Kannada News Lifestyle Hydrating drinks to stay cool and refreshed this summer Lifestyle News SIU
Summer Tips: ಬೇಸಿಗೆಯಲ್ಲಿ ದಾಹ ನೀಗಿಸಿ ದೇಹ ತಂಪಾಗಿಸುವ ತಂಪು ಪಾನೀಯಗಳಿವು
ಬಿಸಿಲಿನ ಝಳವು ಹೆಚ್ಚಾಗಿದ್ದರೆ ಬಾಯಾರಿಕೆಯಾಗುವುದು ಸಹಜ. ಈ ಸಮಯದಲ್ಲಿ ಮನಸ್ಸು ಹಾಗೂ ದೇಹವು ತಂಪೆನಿಸುವ ಪಾನೀಯಗಳನ್ನು ಬಯಸುತ್ತದೆ. ಈ ಸಮಯದಲ್ಲಿ ತಣ್ಣನೆಯ ಪಾನೀಯವಂತೂ ಸಿಕ್ಕಿಬಿಟ್ಟರೆ ಮನಸ್ಸಿಗೂ ಆನಂದವೋ ಆನಂದ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಕ್ಕ ಸಿಕ್ಕ ಪಾನೀಯಗಳನ್ನು ಸೇವಿಸಿದರೆ ಆರೋಗ್ಯ ಕೆಡುವುದು ನಿಶ್ಚಿತ. ಹೀಗಾಗಿ ದೇಹವನ್ನು ತಂಪಾಗಿಸುವ ನೈಸರ್ಗಿಕ ಪಾನೀಯಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಹಿತವಾಗಿರುತ್ತದೆ.
ಮೈ ಕೊರೆಯುವ ಚಳಿಯೂ ಮುಗಿದಿದ್ದು, ಫೆಬ್ರವರಿ ತಿಂಗಳ ಕೊನೆಯಲ್ಲಿಯೇ ಸೂರ್ಯನು ತನ್ನ ಪ್ರಖರತೆಯನ್ನು ತೋರಿಸಲು ಶುರು ಮಾಡಿದ್ದಾನೆ. ಈ ಬಾರಿಯ ಸುಡು ಬಿಸಿಲನ್ನು ಜನರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನವರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ಸಹಜವಾಗಿ ದ್ರವ ರೂಪದ ಆಹಾರವನ್ನು ಎಲ್ಲರೂ ಸೇವಿಸಲು ಇಷ್ಟ ಪಡುತ್ತಾರೆ. ಈ ಸಮಯದಲ್ಲಿ ಸಿಹಿಯಾದ ಕೃತಕ ಬಣ್ಣಗಳಿಂದ ಕೂಡಿದ ಸುವಾಸನೆಗಳನ್ನು ಒಳಗೊಂಡ ತಂಪು ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ನೈಸರ್ಗಿಕವಾಗಿರುವ ತಂಪು ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.
ಲಸ್ಸಿ ಮತ್ತು ಮಜ್ಜಿಗೆ: ದೇಹವನ್ನು ತಂಪಾಗಿಸುವ ಈ ಮಜ್ಜಿಗೆ ಮತ್ತು ಸಿಹಿ ಲಸ್ಸಿಯನ್ನು ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಇದರಲ್ಲಿ ವಿಟಮಿನ್-ಎ, ಸಿ, ಇ ಹಾಗೂ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಹೇರಳವಾಗಿದ್ದು ಪೋಷಕಾಂಶಗಳಿಂದ ಕೂಡಿದೆ.
ಎಳನೀರು: ನೈಸರ್ಗಿಕವಾಗಿ ಸಿಗುವ ಈ ಎಳನೀರು ದಾಹವನ್ನು ನೀಗಿಸುವುದರೊಂದಿಗೆ ದೇಹಕ್ಕೆ ತಂಪು. ಈ ಎಳನೀರಿನಲ್ಲಿ ಮೆಗ್ನೀಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ‘ಸಿ’ ಯಂತಹ ಪೋಷಕಾಂಶಗಳು ಹೇರಳವಾಗಿವೆ. ದೇಹವನ್ನು ತಂಪಾಗಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ನಿಂಬೆ ಹಣ್ಣಿನ ಪಾನಕ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಂ ಮತ್ತು ಇತರ ಖನಿಜಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನಾರೋಗ್ಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ. ಈ ಪಾನಕವನ್ನು ಸೇವಿಸುವುದರಿಂದ ದೇಹವು ಹೈಡ್ರೇಟ್ ಆಗಿರಿಸುತ್ತದೆ.
ಕಲ್ಲಂಗಡಿ ಹಣ್ಣಿನ ಜ್ಯೂಸ್: ಬೇಸಿಗೆಯು ಆರಂಭವಾಗುತ್ತಿದ್ದಂತೆ ಕಲ್ಲಂಗಡಿ ಹಣ್ಣಿನ ಸೀಸನ್ ಕೂಡ ಆರಂಭವಾಗುತ್ತದೆ. ನೀರಿನ ಅಂಶ ಹೇರಳವಾಗಿರುವ ಈ ಕಲ್ಲಂಗಡಿ ಬೇಸಿಗೆಯ ಸೂಪರ್ ಫುಡ್ ಎನ್ನಬಹುದು. ಸಕ್ಕರೆ ಹಾಕದೇನೇ ಹಾಗೇನೇ ಜ್ಯೂಸ್ ಮಾಡಿ ಕುಡಿಯಬಹುದಾಗಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿರಿಸಿರುತ್ತದೆ.
ಸೌತೆಕಾಯಿ ಜ್ಯೂಸ್: ಸೌತೆಕಾಯಿಯಲ್ಲಿ ನೀರಿನಂಶವಿದ್ದು, ದೇಹವನ್ನು ತಂಪಾಗಿಸುತ್ತದೆ. ಪೋಷಕಾಂಶಗಳು ಸಮೃದ್ಧವಾಗಿದ್ದು ಈ ಸೌತೆ ಕಾಯಿಯನ್ನು ಜ್ಯೂಸ್ ಮಾಡಿ ಕುಡಿಯಲು ಇಷ್ಟ ಪಡದವರು ಹಾಗೆಯೇ ಕತ್ತರಿಸಿ ತಿನ್ನಬಹುದು.
ಬೇಲ್ ಹಣ್ಣಿನ ಜ್ಯೂಸ್: ಬೆಲ್ ಅಥವಾ ಮರಸೇಬು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹವನ್ನು ತಂಪಾಗಿಸಿ ಚೈತನ್ಯವಾಗಿರಿಸುತ್ತದೆ. ಬೇಲ್ ಹಣ್ಣಿನ ರಸದಲ್ಲಿ ರೈಬೊಫ್ಲಾವಿನ್, ವಿಟಮಿನ್ ಬಿ ಅಂಶಗಳು ಹೇರಳವಾಗಿದ್ದು ನಿಯಮಿತವಾಗಿ ಈ ಹಣ್ಣಿನ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ದಾಳಿಂಬೆ ಹಣ್ಣಿನ ಜ್ಯೂಸ್: ವಿಟಮಿನ್ ಸಿ ಹೇರಳವಾಗಿರುವ ಈ ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಹಣ್ಣಿನಲ್ಲಿ ನೀರಿನಾಂಶ ಹೇರಳವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುವ ಈ ಹಣ್ಣು ಬೇಸಿಗೆಗಾಲದಲ್ಲಿ ದಾಹವನ್ನು ನೀಗಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ