International Day of Forests 2024: ಸ್ವಾರ್ಥವನ್ನು ಬಿಟ್ಟು ಸಂಪತ್ತು ಭರಿತವಾದ ಅರಣ್ಯ ಉಳಿಸಿ
ಕಾಡು ಎಂದಾಕ್ಷಣ ಮೊದಲು ನೆನಪಾಗುವುದೇ ಮರ, ಗಿಡ ಹಾಗೂ ಬಳ್ಳಿಯಿಂದ ಕೂಡಿದ ಹಚ್ಚ ಹಸಿರಿನ ವಾತಾವರಣ. ಆದರೆ ಇದೀಗ ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಿಸಿ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾನೆ. ಆದರೆ ಅರಣ್ಯವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗತ್ತದೆ. ಹಾಗಾದ್ರೆ ವಿಶ್ವ ಅರಣ್ಯ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.
ಅರಣ್ಯವೆನ್ನುವುದು ಭೂಮಿಯ ಬಹುದೊಡ್ಡ ಸಂಪತ್ತು. ಲಕ್ಷಾಂತರ ಬೆಳೆ ಬಾಳುವ ಮರ ಗಿಡಗಳನ್ನು ಒಳಗೊಂಡಿರುವ ಸ್ಥಳ. ಅನೇಕ ಜೀವರಾಶಿಗಳಿಗೆ ಆಸರೆಯಾದ ತಾಣವೇ ಈ ಅರಣ್ಯ. ಆದರೆ ಇಂದು ಮಾನವನ ಸ್ವಾರ್ಥದಿಂದ ಕಾಡುಗಳೆಲ್ಲವೂ ನಾಶವಾಗುತ್ತಿವೆ. ಅಲ್ಲಲ್ಲಿ ಕಟ್ಟಡಗಳು, ಕೈಗಾರಿಕೆಗಳು, ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣದಂತಹ ನಾನಾ ಕಾರ್ಯಗಳಿಂದ ಅರಣ್ಯಗಳು ನಾಶವಾಗಿ ಅಲ್ಲಿರುವ ಜೀವರಾಶಿಗಳಿಗೂ ನೆಲೆಯಿಲ್ಲದಂತಾಗಿದೆ. ಹೀಗಾಗಿ ಕಾಡಿನಲ್ಲಿರುವ ವಾಸಿಸುವ ಪ್ರಾಣಿಗಳು ನಾಡಿನತ್ತ ಬರುತ್ತಿದೆ. ಇತ್ತ ಕಾಡಿನ ನಾಶದಿಂದ ಪ್ರಕೃತಿಯೂ ಮುನಿದಿದೆ. ಮಳೆಯ ಪ್ರಮಾಣವು ಕಡಿಮೆಯಾಗಿದ್ದು, ಬಿಸಿಲಿನ ಬೆಗೆಯೂ ಹೆಚ್ಚಳವಾಗುತ್ತಿವೆ. ಕೊನೆಯಿಲ್ಲದ ಮಾನವನ ಸ್ವಾರ್ಥವು ಪ್ರಕೃತಿಯ ವಿಕೋಪಗಳಿಗೆ ಕಾರಣವಾಗಿದೆ. ಹೀಗಾಗಿ ಕಾಡನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಈ ಕಾರಣದಿಂದ ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅರಣ್ಯ ದಿನದ ಇತಿಹಾಸ:
1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು. ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ವಿಸ್ತೃತವಾಗಿ ನಡೆದ ಚರ್ಚೆಯಲ್ಲಿ ವಿಶ್ವ ಅರಣ್ಯ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಆದರೆ 2012ರಲ್ಲಿ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನಗಳ ಕಾರ‍್ಯಕ್ರಮಗಳನ್ನು ನಡೆಸಿತು. ಈ ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲು ವಿಶ್ವಸಂಸ್ಥೆಯೂ ಅನುಮತಿ ನೀಡಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಅರಣ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಎಲ್ಲರಂತಲ್ಲ ಈ ವಿಶೇಷಚೇತನ ಮಕ್ಕಳು, ಈ ಮಕ್ಕಳಿಗೂ ಬೇಕು ಪ್ರೀತಿಯ ಆರೈಕೆ
ವಿಶ್ವ ಅರಣ್ಯ ದಿನದ ಮಹತ್ವ:
ಪ್ರತಿ ವರ್ಷ ಆಚರಿಸಲಾಗುವ ವಿಶ್ವ ಅರಣ್ಯ ದಿನದಂದು ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಹಾಗೂ ಕಾಡಿನ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಕಾಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ದಿನದಂದು ಮರಗಳನ್ನು ನೆಡುವ ಅಭಿಯಾನದಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಜನಸಾಮಾನ್ಯರನ್ನು ಪ್ರೋತ್ಸಾಹಿಸುವ ಕೆಲಸಗಳು ನಡೆಯುತ್ತವೆ. ಅಷ್ಟೇ ಅಲ್ಲದೇ ಅರಣ್ಯ ಸಂರಕ್ಷಣೆಯ ಕುರಿತು ಕಾರ್ಯಗಾರಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ