ಕೋರಮಂಗಲದ ಮೂರನೇ ಬ್ಲಾಕ್ ಬಲು ದುಬಾರಿ, ಚದರಡಿಗೆ 70 ಸಾವಿರ ರೂ, ದುಬಾರಿಯಾಗಲು ಇದೆ ಕಾರಣವಂತೆ

| Updated By: ಅಕ್ಷತಾ ವರ್ಕಾಡಿ

Updated on: Nov 14, 2024 | 6:19 PM

ಬೆಂಗಳೂರಿನ ಕೋರಮಂಗಲದ ಮೂರನೇ ಬ್ಲಾಕ್‌ ಅನ್ನು ಬಿಲೆನಿಯರ್‌ ಸ್ಟ್ರೀಟ್‌ ಎಂದೂ ಕರೆಯಲಾಗುತ್ತದೆ. ಇಲ್ಲಿನ ಒಂದು ಚದರ ಅಡಿ ಜಾಗವು ವಜ್ರಕ್ಕಿಂತ ಹೆಚ್ಚು ಬೆಲೆ ಬಾಳುತ್ತವೆ. ಇಲ್ಲಿ ಆಸ್ತಿ ಖರೀದಿ ಮಾಡಲು ಎಷ್ಟು ಹಣವಿರಬೇಕು ಎಂದು ಒಮ್ಮೆ ಯೋಚನೆ ಮಾಡಿ. ಹಾಗಾದ್ರೆ ಕೋರಮಂಗಲದ ಮೂರನೇ ಬ್ಲಾಕ್ ದುಬಾರಿಯಾಗಲು ಕಾರಣವೇನು? ಈ ಜಾಗವನ್ನು ಬಿಲೆನಿಯರ್‌ ಸ್ಟ್ರೀಟ್‌ ಎಂದು ಕರೆಯುವುದು ಏಕೆ? ಇಲ್ಲಿ ಯಾರೆಲ್ಲಾ ವಾಸವಿದ್ದಾರೆ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ.

ಕೋರಮಂಗಲದ ಮೂರನೇ ಬ್ಲಾಕ್ ಬಲು ದುಬಾರಿ,  ಚದರಡಿಗೆ 70 ಸಾವಿರ ರೂ,  ದುಬಾರಿಯಾಗಲು ಇದೆ ಕಾರಣವಂತೆ
‘Billionaire Street’
Follow us on

ಬೆಂಗಳೂರಿಗೆ ಹೋದ್ರೆ ಯಾವುದಾದರೂ ಸಣ್ಣ ಪುಟ್ಟ ಉದ್ಯೋಗ ಮಾಡಿಯಾದ್ರೂ ಬದುಕಬಹುದು ಎನ್ನುವುದು ಬಹುತೇಕರ ಆಲೋಚನೆ. ಆದರೆ ಮಾಯಾನಗರಿಯಲ್ಲಿ ಕೈ ತುಂಬಾ ಸಂಬಳವಿದ್ದರೂ ಜೀವನ ನಡೆಸುವುದು ಕಷ್ಟಕರ. ಇನ್ನು ಸ್ವಂತ ಮನೆ ಅಥವಾ ಜಾಗ ಖರೀದಿಸುವುದು ಹೇಳಿದ್ದಷ್ಟು ಸುಲಭವಲ್ಲ. ಅದರಲ್ಲಿ ಈ ಬಿಲೆನಿಯರ್‌ ಸ್ಟ್ರೀಟ್‌ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನ ಕೋರಮಂಗಲದ ಮೂರನೇ ಬ್ಲಾಕ್‌ ನಲ್ಲಿ ಜಾಗ ಖರೀದಿ ಮಾಡೋದು ಅಂದರೆ ಅದು ಮಧ್ಯಮವರ್ಗದ ಜನರಿಗೆ ಕನಸೇ ಸರಿ. ಇಲ್ಲಿ ಒಂದೊಂದು ಚದರ ಅಡಿಯಷ್ಟು ಜಾಗವು ದುಬಾರಿ ಬೆಲೆ ಬಾಳುತ್ತದೆ.

ಹೌದು, ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್‌ ದೇಶದ ಪ್ರಖ್ಯಾತ ಉದ್ಯಮಿಗಳು, ಬಿಲೆನಿಯರ್​​ಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ವಾಸವಿರುವ ತಾಣವಾಗಿದೆ. ಇತ್ತೀಚೆಗಷ್ಟೇ ಖ್ವೆಸ್‌ ಕಾರ್ಪ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಐಸಾಕ್‌ ಅವರು ಬರೋಬ್ಬರಿ 67.5 ಕೋಟಿ ರೂಪಾಯಿ ಪಾವತಿಸಿ 10,000 ಚದರ ಅಡಿಯ ಅಪಾರ್ಟ್‌ ಮೆಂಟ್‌ ವೊಂದನ್ನು ಖರೀದಿ ಮಾಡಿದ್ದರು.

ಇದಕ್ಕೂ ಮೊದಲು ಟಿವಿಎಸ್‌ ಮೋಟಾರ್ಸ್‌ ಸಂಸ್ಥೆಯು 9,488 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ ಮೆಂಟ್‌ ಅನ್ನು ಪ್ರತಿ ಚದರ ಅಡಿಗೆ 68,597 ರೂ. ಹಣವನ್ನು ನೀಡಿ ಖರೀದಿಸಿದ್ದರು. ಆದರೆ ಕೋರಮಂಗಲ ಮೂರನೇ ಬ್ಲಾಕ್ ನಲ್ಲಿ ಎಷ್ಟೇ ದುಡ್ಡು ಕೊಟ್ಟರೂ ಕೂಡ ಒಂದು ಚದರ ಅಡಿ ಭೂಮಿ ಕೂಡ ಸಿಗುವುದಿಲ್ಲ. ಇದರಿಂದಾಗಿ ಈ ಪ್ರದೇಶವು ಅಷ್ಟು ದುಬಾರಿಯಾಗಲು ಕಾರಣ ಎನ್ನುವುದು ರಿಯಲ್‌ ಎಸ್ಟೇಟ್‌ ತಜ್ಞರು ಅಭಿಪ್ರಾಯವಾಗಿದೆ. ಅದಲ್ಲದೇ, ವಿಸ್ತಾರವಾದ ಅಪಾರ್ಟ್ಮೆಂಟ್ ಗಳು, ವಿಸ್ತಾರವಾದ ಮನೆಗಳು ಹಾಗೂ ಬಿಲಿಯನೇರ್‌ಗಳು ವಾಸವಾಗಿರುವುದು ಕೂಡ ಕಾರಣ ಎನ್ನಬಹುದು. ಅದಲ್ಲದೇ ಇಲ್ಲಿ 4,000 ಚದರ ಅಡಿ ಕಡಿಮೆಯಿರುವ ಬಂಗಲೆಗಳನ್ನು ಕಾಣಲು ಇಲ್ಲಿ ಸಾಧ್ಯವೇ ಇಲ್ಲ ಎನ್ನಲಾಗಿದೆ.

ಈ ಪ್ರದೇಶ ದುಬಾರಿಯಾಗಲು ಕಾರಣಗಳಿವು:

ಕೋರಮಂಗಲದ ಆರು ಬ್ಲಾಕ್‌ಗಳಲ್ಲಿ, 3ನೇ ಬ್ಲಾಕ್ ಅತ್ಯಂತ ದುಬಾರಿಯಾಗಿದೆ. ಈ ಪ್ರದೇಶದಲ್ಲಿ ಆಸ್ತಿಯನ್ನು ಹೊಂದುವುದು ಪ್ರತಿಷ್ಠೆಯ ಸಂಕೇತವು ಆಗಿದೆ. ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ ಗಳು ಆಸ್ಪತ್ರೆಗಳು ಎಲ್ಲಾ ಸೌಕರ್ಯಗಳು ಇವೆ. ಅದಲ್ಲದೇ, ಈ ಪ್ರದೇಶಕ್ಕೆ ಅನೇಕ ಐಟಿಬಿಟಿ ಕಂಪನಿಗಳು ಹತ್ತಿರವಿದೆ. ಬನ್ನೇರುಘಟ್ಟ 6 ಕಿಮೀ, ಬೆಳ್ಳಂದೂರು 7 ಕಿಮೀ, ಸರ್ಜಪುರ ಮಾರತ್ತಹಳ್ಳಿ 6.5 ಕಿಮೀ ಮತ್ತು ಎಲೆಕ್ಟ್ರಾನಿಕ್‌ ಸಿಟಿ 13 ಕಿಮೀ ದೂರವಿದೆ. ಕೋರಮಂಗಲವು ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಒಂದು ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ. ಇದು ರೆಸಿಡೆನ್ಷಿಯಲ್‌ ಮತ್ತು ಕಮರ್ಷಿಯಲ್‌ ಹಬ್‌ ಆಗಿದೆ.

ಮೂರನೇ ಬ್ಲಾಕ್ ನಲ್ಲಿ ಯಾರೆಲ್ಲಾ ವಾಸವಿದ್ದಾರೆ?

ಕೋರಮಂಗಲ ಬೆಂಗಳೂರಿನ ಸ್ಟಾರ್ಟ್‌ ಅಪ್‌ ಹಬ್‌ ಎಂದು ಖ್ಯಾತಿಗಳಿಸಿದ್ದು, ದೇಶದ ಖ್ಯಾತ ಉದ್ಯಮಿಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ಬಿಲೆನಿಯರ್​​ಗಳು, ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಫ್ಲಿಪ್‌ ಕಾರ್ಟ್‌ ಸಹ ಸಂಸ್ಥಾಪಕ ಸಚಿನ್‌ ಬನ್ಸಾಲ್‌, ಇನ್​ಫೋಸಿಸ್‌ ಸಂಸ್ಥಾಪಕ ನಂದನ್‌ ನಿಲೇಕಣಿ ಮತ್ತು ಕ್ರಿಸ್‌ ಗೋಪಾಲಕೃಷ್ಣನ್‌ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರಮುಖರು ಇಲ್ಲಿ ನೆಲೆಸಿದ್ದಾರೆ.

ಶ್ರೀಮಂತ ವ್ಯಕ್ತಿಗಳೇ ಇಲ್ಲಿ ವಾಸಿಸುವ ಕಾರಣ ಇಲ್ಲಿನ ಐಷಾರಾಮಿ ಬಂಗಲೆಗಳು ಎಲ್ಲಾ ಸೌಕರ್ಯದೊಂದಿಗೆ ಆಕರ್ಷಕವಾಗಿದೆ. ವಿವಿಧ ವಿನ್ಯಾಸದ ಹೆರಿಟೇಜ್‌ ವಿಲ್ಲಾಗಳು ಸೇರಿದಂತೆ ಅದ್ಭುತ ವಿನ್ಯಾಸದ ಮನೆಗಳನ್ನು ಇಲ್ಲಿ ಕಾಣಬಹುದು. ಜಾಗತಿಕವಾಗಿ ಮೆಚ್ಚುಗೆ ಪಡೆದ ವಾಸ್ತು ಶಿಲ್ಪಿಗಳು ಈ ಮನೆಯನ್ನು ನಿರ್ಮಿಸಿದ್ದಾರೆ. ಹೀಗಾಗಿ ಈ ಐಷಾರಾಮಿ ಬಂಗಲೆಯಲ್ಲಿ ಎತ್ತರದ ಗೇಟ್‌ ಗಳು, ಖಾಸಗಿ ಗಾರ್ಡನ್‌, ಈಜುಕೊಳ, ಜಿಮ್‌, ಕಾರ್‌ ಪಾರ್ಕಿಂಗ್‌, ಹಸಿರು ಇಂಧನ ಆಧಾರಿತ ಹಸಿರು ಕಟ್ಟಡಗಳು, ಮಳೆ ನೀರು ಕೊಯ್ಲು ಹೀಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ.

ಇದನ್ನೂ ಓದಿ: ಕಮ್ಮಿ ಬಜೆಟ್‌ನಲ್ಲಿ ದುಬೈ ಟ್ರಿಪ್‌ ಹೋಗಲು ಬಯಸಿದ್ರೆ ಇಲ್ಲಿದೆ ನಿಮಗೊಂದು ಬಂಪರ್‌ ಆಫರ್‌

ಬೆಂಗಳೂರಿನ ಆಸ್ತಿ ಮಾರುಕಟ್ಟೆಯಲ್ಲಿ ಏರಿಕೆ:

ನೈಟ್ ಫ್ರಾಂಕ್ ವರದಿಯ ಪ್ರಕಾರ, 2024 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ವಸತಿ ಬೆಲೆಯು ವರ್ಷದಿಂದ ವರ್ಷಕ್ಕೆ 10% ರಷ್ಟು ಏರಿಕೆ ಕಂಡಿವೆ. ಪ್ರಾಪ್‌ಟೆಕ್ ಪ್ಲಾಟ್‌ಫಾರ್ಮ್ ಸ್ಕ್ವೇರ್ ಯಾರ್ಡ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ, ಪ್ರಸ್ತುತ ಕೋರಮಂಗಲದಲ್ಲಿ (ಜನವರಿ-ಸೆಪ್ಟೆಂಬರ್) ಪ್ರಾಪರ್ಟಿ ಬೆಲೆಯು ಪ್ರತಿ ಚದರ ಅಡಿಗೆ 19,149 ರೂ ಇದೆ. 2023 ರಲ್ಲಿ 13,355 ರೂ ಇದ್ದ ಬೆಲೆಯು ಈ ವರ್ಷಕ್ಕೆ 43% ಹೆಚ್ಚಳವಾಗಿದೆ. ಅದಲ್ಲದೇ ಮಾಸಿಕ ಸರಾಸರಿ ಬಾಡಿಗೆಯು 2023 ರಲ್ಲಿ 49,500 – 90,000 ರೂಯಿತ್ತು. ಆದರೆ 2024 ರ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಈ ಅವಧಿಯಲ್ಲಿ ರೂ 48,000 ನಿಂದ 1,34,400 ರೂಗೆ ಏರಿಕೆಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ