Colocasia Leaves : ಮಳೆಗಾಲದಲ್ಲಿ ಗಂಜಿ ಜತೆ ಕೆಸುವಿನೆಲೆ ಚಟ್ನಿ ಸೂಪರ್​​, ಅಮ್ಮನ ಕೈರುಚಿ ನೆನಪಿಗೆ ಬರುವುದು ಖಂಡಿತ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2024 | 2:32 PM

ಮಳೆಗಾಲ ಆರಂಭವಾದರೆ ಸಾಕು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸಿನ ಘಮವು ಮೂಗಿಗೆ ಬಡಿಯುತ್ತದೆ. ಈ ಸಮಯದಲ್ಲಿ ಕೆಸುವಿನ ಎಲೆಗೆ ಎಲ್ಲಿಲ್ಲದ ಡಿಮ್ಯಾಂಡ್‌. ಈ ಎಲೆಯಿಂದ ನಾನಾ ಬಗೆಯ ಅಡುಗೆಯನ್ನು ತಯಾರಿಸಿ ಸವಿದವರಿಗೆ ಗೊತ್ತು ಅದರ ರುಚಿ. ಹಾಗಾದ್ರೆ ಮನೆಯಲ್ಲೇ ಈ ಕೆಲವು ಐಟಂಗಳಿದ್ದರೆ ಸಾಕು, ಕೆಸುವಿನ ಎಲೆ ಚಟ್ನಿಯನ್ನು ಸುಲಭವಾಗಿ ಮಾಡಬಹುದು.

Colocasia Leaves : ಮಳೆಗಾಲದಲ್ಲಿ ಗಂಜಿ ಜತೆ ಕೆಸುವಿನೆಲೆ ಚಟ್ನಿ ಸೂಪರ್​​, ಅಮ್ಮನ ಕೈರುಚಿ ನೆನಪಿಗೆ ಬರುವುದು ಖಂಡಿತ
ಕೆಸುವಿನೆಲೆ ಚಟ್ನಿ
Follow us on

ಎಲ್ಲಾ ಋತುವಿನಲ್ಲಿಯೂ ಈ ಕೆಸುವಿನ ಎಲೆ ಕಾಣಸಿಗುತ್ತದೆಯಾದರೂ ಮಳೆಗಾಲದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಒಂದೆರಡು ಹನಿ ಮಳೆ ನೀರು ಬಿದ್ದರೆ ಸಾಕು, ಕೆಲವೇ ಈ ಎಲೆಗಳು ವಾರದಲ್ಲೇ ಚಿಗುರಿ ಬಿಡುತ್ತದೆ. ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಇದರ ಬಳಕೆಯೂ ಈ ಋತುವಿನಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಈ ಕೆಸುವಿನಿಂದ ಮಾಡಿದ ಪತ್ರೊಡೆ, ಕೆಸುವಿನ ದಂಟು ಸಾರು ಹೀಗೆ ಹತ್ತಹಲವು ಬಗೆಯ ತಿನಿಸುಗಳು ರುಚಿ ಸವಿಯುವ ಕೆಲಸ ಆರಂಭವಾಗುತ್ತದೆ. ಇದರ ಎಲೆಯ ಚಟ್ನಿ ಮಾಡಿ ಅನ್ನದೊಂದಿಗೆ ಸವಿದರಂತೂ ಇದರ ಮುಂದೆ ಬೇರೆ ಯಾವ ಅಡುಗೆಯೂ ಸಪ್ಪೆ ಎಂದೆನಿಸುತ್ತದೆ.

ಕೆಸುವಿನ ಎಲೆಯ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

  • ಆರರಿಂದ ಏಳು ಮಧ್ಯಮ ಗಾತ್ರದ ಕೆಸುವಿನ ಎಲೆ
  • ನಾಲ್ಕೈದು ಹಸಿ ಮೆಣಸಿನಕಾಯಿ
  • ನಾಲ್ಕೈದು ಬೆಳ್ಳುಳ್ಳಿ ಎಸಳು
  • ಹುಣಿಸೇಹಣ್ಣು
  • ಐದಾರು ಚಮಚ ತೆಂಗಿನೆಣ್ಣೆ
  • ಉಪ್ಪು ರುಚಿಗೆ ತಕ್ಕಷ್ಟು
  • ಅರ್ಧ ಚಮಚ ಸಾಸಿವೆ
  • ಕೆಸುವಿನಲೆಯ ಚಟ್ನಿ ಮಾಡುವ ವಿಧಾನ
  • ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು, ಒರೆಸಿ, ಕತ್ತರಿಸಿಟ್ಟುಕೊಳ್ಳಿ.
  • ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ.
  • ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
  • ಈಗಾಗಲೇ ಕತ್ತರಿಸಿದ ಕೆಸುವಿನ ಸೊಪ್ಪು ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಿ.
  • ಕೊನೆಗೆ ಇದಕ್ಕೆ ಉಪ್ಪು ಮತ್ತು ಹುಣಿಸೆರಸ ಹಾಕಿ ಒಂದೆರಡು ನಿಮಿಷ ಬಿಟ್ಟು ಸ್ಟವ್ ಆಫ್ ಮಾಡಿ.
  • ಮಿಕ್ಸಿ ಜಾರಿಗೆ ಹಾಕಿ ಹುರಿದಿಟ್ಟ ಈ ಮಿಶ್ರಣವನ್ನು ಹಾಕಿ,ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ತುರಿಯನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ.
  •  ಆ ಬಳಿಕ ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಎಣ್ಣೆ ಮತ್ತು ಸಾಸಿವೆ, ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
  • ಈಗಾಗಲೇ ರುಬ್ಬಿಟ್ಟ ಈ ಮಿಶ್ರಣವನ್ನು ಒಗ್ಗರಣೆಗೆ ಹಾಕಿ, ಐದು ನಿಮಿಷ ಸಣ್ಣ ಉರಿಯಲ್ಲಿ ಕೈಯಾಡಿಸುತ್ತ ಇರಿ. ಹೀಗೆ ಮಾಡಿದ್ದಲ್ಲಿ ರುಚಿಕರವಾದ ಕೆಸುವಿನೆಲೆಯ ಚಟ್ನಿ ಸವಿಯಲು ಸಿದ್ಧವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Wed, 3 July 24