ಚಳಿಗಾಲವು ಪ್ರಾರಂಭವಾಗಿದೆ. ಈ ಋತುವಿನ ಶೀತ ವಾತಾವರಣದಲ್ಲಿ ಪ್ರವಾಸ ಹೋಗುವುದೆಂದರೆ ಕೆಲವೊಬ್ಬರಿಗೆ ತುಂಬಾ ಇಷ್ಟ. ಬೇಸಿಗೆಯ ಋತುವಿನಲ್ಲಿ ಪ್ರವಾಸ ಹೋಗಲು ಇಷ್ಟಪಡುವಂತೆ ಚಳಿಗಾಲದಲ್ಲಿಯೂ ಪ್ರವಾಸ ಹೋಗಲು ಇಷ್ಟಪಡುವ ಹಲವರಿದ್ದಾರೆ. ಶೀತ ವಾತಾವರಣದಲ್ಲಿ ಹೆಚ್ಚನವರು ಹಿಮಪಾತವನ್ನು ಆನಂದಿಸಲು ಗಿರಿಧಾಮಗಳಿಗೆ ಭೇಟಿ ನೀಡುತ್ತಾರೆ. ಭಾರತದಲ್ಲಿ ಭೇಟಿ ನೀಡಲು ಹಲವು ಸುಂದರ ಸ್ಥಳಗಳಿವೆ. ಅದರಲ್ಲೂ ಈ ಚಳಿಗಾಲದ ಸಮಯದಲ್ಲಿ ಭೇಟಿ ನೀಡಲೆಂದೇ ಇರುವ ಕೆಲವು ಅತ್ಯುತ್ತಮ ಸ್ಥಳಗಳಿವೆ. ನೀವು ಸಹ ಈ ಬಾರಿಯ ಚಳಿಗಾಲದಲ್ಲಿ ಪ್ರವಾಸ ಹೋಗಲು ಯೋಜಿಸುತ್ತಿದ್ದರೆ ಈ ಕೆಲವು ಸ್ಥಳಗಳಿಗೆ ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬಹುದು.
ಚಳಿಗಾಲದಲ್ಲಿ ಹಿಮರಾಶಿಯ ಸೌಂದರ್ಯವನ್ನು ನೋಡಲು ಇಷ್ಟಪಡುವವರಾಗಿದ್ದರೆ, ನೀವು ಕಾಶ್ಮೀರದ ಗುಲ್ಮಾರ್ಗ್ಗೆ ಪ್ರವಾಸ ಬರಬಹುದು. ಈ ಸ್ಥಳವನ್ನು ಭೂಮಿಯ ಮೇಲಿನ ಸ್ವರ್ಗ ಎಂದೂ ಕರೆಯುತ್ತಾರೆ. ಗುಲ್ಮಾರ್ಗ್ ಸಮುದ್ರ ಮಟ್ಟದಿಂದ 2730 ಅಡಿ ಎತ್ತರದಲ್ಲಿದೆ. ಇದು ಅತ್ಯಂತ ಸುಂದರವಾದ ಗಿರಿಧಾಮವಾಗಿದ್ದು, ಇಲ್ಲಿಗೆ ಚಳಿಗಾಲದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುತ್ತಾರೆ. ಇಲ್ಲಿ ನೀವು ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಸಾಹಸಿಮಯ ಕ್ರೀಡೆಗಳನ್ನು ಸಹ ಆಡಬಹುದು. ಇಲ್ಲಿ ನೀವು ಟ್ರೆಕ್ಕಿಂಗ್, ಸ್ಕೀಯಿಂಗ್, ಗಾಲ್ಫ್, ಸ್ನೋಬೋರ್ಡಿಂಗ್, ಕೇರ್ ರೈಡ್ ಸೇರಿದಂತೆ ಹಲವು ಮೋಜಿನ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೆ ಇಲ್ಲಿ ನೀವು ಖಿಲ್ಮಾರ್ಗ್ ಕಣಿವೆ, ಬಯೋಸ್ಪಿಯರ್ ರಿಸರ್ವ್, ಅಲಪತ್ತರ್ ಸರೋವರ, ಸ್ಟೌಬೆರಿ ಕಣಿವೆ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು. ನವೆಂಬರ್ ತಿಂಗಳಿಂದ ಹಿಡಿದು ಜೂನ್ ವರೆಗೆ ಗುಲ್ಮಾರ್ಗ್ಗೆ ಭೇಟಿ ನೀಡಲು ಉತ್ತಮ ಸಮಯ.
ಗುಜರಾತ್ನ ರಾನ್ ಆಫ್ ಕಚ್ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಪ್ರಸಿದ್ಧವಾಗಿದೆ. ಇದು ವಿಶ್ವದ ಅತಿದೊಡ್ಡ ಉಪ್ಪು ಮರುಭೂಮಿಯಾಗಿದೆ. ನೀವು ಈ ಬಾರಿಯ ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಸುಂದರವಾದ ಬಿಳಿ ಬಣ್ಣದ ಮರುಭೂಮಿಗೆ ಹಲವಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದಲ್ಲದೆ ಇಲ್ಲಿ ಪ್ರಸಿದ್ಧ ಕಚ್ ಉತ್ಸವ ಕೂಡಾ ನಡೆಯುತ್ತದೆ. ಈ ಉತ್ಸವ ನವೆಂಬರ್ ತಿಂಗಳಿಂದ ಫೆಬ್ರವರಿಯವರೆಗೆ ನಡೆಯುತ್ತದೆ. ಗುಜರಾತ್ನ ಸಂಸ್ಕೃತಿ ಮತ್ತು ಅಲ್ಲಿನ ಸ್ಥಳೀಯ ಪಾಕಪದ್ಧತಿಯನ್ನು ಸವಿಯಲು ಬಯಸಿದರೆ ನೀವು ಇಲ್ಲಿಗೆ ಭೇಟಿ ನೀಡಬಹುದು. ಕಚ್ ಉತ್ಸವದಲ್ಲಿ ಜಾನಪದ ನೃತ್ಯಗಳು, ಸಂಗೀತ ಪ್ರದರ್ಶನಗಳು, ಕರಕುಶಲವಸ್ತುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ನೀವು ಇಲ್ಲಿ ಒಂಟೆ ಸವಾರಿ, ಸಫಾರಿ ಇತ್ಯಾದಿ ಸಾಹಸಿ ಕ್ರೀಡೆಗಳನ್ನು ಕೂಡ ಆನಂದಿಸಬಹುದು.
ಉತ್ತರಾಖಂಡದಲ್ಲಿರುವ ಔಲಿ ಗಿರಿಧಾಮವು ಚಳಿಗಾಲದಲ್ಲಿ ನೀವು ಭೇಟಿ ನೀಡಲೇಬೇಕಾದ ಅದ್ಭುತ ಸ್ಥಳಗಳಲ್ಲಿ ಒಂದಾಗಿದೆ. ಗರ್ವಾಲ್ ಪ್ರದೇಶದ ಚಮೋಲಿ ಜಿಲ್ಲೆಯಲ್ಲಿರುವ ಔಲಿ ಹಿಲ್ ಸ್ಟೇಷನ್ ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದೆ. ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲದಲ್ಲಿ ಇಲ್ಲಿಗೆ ಬರುತ್ತಾರೆ. ನೀವು ಹಿಮರಾಶಿಯನ್ನು ಇಷ್ಟಪಡುವವರಾದರೆ ಖಂಡಿತವಾಗಿಯೂ ಈ ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ನೀವು ಮೇಲಿನಿಂದ ಬೀಳುವ ಹಿಮದೊಂದಿಗೆ ಆಟವಾಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ನಾಗಾ ಪರ್ವತ, ನಂದಾದೇವಿ ಪರ್ವತ, ಡುಂಗ್ ಗಿರಿ, ನೀಲಕಂಠ ಮತ್ತು ಮನ ಪರ್ವತ ಇತ್ಯಾದಿ ಭವ್ಯವಾದ ಶಿಖರಗಳು ಔಲಿಯಲ್ಲಿ ನೋಡಬಹುದಾದ ಪ್ರಮುಖ ಆಕರ್ಷಣೆಗಳಾಗಿವೆ. ನೀವು ಇಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿದೆ ಸ್ಕೀಯಿಂಗ್, ಸ್ನೋಬೋರ್ಡಿಂಗ್, ಟ್ರೆಕ್ಕಿಂಗ್ ಮತ್ತು ಚೇರ್ ಕಾರ್ ರೈಡ್ ಇತ್ಯಾದಿ ಸಾಹಸಿ ಕ್ರೀಡೆಗಳನ್ನು ಸಹ ಆನಂದಿಸಬಹುದು.
ಇದನ್ನೂ ಓದಿ: ಪ್ರಯಾಣದ ಸಂದರ್ಭದಲ್ಲಿ ಈ ಆಹಾರಗಳ ಸೇವನೆ ತಪ್ಪಿಸಿ
ನೀವು ಚಳಿಗಾಲದ ಸಮಯದಲ್ಲಿ ಗಿರಿಧಾಮಗಳಿಗೆ ಭೇಟಿ ನೀಡಲು ಬಯಸದಿದ್ದರೆ, ರಾಜಸ್ಥಾನದ ಜೈಸಲ್ಮೇರ್ ಮರುಭೂಮಿಗೆ ಪ್ರವಾಸ ಕೈಗೊಳ್ಳಬಹುದು. ಈ ಸ್ಥಳದಲ್ಲಿ ವರ್ಷವಿಡೀ ತುಂಬಾ ಬಿಸಿ ತಾಪಮಾನವಿರುತ್ತದೆ. ಆದರೆ ಚಳಿಗಾದಲ್ಲಿ ಇಲ್ಲಿಗೆ ನೀವು ಖಂಡಿತವಾಗಿಯೂ ಭೇಟಿ ನೀಡಬಹುದು. ಇಲ್ಲಿನ ಸೌಂದರ್ಯ, ಕಲೆ, ಪರಂಪರೆ ಮತ್ತು ಮರುಭೂಮಿ ಸಫಾರಿ ಪ್ರತಿ ವರ್ಷವೂ ವಿದೇಶಿ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತದೆ. ನೀವು ಸಹ ಜೈಸಲ್ಮೇರ್ಗೆ ಪ್ರವಾಸ ಕೈಗೊಳ್ಳುವ ಮೂಲಕ ನಿಮ್ಮ ಚಳಿಗಾಲದ ರಜೆಯನ್ನು ಸ್ಮರಣೀಯವಾಗಿಸಬಹುದು. ಇಲ್ಲಿ ನೀವು ಮೂನ್ ಲೈಟ್ ಕ್ಯಾಂಪಿಂಗ್, ಒಂಟೆ ಸವಾರಿ, ಕ್ವಾಡ್ ಬೈಕಿಂಗ್, ಡ್ಯೂನ್ ಬಶಿಂಗ್, ಪ್ಯಾರಾಸೈಲಿಂಗ್ ಮತ್ತು ಹೆಚ್ಚಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಮರುಭೂಮಿ ಉತ್ಸವ, ನೇರ್ಸಿ ಸಂಗೀತ ಶಾಲೆ, ಕುಲಧಾರ ಗ್ರಾಮ, ಜೈಸಲ್ಮೇರ್ ಮ್ಯೂಸಿಯಂ, ಜೈಸಲ್ಮೇರ್ ಕೋಟೆ ಸೋನಾರ್ ಕೋಟೆ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಜೈಸಲ್ಮೇರ್ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು.
ಹಿಮಾಚಲ ಪ್ರದೇಶವು ಚಳಿಗಾಲದಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಶಿಮ್ಲಾ, ಕುಲು-ಮನಾಲಿಗೆ ಭೇಟಿ ನೀಡಲು ಅನೇಕ ಪ್ರವಾಸಿಗರು ಬರುತ್ತಾರೆ. ನೀವು ಈ ಸ್ಥಳಗಳಿಗೆ ಭೇಟಿ ನೀಡದಿದ್ದರೆ, ಡಾಲ್ಹೌಸಿಗೆ ಪ್ರವಾಸ ಯೋಜಿಸಬಹುದು. ಈ ಸ್ಥಳವನ್ನು ʼಮಿನಿ ಸ್ವಿಟ್ಜರ್ಲೆಂಡ್ʼ ಎಂದೂ ಕರೆಯುತ್ತಾರೆ. ಇಲ್ಲಿಗೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಈ ಗಿರಿಧಾಮದ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿ ನೀವು ಸುಂದರವಾದ ಹೂ ರಾಶಿ, ಹುಲ್ಲುಗಾವಲು, ಆಕರ್ಷಕ ಕಣಿವೆಗಳು, ಜಲಪಾತಗಳು, ಪರ್ವತಗಳ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ನೀವು ಬುಡ ಪತ್ತಾರ್, ದೈನ್ ಕುಂಡ್, ಸುಭಾಷ್ ಬಾವೊಲಿ, ಬರ್ಕೋಟಾ ಹಿಲ್ಸ್, ಪಂಚಪುಲಾ ಇತ್ಯಾದಿ ಸ್ಥಳಗಳಿಗೂ ಭೇಟಿ ನೀಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: