AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕಪ್ ಮಾಡಿಕೊಳ್ಳುವ ಮೊದಲ ಈ ವಿಚಾರ ತಿಳಿದಿದ್ದರೆ ಉತ್ತಮ

ಸಂಬಂಧಗಳು ಹೇಗೆ ಬೆಸೆದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ವ್ಯಕ್ತಿಗಳ ಅಭಿರುಚಿಗಳು, ಆಸಕ್ತಿಗಳು ಒಂದೆಯಾಗಿದ್ದಾಗ ಇಬ್ಬರೂ ವ್ಯಕ್ತಿಗಳ ನಡುವೆ ಸ್ನೇಹ ಬೆಳೆದು, ಸಂಬಂಧವು ಪ್ರೀತಿಗೂ ತಿರುಗಿ ಬಿಡಬಹುದು. ಈ ಪ್ರೀತಿಯು ಹೆಚ್ಚು ದಿನ ಬಾಳಿಕೆ ಬಾರದೇ ಇರಬಹುದು. ಇಬ್ಬರೂ ವ್ಯಕ್ತಿಗಳ ನಡುವೆ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ, ಜಗಳಗಳು ತಲೆದೂರಬಹುದು. ಹೀಗಾದಾಗ ಸಂಬಂಧವನ್ನು ಮುರಿಯುವ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಪ್ರೀತಿಯ ಸಂಬಂಧವನ್ನು ಬ್ರೇಕಪ್ ಮಾಡಿಕೊಳ್ಳಬಯಸಿದರೆ ಕೆಲವು ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಬ್ರೇಕಪ್ ಮಾಡಿಕೊಳ್ಳುವುದು ಉತ್ತಮ.

ಬ್ರೇಕಪ್ ಮಾಡಿಕೊಳ್ಳುವ ಮೊದಲ ಈ ವಿಚಾರ ತಿಳಿದಿದ್ದರೆ ಉತ್ತಮ
ಸಾಯಿನಂದಾ
| Edited By: |

Updated on: Jan 17, 2024 | 1:46 PM

Share

ಪ್ರೀತಿಯು ಮಧುರವಾದ ಭಾವ. ಎರಡು ಮನಸ್ಸುಗಳ ಸಮ್ಮಿಲನ. ಪ್ರೀತಿ ಚಿಗುರಲು ಕಾರಣಬೇಕಿಲ್ಲ ಎಂದು ಹೇಳುವುದಿಲ್ಲ. ಅದೇ ರೀತಿ ಪ್ರೀತಿಯು ಮುರಿದು ಬೀಳಲು ಸಣ್ಣ ಪುಟ್ಟ ಕಾರಣಗಳೇ ಸಾಕು. ಪ್ರಾರಂಭದಲ್ಲಿ ಇಷ್ಟವಾಗಿದ್ದ ವ್ಯಕ್ತಿಯ ನಡೆ ನುಡಿಗಳು, ಆಸಕ್ತಿಗಳು ಸಮಯ ಕಳೆದಂತೆ ಇಷ್ಟವಾಗದೇ ಇರಬಹುದು. ಸಣ್ಣ ಪುಟ್ಟ ವಿಷಯಗಳು ಮನಸ್ತಾಪಗಳಿಗೆ ಕಾರಣವಾಗಬಹುದು. ಅದಲ್ಲದೇ ಕೆಲವೊಮ್ಮೆ ವೈಯುಕ್ತಿಕ ಕಾರಣಗಳಿಂದ ಇಬ್ಬರೂ ವ್ಯಕ್ತಿಗಳು ಸಂಬಂಧವನ್ನು ಮುರಿದುಕೊಳ್ಳುವ ಅನಿವಾರ್ಯತೆಯು ಬರಬಹುದು. ಈ ಸಂದರ್ಭದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಗಳ ಜೊತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ ಸಂಬಂಧಕ್ಕೆ ಪೂರ್ಣವಿರಾಮವಿಡುವುದು ಒಳ್ಳೆಯದು.

ಸಂಬಂಧವನ್ನು ಮುರಿದುಕೊಳ್ಳುವ ವೇಳೆಯಲ್ಲಿ ಈ ವಿಚಾರಗಳು ನೆನಪನಲ್ಲಿಡಿ:

ಇಬ್ಬರೂ ಕುಳಿತು ಮಾತನಾಡಿ : ಪ್ರೀತಿಯ ಸಂಬಂಧವನ್ನು ಮುರಿಯುವ ವೇಳೆಯಲ್ಲಿ ಇಬ್ಬರೂ ಮುಖಾ ಮುಖಿಯಾಗಿ ಮಾತನಾಡುವುದು ಒಳ್ಳೆಯದು. ನೀವು ಇಷ್ಟ ಪಟ್ಟ ವ್ಯಕ್ತಿಯನ್ನು ನಿರ್ಲಕ್ಷ್ಯ ಮಾಡುವುದು, ಮೆಸೇಜ್​​​ನಲ್ಲಿ ಸಂಬಂಧವನ್ನು ಮುರಿದುಕೊಳ್ಳುವುದು ಸರಿಯಲ್ಲ. ಹೀಗಾಗಿ ಇಬ್ಬರೂ ಕೂಡ ಪ್ರಾಮಾಣಿಕವಾಗಿ ಸಂಭಾಷಣೆಯನ್ನು ನಡೆಸಿ ಸಂಬಂಧವನ್ನು ಮುರಿದುಕೊಳ್ಳಿ.

ಸ್ಥಳಗಳ ಆಯ್ಕೆಯು ಸರಿಯಾಗಿರಲಿ : ಸಂಬಂಧವನ್ನು ಮುರಿಯುವ ಅಂತಿಮ ಘಟ್ಟದಲ್ಲಿ ಇದ್ದೀರಾ ಎಂದಾದರೆ ಈ ವೇಳೆಯಲ್ಲಿ ನೀವು ಆಯ್ದುಕೊಳ್ಳುವ ಸ್ಥಳವು ಕೂಡ ಮುಖ್ಯವಾಗುತ್ತದೆ. ಶಾಂತವಾದ ಸ್ಥಳವನ್ನು ಆಯ್ದುಕೊಳ್ಳಿ. ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾತುಕತೆಗಳು ಬೇಡ. ಕಡಿಮೆ ಜನರು ಇರುವ ಸ್ಥಳದಲ್ಲಿ ಇಬ್ಬರೂ ಮನಸ್ಸು ಬಿಚ್ಚಿ ಮಾತನಾಡಿದರೆ ಒಳ್ಳೆಯದು.

ಪ್ರಾಮಾಣಿಕ ಸಂವಹನವಿರಲಿ : ಸಂಬಂಧವನ್ನು ಮುರಿದುಕೊಳ್ಳುವ ಸಮಯದಲ್ಲಿ ಪ್ರಾಮಾಣಿಕ ಸಂವಹನವಿರಲಿ. ಇಲ್ಲಿ ಒಬ್ಬರು ಇನ್ನೊಬ್ಬರನ್ನು ದೂಷಿಸಿ ಮಾತನಾಡುವುದು ಬೇಡ. ಅನಗತ್ಯವಾಗಿ ಒಬ್ಬರ ತಪ್ಪುಗಳನ್ನು ಒತ್ತಿಹೇಳಿ ಕೊನೆಯ ಕ್ಷಣದಲ್ಲಿ ಇಬ್ಬರ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡಿ. ಭಾವನೆಗಳನ್ನು ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ಹೇಳಿಬಿಡಿ. ಇದರಿಂದ ಎದುರಿಗಿರುವ ವ್ಯಕ್ತಿಗೂ ನಿಮ್ಮ ಮಾತಿನಿಂದ ನೋವಾಗುವುದಿಲ್ಲ.

ಎದುರಿಗಿರುವ ವ್ಯಕ್ತಿಯ ಮಾತನ್ನು ಆಲಿಸಿ: ಸಂಬಂಧವನ್ನು ಬ್ರೇಕ್ ಮಾಡಿಕೊಳ್ಳುವ ಸಮಯದಲ್ಲಿ ನೀವು ಎಷ್ಟು ಮಾತನಾಡುತ್ತಿರೋ, ಅಷ್ಟೇ ತಾಳ್ಮೆಯಿಂದ ನಿಮ್ಮ ಎದುರಿಗಿರುವ ವ್ಯಕ್ತಿಯು ಮಾತನಾಡುವುದು ಕೇಳುವುದು ಮುಖ್ಯವಾಗುತ್ತದೆ. ಉತ್ತಮ ಕೇಳುಗನಾಗಿರುವುದರಿಂದ ಎದುರಿಗಿರುವ ವ್ಯಕ್ತಿಯು ನಿರಾಳವಾಗಿ ಮಾತನಾಡಬಹುದು. ಅವರ ಮಾತಿಗೆ ಗೌರವ ಕೊಟ್ಟಂತೆ ಆಗುತ್ತದೆ.

ಇದನ್ನೂ ಓದಿ: ಗಂಡನ ಶ್ವಾನಪ್ರೇಮ ಸಹಿಸದೆ ಪತ್ನಿಯೇ ಬಿಟ್ಟು ಹೋದರಂತೆ, ಆದರೆ ನಾಯಿಗಳ ಮೇಲಿನ ಆತನ ಪ್ರೀತಿ ಮತ್ತಷ್ಟು ದೃಢವಾಗಿದೆ

ಸಮಯ ತೆಗೆದುಕೊಂಡು ಮನಸ್ಸು ಬಿಚ್ಚಿ ಮಾತನಾಡಿ : ಸಂಬಂಧವನ್ನು ಮುರಿದುಕೊಳ್ಳುವುದು ಇಬ್ಬರಿಗೂ ಕಠಿಣ ನಿರ್ಧಾರ ಹಾಗೂ ನೋವು ತರುವಂತಹ ವಿಚಾರ. ಹೀಗಾಗಿ ಎದುರಿಗಿರುವ ವ್ಯಕ್ತಿಯ ಜೊತೆಗೆ ನೇರವಾಗಿ ವಿಚಾರ ಹೇಳಿದರೂ ಕೂಡ ನೋವಾಗದಂತೆ ನಡೆದುಕೊಳ್ಳಿ. ಅವಸರ ಮಾಡದೇನೆ ಮಾತಾಡಿ, ಸಂಬಂಧವನ್ನು ಮುರಿದುಕೊಳ್ಳುವ ಹಿಂದಿನ ಕಾರಣವನ್ನು ಸ್ಪಷ್ಟ ಪಡಿಸಿದರೆ ಉತ್ತಮ. ಈ ಸಮಯದಲ್ಲಿ ಇಬ್ಬರೂ ಕೂಡ ಮನಸ್ಸು ಬಿಚ್ಚಿ ಮಾತನಾಡುವುದು ಒಳ್ಳೆಯದು.

ಸುಳ್ಳು ಹೇಳುವುದು ಸರಿಯಲ್ಲ : ಈ ಸಮಯದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯ ಬಳಿ ಸುಳ್ಳು ಹೇಳಿ ಸಂಬಂಧವನ್ನು ಮುರಿದುಕೊಳ್ಳುವುದು ಸರಿಯಲ್ಲ. ನೀವು ಸುಳ್ಳಿ ಹೇಳಿರುವ ವಿಚಾರವು ಮುಂದೊಂದು ದಿನ ತಿಳಿದರೆ ಮತ್ತೆ ನೋವಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ನೀವು ಹೇಳುವ ಸುಳ್ಳು ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕಬಹುದು.

ಕೊನೆಯಲ್ಲೊಂದು ಥ್ಯಾಂಕ್ಸ್ ಇರಲಿ : ಮಾತುಕತೆಯ ಅಂತ್ಯದಲ್ಲಿ ಖುಷಿಯ ಸನ್ನಿವೇಶಗಳನ್ನು ನೆನಪಿಸಿಕೊಂಡು ಹಂಚಿಕೊಳ್ಳಿ. ಜೊತೆಗೆ ಇದ್ದು ಸಾಥ್ ನೀಡಿದ್ದಕ್ಕೆ ಧನ್ಯವಾದ ತಿಳಿಸಿ, ಮುಂದಿನ ಜೀವನಕ್ಕೆ ಶುಭ ಹಾರೈಸಿ. ಖುಷಿಯಿಂದಲೇ ಇಬ್ಬರೂ ದೂರವಾಗುವುದರಿಂದ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: