ಉತ್ತಮ ಗುಣಮಟ್ಟದ, ರುಚಿಯಾದ ಸೀತಾಫಲ ಬೇಕೆಂದರೆ, ಈ ಹಣ್ಣು ಖರೀದಿಸುವಾಗ ಈ ಟಿಪ್ಸ್‌ ಫಾಲೋ ಮಾಡಿ

ಸೀಸನಲ್‌ ಹಣ್ಣುಗಳಲ್ಲಿ ಒಂದಾದ ಸೀತಾಫಲವನ್ನು ಬಹುತೇಕ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಹಣ್ಣು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಈಗಂತೂ ಸೀತಾಫಲ ಸೀಸನ್‌ ಶುರುವಾಗಿದ್ದು, ಅನೇಕರು ಈ ಹಣ್ಣನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ ಅನೇಕರಿಗೆ ಉತ್ತಮ ಗುಣಮಟ್ಟದ, ರುಚಿಕರವಾದ ಹಣ್ಣನ್ನು ಸೆಲೆಕ್ಟ್‌ ಮಾಡೋದು ಹೇಗೆ ಎಂಬುದೇ ತಿಳಿದಿಲ್ಲ. ಅದಕ್ಕಾಗಿ ತುಸು ದುಬಾರಿಯಾಗಿರುವ ಈ ಹಣ್ಣನ್ನು ಖರೀದಿಸುವಾಗ ಈ ಕೆಲವೊಂದು ಟಿಪ್ಸ್‌ಗಳನ್ನು ಫಾಲೋ ಮಾಡ್ಲೇಬೇಕು.

ಉತ್ತಮ ಗುಣಮಟ್ಟದ, ರುಚಿಯಾದ ಸೀತಾಫಲ ಬೇಕೆಂದರೆ, ಈ ಹಣ್ಣು ಖರೀದಿಸುವಾಗ ಈ ಟಿಪ್ಸ್‌ ಫಾಲೋ ಮಾಡಿ
ಸೀತಾಫಲ
Image Credit source: vecteezy

Updated on: Oct 22, 2026 | 7:09 PM

ಸೀಸನಲ್‌ ಹಣ್ಣಾಗಿರುವ ಸೀತಾಫಲ (custard apple) ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಖತ್‌  ಪ್ರಯೋಜನಕಾರಿ. ಮಾಧುರ್ಯಭರಿತವಾಗಿರುವ ಈ ಹಣ್ಣು ಜೀವಸತ್ವಗಳು, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಕಣ್ಣಿನ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಕಾರಿ. ಈ ಹಣ್ಣು ತುಸು ದುಬಾರಿಯಾಗಿದ್ದರೂ ಕೂಡ ಎಲ್ಲರೂ ಮುಗಿಬಿದ್ದು ಇದನ್ನು ಖರೀದಿಸುತ್ತಾರೆ. ಆದರೆ ಅನೇಕರಿಗೆ ಸಿಹಿಯಾಗಿರುವ, ಉತ್ತಮ ಗುಣಮಟ್ಟದ ಸೀತಾಫಲ ಆಯ್ಕೆ ಮಾಡೋದು ಹೇಗೆ ಎಂಬುದೇ ತಿಳಿದಿಲ್ಲ. ಇಂತಹ ಸಂದರ್ಭದಲ್ಲಿ ದುಡ್ಡು ಕೊಟ್ಟು ಕೂಡ ವೇಸ್ಟ್‌ ಆಗುತ್ತೆ.  ಈಗಂತೂ ಸೀತಾಫಲ ಹಣ್ಣಿನ ಸೀಸನ್‌ ಆರಂಭವಾಗಿದ್ದು, ನೀವು ಈ ಕೆಲವು ತಂತ್ರಗಳ ಸಹಾಯದಿಂದ ಉತ್ತಮ ಗುಣಮಟ್ಟದ ಹಣ್ಣನ್ನು ಖರೀದಿಸಬಹುದು.

ಸೀತಾಫಲದ ಬಣ್ಣಕ್ಕೆ ಗಮನ ಕೊಡಿ:

ರುಚಿಕರವಾದ ಮತ್ತು ತಾಜಾ ಸೀತಾಫಲವನ್ನು ಖರೀದಿಸಲು ಸುಲಭವಾದ ಸಲಹೆಯೆಂದರೆ ಅದರ ಬಣ್ಣಕ್ಕೆ ಗಮನ ಕೊಡುವುದು. ಮಾಗಿದ ಸೀತಾಫಲ ತಿಳಿ ಹಸಿರು ಬಣ್ಣದ್ದಾಗಿರುತ್ತದೆ. ಸೀತಾಫಲವು ಸಂಪೂರ್ಣವಾಗಿ ಹಣ್ಣಾಗದಿದ್ದರೆ, ಅದು ಕಡು ಹಸಿರು ಬಣ್ಣದಲ್ಲಿರುತ್ತದೆ. ಅನೇಕ ಮಾರಾಟಗಾರರು ಎರಡೂ ರೀತಿಯ ಸೀತಾಫಲಗಳನ್ನು ಒಟ್ಟಿಗೆ ಬೆರೆಸಿ ಮಾರಾಟ ಮಾಡುತ್ತಾರೆ. ಆದ್ದರಿಂದ, ತಾಜಾ ಮತ್ತು ರುಚಿಕರವಾದ ಸೀತಾಫಲವನ್ನು ಖರೀದಿಸುವ ಮೊದಲು ನೀವು ಅದರ ಬಣ್ಣಕ್ಕೆ ಗಮನ ಕೊಡಿ.

ಸೀತಾಫಲವನ್ನು  ಮುಟ್ಟಿ ಪರೀಕ್ಷಿಸಿ:

ಸೀತಾಫಲವನ್ನು ಮುಟ್ಟುವ ಮೂಲಕ ಅದರ ಗುಣಮಟ್ಟ ಮತ್ತು ಪಕ್ವತೆಯನ್ನು ನೀವು ಪರಿಶೀಲಿಸಬಹುದು. ಹಣ್ಣನ್ನು ನಿಮ್ಮ ಕೈಯಲ್ಲಿ ಹಿಡಿದು ಅದರ ಮೇಲೆ ನಿಧಾನವಾಗಿ ಒತ್ತಿರಿ. ಅದು ಸುಲಭವಾಗಿ ಕುಗ್ಗಿದರೆ, ಹಣ್ಣು ಒಳಗಿನಿಂದ ಮಾಗಿದೆ ಎಂದರ್ಥ. ಒತ್ತಿದಾಗ ಅದು ಗಟ್ಟಿಯಾಗಿದ್ದರೆ, ಅದು ಬಹುಶಃ ಹಣ್ಣಾಗಿಲ್ಲ ಅಥವಾ ಇನ್ನೂ ಸಂಪೂರ್ಣವಾಗಿ ಹಣ್ಣಾಗಿಲ್ಲ ಎಂದರ್ಥ.

ಹೊರ ಮೇಲ್ಮೈ ಮತ್ತು ವಾಸನೆಗೆ ಗಮನ ಕೊಡಿ:

ಚೆನ್ನಾಗಿ ಮಾಗಿದ ಸೀತಾಫಲವು ಸಿಹಿಯಾದ ಸುವಾಸನೆಯನ್ನು ಹೊಂದಿರುತ್ತದೆ ಮತ್ತು ದೂರದಿಂದಲೇ ವಾಸನೆ ಬರುತ್ತದೆ. ಬಲಿಯದ ಹಣ್ಣು ಅಂತಹ ಯಾವುದೇ ಸುವಾಸನೆಯನ್ನು ಹೊಂದಿರುವುದಿಲ್ಲ. ಜೊತೆಗೆ ಸೀತಾಫಲವು ಒಳಗೆ ಕೊಳೆತಿದ್ದರೂ ಸಹ, ಅದು ವಾಸನೆ ಬೀರುವುದಿಲ್ಲ. ಇದಲ್ಲದೆ ಸೀತಾಫಲದ ಮೇಲ್ಮೈಯಲ್ಲಿರುವ ಸಣ್ಣ ಬಿರುಕುಗಳು ಅಥವಾ ಚಡಿಗಳು ಹೆಚ್ಚು ತೆರೆದಿದ್ದರೆ, ಅದು ಮಾಗಿದೆ ಎಂದರ್ಥ.

ಸೀತಾಫಲದ ತೂಕವನ್ನು ಪರಿಶೀಲಿಸಿ:

ಸೀತಾಫಲವು ಹಣ್ಣಾಗಿದೆಯೇ ಎಂದು ಪರೀಕ್ಷಿಸಲು ನೀವು ತೂಕವನ್ನು ಪರಿಶೀಲಿಸಬಹುದು. ಮಾಗಿದ ಸೀತಾಫಲವು ಬಲಿಯದ ಸೀತಾಫಲಕ್ಕಿಂತ ಕಡಿಮೆ ತೂಕವಿರುತ್ತದೆ. ಸೀತಾಫಲವು ಹೆಚ್ಚು ತೂಕವಿದ್ದರೆ, ಅದು ಸಂಪೂರ್ಣವಾಗಿ ಹಣ್ಣಾಗಿಲ್ಲ ಎಂದರ್ಥ.

ಇದನ್ನೂ ಓದಿ: ದಿನಕ್ಕೊಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು?

ಸೀತಾಫಲ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

  • ಸೀತಾಫಲದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ.
  • ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಈ ಹಣ್ಣು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  • ಸೀತಾಫಲ ಫೈಬರ್‌ನಿಂದ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
  • ಇದರಲ್ಲಿರುವ ವಿಟಮಿನ್ ಬಿ6 ಮೆದುಳು ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ಸಂತೋಷದ ಹಾರ್ಮೋನುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us