ತಿನ್ನೋದು ಯಾರಿಗೆ ಇಷ್ಟ ಇಲ್ಲ ಹೇಳಿ, ಇಷ್ಟವಾದ ತಿಂಡಿ ತಿನಿಸುಗಳನ್ನು ಮುಂದೆ ಇಟ್ಟರೆ ಒಂದು ಬಿಡದಂತೆ ತಿನ್ನುವವರಿದ್ದಾರೆ. ಕೆಲವರು ವೈರೆಂಟಿ ವೈರೆಂಟಿ ಆಹಾರಗಳನ್ನು ತಿನ್ನಲು ಇಷ್ಟ ಪಡುತ್ತಾರೆ. ಕೆಲವರಿಗಂತೂ ಸೀ ಫುಡ್ ಗಳೆಂದರೆ ಪಂಚಪ್ರಾಣ. ಕರಾವಳಿಯಲ್ಲಿ ಸಿಗುವಷ್ಟು ಫ್ರೆಶ್ ಆಗಿರುವ, ರುಚಿಕರವಾಗಿರುವ ಸೀ ಫುಡ್ ಗಳು ಬೇರೆಲ್ಲಿಯೂ ಸಿಗುವುದಿಲ್ಲ. ಹೀಗಾಗಿ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿದರೆ ಸೀ ಫುಡ್ ಗಳನ್ನು ಸವಿಯಬಹುದು. ಕರಾವಳಿಗೆ ಬಂದು ಸೀ ಫುಡ್ ಗಳನ್ನು ಸವಿಯಲು ಆಗಿಲ್ಲ ಎನ್ನುವವರು, ಕರಾವಳಿಯ ಶೈಲಿಯ ಒಣ ಮೀನಿನ ಚಟ್ನಿಯನ್ನು ಮನೆಯಲ್ಲಿ ಮಾಡಿ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು: 50 ಗ್ರಾಂ- ಒಣಗಿದ ಮೀನು, ಒಂದು ಚಮಚ ತೆಂಗಿನ ಎಣ್ಣೆ, ಶುಂಠಿ, ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ, ಒಂದು ಚಮಚ ಕೊತ್ತಂಬರಿ ಬೀಜ, ಎರಡು ಕಪ್ ತೆಂಗಿನ ಕಾಯಿ ತುರಿ, ಮೂರು ನಾಲ್ಕು ಬೆಳ್ಳುಳ್ಳಿ ಎಸಳು, ಸ್ವಲ್ಪ ಹುಣಸೆ.
* ಮೊದಲಿಗೆ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಒಣ ಮೀನು ಕಂದು ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿಕೊಳ್ಳಿ. ಮೀನು ಗರಿಗರಿಯಾದ ಬಳಿಕ, ಬಾಣಲೆಯಿಂದ ತೆಗೆದು ತಣ್ಣಗಾಗಲು ಬಿಡಿ.
* ಒಣಮೀನಿನ ಬಾಲ ಹಾಗೂ ತಲೆಯ ಭಾಗವನ್ನು ತೆಗೆದು ಕ್ಲೀನ್ ಮಾಡಿ. (ಬೇಕಿದ್ದರೆ ಒಣಮೀನನ್ನು ಶುದ್ಧ ನೀರಿನಲ್ಲಿ ಒಂದು ಬಾರಿ ತೊಳೆದುಕೊಳ್ಳಿ). ಆ ಬಳಿಕ ಈ ಒಣಮೀನನ್ನು ತುಂಡುಗಳಾಗಿ ಮಾಡಿಟ್ಟುಕೊಳ್ಳಿ.
* ಮಿಕ್ಸಿ ಜಾರಿಗೆ ಸಾಮಗ್ರಿಗಳನ್ನು ಹಾಕಿ ಒಮ್ಮೆ ಗ್ರೈಂಡ್ ಮಾಡಿಕೊಳ್ಳಿ. ರುಬ್ಬಿದ ಮಸಾಲೆಗೆ ತೆಂಗಿನ ತುರಿ ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಿ. (ಮಸಾಲೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಡಿ ).
ಇದನ್ನೂ ಓದಿ:Food Tips: ಬೆಳಗ್ಗೆ ಚಹಾ ಅಥವಾ ಟೀಯ ಬದಲು ಬಾಳೆಹಣ್ಣಿನ ಸೇವನೆ ಉತ್ತಮ: ತಜ್ಞರ ಸಲಹೆ
* ಈ ಮಸಾಲೆಗೆ ಈಗಾಗಲೇ ತುಂಡರಿಸಿಟ್ಟ ಒಣಮೀನನ್ನು ಹಾಕಿ ಮಿಶ್ರಣ ಮಾಡಿದರೆ ಚಟ್ನಿ ರೆಡಿಯಾದಂತೆ. ಒಣಮೀನಿನಲ್ಲಿ ಉಪ್ಪಿನ ಅಂಶವಿರುವ ಕಾರಣ ಬೇಕಿದ್ದರೆ ಮಾತ್ರ ಉಪ್ಪು ಸೇರಿಸಿಕೊಳ್ಳಿ. ಗಂಜಿಯ ಜೊತೆಗೆ ಒಣಮೀನು ಚಟ್ನಿಯನ್ನು ಸವಿಸಿದರೆ ಅದರ ರುಚಿಯೇ ಬೇರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ