International Cat Day 2026: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ನಾಯಿಗಳಂತೆ ಬೆಕ್ಕುಗಳನ್ನು ಸಾಕಲು ಅನೇಕರು ಇಷ್ಟಪಡುತ್ತಾರೆ. ಇನ್ನೂ ಕೆಲವರು ಬೆಕ್ಕುಗಳನ್ನು ಅಪಶಕುನ ಎಂದು ಪರಿಗಣಿಸುತ್ತಾರೆ. ಆದರೆ ಬೆಕ್ಕುಗಳು ಅಪಶಕುನವಲ್ಲ ಅವುಗಳನ್ನು ಸಾಕುವುದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಹೌದು ಬೆಕ್ಕುಗಳು ಮನೆಯಲ್ಲಿ ಹಲ್ಲಿ, ಇಲಿಗಳ ಕಾಟದಿಂದ ಮುಕ್ತಿ ನೀಡುವಂತೆ ನಮ್ಮ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಂತಾರಾಷ್ಟ್ರೀಯ ಬೆಕ್ಕು ದಿನದ ಈ ಶುಭ ಸಂದರ್ಭದಲ್ಲಿ ಮನೆಯಲ್ಲಿ ಬೆಕ್ಕು ಸಾಕುವುದರಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ನೋಡೋಣ ಬನ್ನಿ.

International Cat Day 2026: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಅಂತಾರಾಷ್ಟ್ರೀಯ ಬೆಕ್ಕು ದಿನ
Image Credit source: Getty Images

Updated on: Aug 08, 2026 | 11:15 AM

ಮನುಷ್ಯನ ಅಚ್ಚುಮೆಚ್ಚಿನ ಸಾಕು ಪ್ರಾಣಿಗಳಲ್ಲಿ ಬೆಕ್ಕು (Cat) ಕೂಡ ಒಂದು.  ಬೆಕ್ಕು ಹಲವರ ಮುದ್ದಿನ ಪ್ರಾಣಿ, ಹೆಚ್ಚಿನವರು ತಮ್ಮ ಮನೆಗಳಲ್ಲಿ ಬೆಕ್ಕು ಸಾಕಲು ಇಷ್ಟಪಡುತ್ತಾರೆ. ಈ ಮುದ್ದು ಪ್ರಾಣಿಗಳಿಗಾಗಿಯೂ ಒಂದು ದಿನವಿದೆ. ಹೌದು ಆಗಸ್ಟ್‌ 8 ರಂದು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲಾಗುತ್ತದೆ. ಬೆಕ್ಕುಗಳ ಸುರಕ್ಷತೆ ಮತ್ತು ಅವುಗಳ ಹಕ್ಕುಗಳ ಬಗ್ಗೆ ಜನರ ತಿಳುವಳಿಕೆ ಮೂಡಿಸಲು, ಬೆಕ್ಕುಗಳ ಯೋಗಕ್ಷೇಮ ಹಾಗೂ ಅವುಗಳ ಆರೈಕೆಯ ಮಹತ್ವವನ್ನು ಎತ್ತಿ ತೋರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಬೆಕ್ಕುಗಳ ದಿನದ ಈ ವಿಶೇಷ ಸಂದರ್ಭದಲ್ಲಿ ಮನೆಯಲ್ಲಿ ಬೆಕ್ಕು ಸಾಕುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಅಂತಾರಾಷ್ಟ್ರೀಯ ಬೆಕ್ಕು ದಿನದ ಇತಿಹಾಸವೇನು?

ಪ್ರತಿ ವರ್ಷ ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕು ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವು 2002 ರಲ್ಲಿ ಅಂತರರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿಯು ಬೆಕ್ಕುಗಳ ರಕ್ಷಣೆಗಾಗಿ ಕರೆ ನೀಡಿದಾಗ ಹುಟ್ಟಿಕೊಂಡಿತು. ಆಗ ಅಂತರರಾಷ್ಟ್ರೀಯ ನಿಧಿಯು ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲು ನಿರ್ಧರಿಸಿತು. ಈ ದಿನದ ಮುಖ್ಯ ಉದ್ದೇಶವೆಂದರೆ ಬೆಕ್ಕುಗಳನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು, ಜೊತೆಗೆ ಬೆಕ್ಕುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು.

ಬೆಕ್ಕು ದಿನದ ಮಹತ್ವವೇನು?

  • ಈ ದಿನವು ಬೆಕ್ಕುಗಳ ರಕ್ಷಣೆ ಮತ್ತು ಬೆಂಬಲಕ್ಕೆ ನಾವು ಮನುಷ್ಯರು ಜವಾಬ್ದಾರರು ಎಂಬುದನ್ನು ನಮಗೆ ನೆನಪಿಸುತ್ತದೆ.
  • ಕೆಟ್ಟ ಹವಾಮಾನ, ಕಾರು ಅಪಘಾತಗಳು, ಮಾನವ ದೌರ್ಜನ್ಯ ಅಥವಾ ಇತರ ವಿಪತ್ತುಗಳಿಂದ ತೊಂದರೆಗೀಡಾಗುವ ಬೆಕ್ಕುಗಳಿಗೆ ಆಶ್ರಯ ನೀಡುವಂತೆ ಈ ದಿನ ಪ್ರೋತ್ಸಾಹಿಸುತ್ತದೆ.
  • ಬೆಕ್ಕುಗಳ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು, ಬೆಕ್ಕುಗಳಿಗೆ ದಯೆ ತೋರಿ ಅವುಗಳಿಗೂ ಉತ್ತಮ ಜೀವನವನ್ನು ಕಲ್ಪಿಸಬೇಕು, ಅನಾಥ ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
  • ವಿಶ್ವ ಬೆಕ್ಕು ದಿನದಂದು, ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಆಶ್ರಯಗಳು ಬೆಕ್ಕುಗಳನ್ನು ನೋಡಿಕೊಳ್ಳಲು, ಅವುಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಆಯೋಜಿಸುತ್ತವೆ.

ಇದನ್ನೂ ಓದಿ:  ಭಾರತದ ಪ್ರಮುಖ ಕೈಮಗ್ಗ ತಾಣಗಳು

ಮನೆಯಲ್ಲಿ ಬೆಕ್ಕನ್ನು ಸಾಕುವುದರಿಂದಾಗುವ ಪ್ರಯೋಜನಗಳೇನು?

ಮನೆಯಲ್ಲಿ ಬೆಕ್ಕು ಸಾಕುವುದರಿಂದ ಹಲ್ಲಿ, ಜಿರಳೆ, ಇಲಿ, ಹಾವುಗಳು ಕಾಟ ಇರೋದಿಲ್ಲ. ಇದರ ಜೊತೆಗೆ ಬೆಕ್ಕುಗಳನ್ನು ಸಾಕುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಹ ಲಭಿಸುತ್ತವೆ. ಅವುಗಳೆಂದರೆ,

ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ: ಬೆಕ್ಕಿನೊಂದಿಗೆ ಸಮಯ ಕಳೆಯುವುದರಿಂದ ಒತ್ತಡದ ಹಾರ್ಮೋನ್ ( ಕಾರ್ಟಿಸೋಲ್ ) ಕಡಿಮೆಯಾಗುತ್ತದೆ ಮತ್ತು ಸಂತೋಷದ ಹಾರ್ಮೋನ್ ( ಸಿರೊಟೋನಿನ್ ) ಹೆಚ್ಚಾಗುತ್ತದೆ . ಇದು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಒಂಟಿತನವನ್ನು ನಿವಾರಿಸುತ್ತದೆ: ಒಂಟಿಯಾಗಿ ವಾಸಿಸುವವರಿಗೆ ಅಥವಾ ವಯಸ್ಸಾದವರಿಗೆ ಬೆಕ್ಕು  ಉತ್ತಮ ಸ್ನೇಹಿತ ಅಂತಾನೇ ಹೇಳಬಹುದು. ಇದು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ ಮತ್ತು ಒಂಟಿತನವನ್ನು ಕಡಿಮೆ ಮಾಡುತ್ತದೆ .

ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ: ಬೆಕ್ಕನ್ನು ಸಾಕುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೆ, ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಂತೋಷ ನೀಡುತ್ತದೆ: ಬೆಕ್ಕುಗಳು ನಮ್ಮ ಮನಸ್ಸಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅವುಗಳ ಆಟ ತುಂಟಾಟ ನೋವನ್ನು ಮರೆಸಿ ಸಂತೋಷವನ್ನು ನಿಡುತ್ತದೆ.

ಜವಾಬ್ದಾರಿಯನ್ನು ಕಲಿಸುತ್ತದೆ: ಬೆಕ್ಕನ್ನು ನೋಡಿಕೊಳ್ಳುವುದು ಜವಾಬ್ದಾರಿ ಮತ್ತು ಶಿಸ್ತನ್ನು ಕಲಿಸುತ್ತದೆ. ಅದಕ್ಕೆ ಆಹಾರ ನೀಡುವುದು, ಸ್ವಚ್ಛಗೊಳಿಸುವುದು ಮತ್ತು ಅದನ್ನು ಪ್ರೀತಿಸುವುದು ನಿಮ್ಮ ಜೀವನದಲ್ಲಿ ಶಿಸ್ತನ್ನು ತರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us