿ ಸಕ್ರಿಯವಾಗಿರಬಹುದು.
ಬೆಳಗ್ಗೆ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ: ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಅದು ನಮ್ಮನ್ನು ನೈಸರ್ಗಿಕವಾಗಿ ಎಚ್ಚರವಾಗಿರಲು ಮತ್ತು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಯನ್ನು ಒದಗಿಸುವುದು ಮಾತ್ರವಲ್ಲದೆ ಇದು ನಮ್ಮ ದೇಹದ ಮೇಲೆ ಬೀರಬಹುದಾದ ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
Published On - 6:18 pm, Wed, 26 April 23