Long Pepper: ಅಡುಗೆಯ ಮನೆಯಲ್ಲಿರುವ ಹಿಪ್ಪಲಿಯಲ್ಲಿದೆ ನೂರೆಂಟು ಔಷಧೀಯ ಗುಣ, ಆರೋಗ್ಯಕ್ಕೆ ಬಹಳ ಉಪಯುಕ್ತ
ಮನೆಯ ಹಿತ್ತಲಿನಲ್ಲಿ ಸುಲಭವಾಗಿ ಬೆಳೆಯ ಬಹುದಾದ ಸಸ್ಯಗಳಲ್ಲಿ ಹಿಪ್ಪಲಿ ಅಥವಾ ಪಿಪ್ಪಲಿ ಗಿಡ ಕೂಡ ಒಂದು. ಮಸಾಲೆ ಪದಾರ್ಥಗಳ ಗುಂಪಿಗೆ ಸೇರಿದ ಈ ಹಿಪ್ಪಲಿಯನ್ನು ಉದ್ದ ಮೆಣಸು ಎಂದು ಕರೆಯುತ್ತಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ಈ ಹಿಪ್ಪಲಿಯಿಂದ ಮನೆ ಮದ್ದನ್ನು ತಯಾರಿಸಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.
ನಮ್ಮ ಮನೆಯ ಸುತ್ತ ಮುತ್ತಲಿನಲ್ಲಿರುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಡುಗೆ ಮನೆಯಲ್ಲಿರುವ ಸಾಂಬಾರು ಪದಾರ್ಥಗಳ ಸಾಲಿಗೆ ಸೇರುವ ಈ ಹಿಪ್ಪಲಿಯನ್ನು ಪಿಪ್ಪಲಿಯೆಂದು ಕರೆಯುವುದಿದೆ. ಆಯುರ್ವೇದದಲ್ಲಿ ಹೇರಳವಾಗಿ ಬಳಸುವ ಈ ಹಿಪ್ಪಲಿಯೂ ಔಷಧೀಯ ಗುಣಗಳ ಅಗರವಾಗಿದೆ. ಕರಿಮೆಣಸಿನ ಕಾಳನ್ನು ಪೋಣಿಸಿದಂತೆ ಕಾಣುವ ಈ ಹಿಪ್ಪಲಿಯೂ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
- ಹಿಪ್ಪಲಿ ಮತ್ತು ಶುಂಠಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಕಷಾಯ ತಯಾರಿಸಿ ಎರಡು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಿದರೆ ಜ್ವರವು ಗುಣಮುಖವಾಗುತ್ತದೆ.
- ಹಿಪ್ಪಲಿ ಪುಡಿ, ಕಾಳು ಮೆಣಸಿನ ಪುಡಿ, ಜೇಷ್ಠ ಮಧುವಿನ ಪುಡಿ ಸಮ ಪ್ರಮಾಣದಲ್ಲಿ ಬೆರೆಸಿ, ಅರ್ಧ ಚಮಚದಷ್ಟು ವೀಳ್ಯದೆಲೆರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿದರೆ ಅಸ್ತಮಾವು ಕಡಿಮೆಯಾಗುತ್ತದೆ.
- ಒಂದು ಚಮಚ ಹಿಪ್ಪಲಿ ಪುಡಿಯನ್ನು ತುಪ್ಪ ಮತ್ತು ಜೇನುತುಪ್ಪದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ಸೇವಿಸಿದರೆ ಬಾಯಿಯ ದುರ್ವಾಸನೆಯೂ ದೂರರಾಗುತ್ತದೆ.
- ಹಿಪ್ಪಲಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
- ಹಿಪ್ಪಲಿಯ ಪುಡಿಯನ್ನು ಗೋಮೂತ್ರದಲ್ಲಿ ಬೆರೆಸಿ, ಪ್ರತಿನಿತ್ಯವು ಸೇವಿಸುವುದರಿಂದ ಸಂಧಿವಾತವು ಶಮನವಾಗುತ್ತದೆ.
- ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ ಉಪ್ಪನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿದರೆ ಮೂಲವ್ಯಾಧಿಗೆ ಪರಿಣಾಮಕಾರಿ ಔಷಧವಾಗಿದೆ.
- ಎರಡು ಚಮಚ ಹಿಪ್ಪಲಿ ಚೂರ್ಣ ಹಾಗೂ ಒಂದು ಚಮಚ ತ್ರಿಫಲ ಚೂರ್ಣವನ್ನು ಬಿಸಿ ನೀರಿಗೆ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.
- ಸಂಧಿವಾತ, ಸೊಂಟನೋವಿಗೂ ಸಮಸ್ಯೆಗೆ ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ ಹಾಗೂ ಉಪ್ಪನ್ನು ಮಜ್ಜಿಗೆಯಲ್ಲಿ ಸೇರಿಸಿ ಸೇವನೆ ಮಾಡಿದರೆ ಪರಿಣಾಮಕಾರಿಯಾಗಿದೆ.
- ಎರಡು ಚಿಟಿಕೆ ಹಿಪ್ಪಲಿ ಪುಡಿ ಹಾಗೂ ಒಂದು ಚಮಚ ಹಸಿ ಶುಂಠಿಯವನ್ನು ಮಿಶ್ರಣ ಮಾಡಿ ಸೇವಿಸಿದರೆ ಕಡಿಮೆ ರಕ್ತದೊತ್ತಡ ಸಮಸ್ಯೆ ದೂರವಾಗುತ್ತದೆ.
- ಕೂದಲು ಉದುರು ಸಮಸ್ಯೆಯಿದ್ದಲ್ಲಿ ಹಿಪ್ಪಲಿಯ ಚೂರ್ಣವನ್ನು ಬೇವಿನ ಎಲೆ ಹಾಗೂ ಹಾಲಿನಲ್ಲಿ ಅರೆದು ಕೂದಲಿಗೆ ಲೇಪಿಸಿ ಒಣಗಿದ ಬಳಿಕ ಸ್ನಾನ ಮಾಡಿದರೆ ಉತ್ತಮ.
- ಲಿಂಬೆರಸ ಮತ್ತು ಗಂಧದೆಣ್ಣೆಯೊಂದಿಗೆ ಹಿಪ್ಪಲಿಯ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಸೋರಿಯಾಸಿಸ್, ಚರ್ಮದ ಉರಿಯೂತ ಸೇರಿದಂತೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ