ಗೋಡೆಯ ಮೇಲಿನ ಕಲೆಗಳು ಎಷ್ಟೇ ಉಜ್ಜಿದರೂ ಹೋಗುತ್ತಿಲ್ಲವೇ, ಇಲ್ಲಿದೆ ಸರಳ ಉಪಾಯ
ಇತ್ತೀಚೆಗಿನ ದಿನಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಮನೆಯನ್ನು ಕಟ್ಟಿಸುತ್ತಾರೆ. ಆದರೆ ಮನೆ ದೊಡ್ಡದಾಗಿದ್ದರೆ ಸಾಲದು, ಮನೆಯ ಸ್ವಚ್ಛತೆಯು ಅಷ್ಟೇ ಮುಖ್ಯ. ಹೀಗಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ಆಯಾಯ ಸ್ಥಳಗಳಲ್ಲಿ ಜೋಡಿಸಿಟ್ಟು, ಮನೆಯಲ್ಲಿ ಚೊಕ್ಕವಾಗಿ ಇಟ್ಟುಕೊಳ್ಳಬಹುದು. ಆದರೆ ಮನೆಯ ಗೋಡೆಗಳಲ್ಲಿ ಕಲೆಗಳಿದ್ದರೆ ಎಷ್ಟೇ ಸ್ವಚ್ಛವಾಗಿಟ್ಟರೂ, ನಿಮ್ಮ ಮನೆಯ ಅಂದವನ್ನು ಈ ಕಲೆಗಳು ಹಾಳು ಮಾಡುತ್ತವೆ. ಹೀಗಾಗಿ ಮನೆಯ ಗೋಡೆಗಳಲ್ಲಿ ಕಲೆಗಳು ಇದ್ದರೆ ಮನೆಯಲ್ಲಿರುವ ಈ ವಸ್ತುಗಳಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಎಲ್ಲರಿಗೂ ಕೂಡ ತಮ್ಮ ಮನೆ ಸ್ವಚ್ಛವಾಗಿರಬೇಕು, ನೋಡಲು ಆಕರ್ಷಕವಾಗಿರಬೇಕು ಎನ್ನುವುದಿರುತ್ತದೆ. ಆದರೆ ಬಿಡುವಿಲ್ಲದ ಕೆಲಸದ ನಡುವೆ ಸ್ವಚ್ಛತೆಗೆ ಗಮನ ಕೊಡುವುದು ಕಷ್ಟದ ಕೆಲಸ. ಹೀಗಾಗಿ ಹೊರಗಡೆ ಹೋಗಿ ದುಡಿಯುವ ಮಹಿಳೆಯರು ರಜಾದಿನ ಬಂತೆಂದರೆ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಅಣಿಯಾಗುತ್ತಾರೆ. ಆದರೆ ಕೆಲವೊಮ್ಮೆ ಮನೆಯ ಗೋಡೆಯ ತುಂಬಾ ಎಣ್ಣೆ ಕಲೆಗಳಿದ್ದರೆ, ಮಕ್ಕಳು ಪೆನ್ಸಿಲ್ ನಲ್ಲಿ ಚಿತ್ರಗಳನ್ನು ಬಿಡಿಸಿದ ಕಲೆಗಳಿದ್ದರೆ ಎಷ್ಟು ಉಜ್ಜಿದರೂ ಹೋಗುವುದೇ ಇಲ್ಲ. ಹೀಗಾದಾಗ ಹೆಚ್ಚಿನ ಮಹಿಳೆಯರು ಏನು ಮಾಡುವುದು ಎಂದು ಯೋಚಿಸುತ್ತಾರೆ.
* ಸೋಪ್ ಬಳಸಿ : ಗೋಡೆಯ ಮೇಲೆ ಎಣ್ಣೆ ಕಲೆಗಳು ಇದ್ದರೆ ಎದ್ದು ಕಾಣುತ್ತದೆ. ಹೀಗಾಗಿ ಈ ಎಣ್ಣೆ ಕಲೆಯನ್ನು ತೆಗೆದುಹಾಕಲು ಬೆಚ್ಚಗಿನ ನೀರು ಮತ್ತು ಸಾಬೂನಿನ ಮಿಶ್ರಣದಿಂದ ಉಜ್ಜಿದರೆ ಈ ಕಲೆಗಳು ಹೋಗುತ್ತದೆ.
* ಅಡುಗೆ ಸೋಡಾ : ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ, ಪೆನ್ ಪೆನ್ಸಿಲ್ ನಿಂದ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿರುತ್ತಾರೆ. ಈ ಪೆನ್ಸಿಲ್ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾದ ದಪ್ಪ ಪೇಸ್ಟ್ ಅನ್ನು ಮಾಡಿ ನೀರಿನೊಂದಿಗೆ ಬೆರೆಸಿ, ಕಲೆಯಿದ್ದ ಜಾಗದಲ್ಲಿ ವೃತ್ತಾಕಾರವಾಗಿ ತಿಕ್ಕುವುದರಿಂದ ಕಲೆಯನ್ನು ತೆಗೆದುಹಾಕಬಹುದು.
* ವಿನೆಗರ್ : ಗೋಡೆಯ ಮೇಲೆ ಎಣ್ಣೆಯ ಕಲೆಗಳಿದ್ದರೆ ಅದನ್ನು ಸುಲಭವಾಗಿ ವಿನೆಗರ್ ಬಳಸಿ ಸ್ವಚ್ಛಗೊಳಿಸಬಹುದು. ಒಂದು ಕಪ್ ಬಿಳಿ ವಿನೆಗರ್ ಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಬೆರೆಸಿ ಕಲೆಗಳ ಮೇಲೆ ನಿಧಾನವಾಗಿ ಉಜ್ಜುವುದರಿಂದ ಕಲೆಯು ಮಾಯಾವಾಗುತ್ತದೆ.
ಇದನ್ನೂ ಓದಿ: ಮಕ್ಕಳ ಮೇಲಿನ ಒತ್ತಡವೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆಯೇ? ಹೆತ್ತವರು ಈ ಬಗ್ಗೆ ಗಮನ ಕೊಡಿ
* ಆಲ್ಕೋಹಾಲ್ : ಗೋಡೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಇರುವ ವಸ್ತುವೆಂದರೆ ರಬ್ಬಿಂಗ್ ಆಲ್ಕೋಹಾಲ್. ಬಟ್ಟೆಗೆ ರಬ್ಬಿಂಗ್ ಆಲೋಹಾಲ್ ಹಾಕಿ, ಕಲೆಯಿರುವ ಜಾಗದಲ್ಲಿ ತಿಕ್ಕಿದ್ದರೆ ಕಲೆಯು ಇಲ್ಲದಂತಾಗುತ್ತದೆ.
* ಟೂತ್ ಪೇಸ್ಟ್ : ಎಲ್ಲರ ಮನೆಯಲ್ಲಿಯು ಟೂತ್ ಪೇಸ್ಟ್ ಇದ್ದೆ ಇರುತ್ತದೆ. ಈ ಟೂತ್ ಪೇಸ್ಟ್ ಅನ್ನು ಕಲೆಯಿದ್ದ ಜಾಗದಲ್ಲಿ ಹಾಕಿ, ನಿಧಾನವಾಗಿ ಉಜ್ಜಿದರೆ ಕಲೆಯು ಹೋಗುತ್ತದೆ.
* ಡ್ರೈ ಕ್ಲೀನಿಂಗ್ ಏಜೆಂಟ್ : ಗೋಡೆಗಳ ಮೇಲಿನ ಕಲೆಗಳನ್ನು ತೆಗೆಯಲು ಕಾರ್ಬೋನಾ ಡ್ರೈಕ್ಲೀನಿಂಗ್ ಏಜೆಂಟ್ ಬಳಸಬಹುದು. ಆದರೆ ಈ ಕಾರ್ಬೊನಾ ಬಳಸುವಾಗ ಕಿಟಕಿಗಳನ್ನು ತೆರೆದಿಡುವುದನ್ನು ಮರೆಯಬೇಡಿ. ಡ್ರೈ ಕ್ಲೀನಿಂಗ್ ಏಜೆಂಟ್ ಅನ್ನು ಕಲೆಯಿರುವಲ್ಲಿಗೆ ಹಾಕಿ ಉಜ್ಜಿದರೆ ಕಲೆಯು ಹೋಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ