ದೋಸೆ, ಇಡ್ಲಿ ಜೊತೆಗೆ ಬೆಸ್ಟ್ ಕಾಂಬಿನೇಶನ್ ಈ ಬದನೆಕಾಯಿ ಚಟ್ನಿ, ಮಾಡುವ ವಿಧಾನವಂತೂ ತುಂಬಾನೇ ಸರಳ
ಎಲ್ಲರ ಮನೆಯಲ್ಲಿ ಅಮ್ಮಂದಿರಿಗೆ ಬೆಳಗ್ಗೆ ಎದ್ದ ತಕ್ಷಣ ಏನು ತಿಂಡಿ ಮಾಡುವುದು ಅನ್ನೋದೇ ಯೋಚನೆಯಾಗಿರುತ್ತದೆ. ಹೀಗಾಗಿ ಬೆಳಗ್ಗಿನ ತಿಂಡಿಯ ಏನು ಮಾಡೋದು ಎಂದು ರಾತ್ರಿಯೇ ಪ್ಲಾನ್ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ದೋಸೆ, ಇಡ್ಲಿ ಮಾಡಿದರೆ ಸೈಡ್ಗೆ ಚಟ್ನಿ ಇರಲೇಬೇಕು. ಹೀಗಾಗಿ ಒಂದೇ ತರಹದ ಚಟ್ನಿ ಮಾಡಿ ಬೋರ್ ಆಗುವುದು ಸಹಜ. ಹೀಗಾಗಿ ರುಚಿ ರುಚಿಯಾದ ಬದನೆಕಾಯಿ ಚಟ್ನಿಯನ್ನು ಒಮ್ಮೆ ಟ್ರೈ ಮಾಡಬಹುದು.
ಬದನೆಕಾಯಿ ಎಂದರೆ ಕೆಲವರಿಗೆ ಅಷ್ಟಕಷ್ಟೆ. ನಾಲಿಗೆಗೆ ರುಚಿ ನೀಡುವ ಬದನೆಕಕಾಯಿಯನ್ನು ಸೇವಿಸುವವರ ಸಂಖ್ಯೆ ಸ್ವಲ್ಪ ಕಡಿಮೆಯೇ. ಆದರೆ ಉತ್ತರ ಕರ್ನಾಟಕದ ಕಡೆಗೆ ಹೋದರೆ ಅಲ್ಲಿ ಖಡಕ್ ರೊಟ್ಟಿಯ ಜೊತೆಗೆ ಬದನೆಕಾಯಿ ಎಣ್ಣೆಗಾಯಿ ಇದ್ದು ಬಿಟ್ಟರಂತೂ ಆ ರುಚಿಯನ್ನು ಸವಿದವರೇ ಬಲ್ಲರು. ಈ ಬದನೆ ಕಾಯಿಯನ್ನು ನಿಯಮಿತವಾಗಿ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ತರಕಾರಿಯನ್ನು ಇಷ್ಟಪಡದವರು ಇದರ ಚಟ್ನಿ ಮಾಡಿ ದೋಸೆ, ಇಡ್ಲಿ ಜೊತೆಗೆ ಸವಿದರೆ ಮತ್ತೆ ಮತ್ತೆ ಮಾಡಿಕೊಡಿ ಎಂದು ಕೇಳುವುದು ಪಕ್ಕಾ.
ಬದನೆಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು
ಹಸಿರುಬದನೆ, ನಾಲ್ಕು ಚಮಚದಷ್ಟು ಎಣ್ಣೆ, ಒಂದೆರಡು ಈರುಳ್ಳಿ ಹಾಗೂ ಟೊಮೊಟೊ, ಬೆಳ್ಳುಳ್ಳಿ, ಲವಂಗ, ಹಸಿಮೆಣಸಿನಕಾಯಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಚಿಟಿಕೆಯಷ್ಟು ಇಂಗು, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು ಒಗ್ಗರಣೆಗೆ ಸಾಸಿವೆ ಹಾಗೂ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು.
ಬದನೆಕಾಯಿ ಚಟ್ನಿ ಮಾಡುವ ವಿಧಾನ
* ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯುತ್ತಿದ್ದಂತೆ ಬಣ್ಣ ಬದಲಾಗುತ್ತದೆ. ಆ ಬಳಿಕ ಟೊಮ್ಯಾಟೊ ಸೇರಿಸಿಕೊಳ್ಳಿ.
* ನಂತರದಲ್ಲಿ ಕತ್ತರಿಸಿಟ್ಟ ಬದನೆಕಾಯಿಯನ್ನು ಹಾಗೂ ಸ್ವಲ್ಪ ಹುಣಸೆ ಹಣ್ಣಿನ ನೀರು ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.
ಇದನ್ನೂ ಓದಿ: ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಸುಲಭ ಮಾರ್ಗ
* ಅದಕ್ಕೆ ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೆರೆಸಿಕೊಳ್ಳಿ. ತಣ್ಣಗಾದ ಬಳಿಕ ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
* ಮತ್ತೊಂದೆಡೆ ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅದಕ್ಕೆ ಸಾಸಿವೆ ಮತ್ತು ಉದ್ದಿನಬೇಳೆ, ಇಂಗು ಹಾಗೂ ಕರಿಬೇವಿನ ಸೊಪ್ಪು ಹಾಕಿ ಒಮ್ಮೆ ಕೈಯಾಡಿಸಿ.
* ಈಗಾಗಲೇ ರುಬ್ಬಿ ಇಟ್ಟ ಮಿಶ್ರಣವನ್ನು ಬಾಣಲೆಗೆ ಹಾಕಿ ಬೇಕಾದಷ್ಟು ನೀರು ಹಾಕಿ ಬೆರೆಸಿಕೊಂಡರೆ ರುಚಿ ರುಚಿಯಾದ ಬದನೆಕಾಯಿ ಚಟ್ನಿ ಸವಿಯುವುದಕ್ಕೆ ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ