ಮನೆಯಲ್ಲಿ ಈ ಪದಾರ್ಥಗಳಿದ್ದರೆ ಸಾಕು, ಆರೋಗ್ಯಕರ ರಾಗಿ ದೋಸೆ ಹಾಗೂ ತೆಂಗಿನಕಾಯಿ ಚಟ್ನಿ ಮಾಡುವುದು ಸುಲಭ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 26, 2024 | 5:20 PM

ಬೆಳಗ್ಗೆ ರುಚಿ ರುಚಿಯಾದ ಫೇವರಿಟ್ ತಿಂಡಿಯಿದ್ದರೆ ಎಲ್ಲರೂ ಕೂಡ ಬೇಗನೇ ತಿಂಡಿಯನ್ನು ಸೇವಿಸುತ್ತಾರೆ. ಆದರೆ, ಎಲ್ಲರ ಮನೆಯಲ್ಲಿ ಅಮ್ಮಂದಿರಿಗೆ ಬೆಳಗ್ಗಿನ ತಿಂಡಿಯದ್ದೇ ಯೋಚನೆಯಾಗಿರುತ್ತದೆ. ಹೀಗಾಗಿ ದೇಹವನ್ನು ತಂಪಾಗಿಸುವ ರಾಗಿ ಹಿಟ್ಟಿನಿಂದ ದೋಸೆ ಮಾಡಿ ಸೇವಿಸುವುದು ಒಳ್ಳೆಯದು. ರಾಗಿ ಹಿಟ್ಟಿನಿಂದ ಮಾಡಿದ ದೋಸೆಯೂ ನೋಡುವುದಕ್ಕೆ ಗರಿಗರಿಯಾಗಿದ್ದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಹೀಗಾಗಿ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ಸುಲಭವಾಗಿ ರಾಗಿ ಹಿಟ್ಟಿನ ದೋಸೆ ಮಾಡಿ ಸವಿಯಬಹುದಾಗಿದೆ.

ಮನೆಯಲ್ಲಿ ಈ ಪದಾರ್ಥಗಳಿದ್ದರೆ ಸಾಕು, ಆರೋಗ್ಯಕರ ರಾಗಿ ದೋಸೆ ಹಾಗೂ ತೆಂಗಿನಕಾಯಿ ಚಟ್ನಿ ಮಾಡುವುದು ಸುಲಭ
ಸಾಂದರ್ಭಿಕ ಚಿತ್ರ
Follow us on

ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವ ಸಿರಿಧಾನ್ಯಗಳಲ್ಲಿ ರಾಗಿ ಕೂಡ ಒಂದು. ಕೆಲವು ರಾಗಿ ಮುದ್ದೆಯಿಂದ ಮಾಡಿದ ರಾಗಿಯನ್ನೇ ಪ್ರಮುಖ ಆಹಾರವಾಗಿ ಸೇವಿಸಲಾಗುತ್ತದೆ. ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಸೇರಿದಂತೆ ಹಲವಾರು ಪೋಷಕಾಂಶಗಳಿದ್ದು, ಈ ರಾಗಿಯನ್ನು ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳನ್ನು ಕಾಣಬಹುದು. ನಿಯಮಿತವಾಗಿ ರಾಗಿ ಸೇವನೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.

ರಾಗಿ ದೋಸೆಗೆ ಬೇಕಾಗುವ ಸಾಮಗ್ರಿಗಳು :

ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವೆ (ಬಾಂಬೆ ರವ), ಮೊಸರು, ಜೀರಿಗೆ ಪುಡಿ, ಮೆಣಸಿನ ಪುಡಿ, ಕರಿಬೇವಿನ ಎಲೆಗಳು, ಎಣ್ಣೆ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಉಪ್ಪು.

ರಾಗಿ ದೋಸೆ ತಯಾರಿಸುವ ವಿಧಾನ

* ಮೊದಲಿಗೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವೆ, ಉಪ್ಪು, ಮೊಸರು ಮತ್ತು ಸಾಕಷ್ಟು ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

* ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು ಹದಿನೈದು ನಿಮಿಷಗಳ ಕಾಲ ಹಾಗೆ ಇಡಬೇಕು. ಆ ಬಳಿಕ ಅದಕ್ಕೆ ಜೀರಿಗೆ, ಮೆಣಸಿನ ಪುಡಿ, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಬೇಕು.

* ಆ ಬಳಿಕ ಒಲೆಯನ್ನು ಮೇಲೆ ಪ್ಯಾನ್ ಇಟ್ಟು, ಬಿಸಿಯಾದ ಬಳಿಕ ದೋಸೆ ಹಿಟ್ಟನ್ನು ಸುರಿದು ಅದರ ಮೇಲೆ ಕ್ಯಾರೆಟ್ ತುರಿ, ಹಸಿಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪು, ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಟ್ಟರೆ ರುಚಿಕರವಾದ ರಾಗಿ ದೋಸೆ ಸವಿಯಲು ಸಿದ್ಧ.

ತೆಂಗಿನ ಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

* ತೆಂಗಿನ ಕಾಯಿ, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು, ಹಸಿಮೆಣಸಿನಕಾಯಿ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ ಹಾಗೂ ಕರಿಬೇವು.

ಇದನ್ನೂ ಓದಿ: ಗಣಪತಿಗೆ ಪ್ರಿಯವಾದ ಗರಿಕೆಯಲ್ಲಿದೆ ರೋಗ ನಿವಾರಕ ಗುಣ, ಇಲ್ಲಿದೆ ಸರಳ ಮನೆಮದ್ದು

ತೆಂಗಿನ ಕಾಯಿ ಚಟ್ನಿ ಮಾಡುವ ವಿಧಾನ

* ತೆಂಗಿನಕಾಯಿ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.

* ಆ ಬಳಿಕ ಕತ್ತರಿಸಿದ ತೆಂಗಿನ ಕಾಯಿಗೆ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.

* ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆ ಹಾಗೂ ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ರೆಡಿ ಮಾಡಿಕೊಳ್ಳಿ. ಆ ಬಳಿಕ ಈಗಾಗಲೇ ರುಬ್ಬಿದ ತೆಂಗಿನ ಕಾಯಿ ಮಿಶ್ರಣವನ್ನು ಹಾಕಿ ಬೆರೆಸಿಕೊಂಡರೆ ರುಚಿ ರುಚಿಯಾದ ಚಟ್ನಿ ಸವಿಯಲು ಸಿದ್ದವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ