International Jaguar Day 2025: ಕ್ಷೀಣಿಸುತ್ತಿದೆ ಜಾಗ್ವಾರ್ ಸಂತತಿ
ಜಾಗ್ವಾರ್ ನೋಡಲು ಚಿರತೆಯಂತೆಯೇ ಕಾಣುವ ಶಕ್ತಿಶಾಲಿ ಪ್ರಾಣಿ. ಇಂದು ಹವಾಮಾನ ಬದಲಾವಣೆ, ಕಾಡುಗಳ ನಾಶ, ಬೇಟೆ ಇವೆಲ್ಲದರ ಕಾರಣದಿಂದ ಜಾಗ್ವಾರ್ ಸಂತತಿ ಅಳಿವಿನಂಚಿನತ್ತ ಸಾಗಿದೆ. ಈ ನಿಟ್ಟಿನಲ್ಲಿ ಇವುಗಳ ಪ್ರಭೇದವನ್ನು ಸಂರಕ್ಷಿಸಲು ಪ್ರತಿವರ್ಷ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ.

ಪ್ಯಾಂಥೆರಾ ಓಂಕಾ ಎಂದೂ ಕರೆಯಲ್ಪಡುವ ಜಾಗ್ವಾರ್ (Jaguar)ಕೂಡ ಹುಲಿ, ಸಿಂಹ, ಚಿರತೆಯಂತೆ ಬೆಕ್ಕಿನ ಸಂತತಿಗೆ ಸೇರಿದ ದೈತ್ಯ ಪ್ರಾಣಿಯಾಗಿದ್ದು, ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ. ಆದರೆ ಇಂದು ಇವುಗಳು ಕಾಡಿನಲ್ಲಿ ಕಾಣ ಸಿಗುವುದೇ ಅಪರೂಪವಾಗಿದೆ. ಏಕೆಂದರೆ ಹವಾಮಾನ ಬದಲಾವಣೆ, ಕಾಡಿನ ನಾಶ, ಆವಾಸಸ್ಥಾನದ ನಷ್ಟ, ಬೇಟೆಯಾಡುವಿಕೆ ಇವೆಲ್ಲದರ ಕಾರಣದಿಂದ ಆನೆ, ಹುಲಿ, ಸಿಂಹಗಳಂತೆ ಇವುಗಳ ಸಂತತಿ ಕೂಡ ಅಳಿವಿನಂಚಿನತ್ತ ಸಾಗಿದೆ. ಹಾಗಾಗಿ ಇವುಗಳ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಜಾಗ್ವಾರ್ ದಿನದ ಇತಿಹಾಸವೇನು?
ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು 2018 ರಲ್ಲಿ ಸ್ಥಾಪಿಸಲಾಯಿತು. ಇದು ಜಾಗ್ವಾರ್‌ಗಳನ್ನು ಸಂರಕ್ಷಿಸುವ ಜಾಗತಿಕ ಪ್ರಯತ್ನದ ಭಾಗವಾಗಿದೆ. ಈ ಉಪಕ್ರಮವನ್ನು ಬೆಕ್ಕಿನ ಜಾತಿಗೆ ಸೇರಿದ ಕಾಡುಪ್ರಾಣಿಗಳನ್ನು ರಕ್ಷಿಸಲು ಮೀಸಲಾಗಿರುವ ಪ್ಯಾಂಥೆರಾ ಎಂಬ ಸಂಸ್ಥೆಯು ಹಲವಾರು ಸರ್ಕಾರಗಳು ಮತ್ತು ಸಂರಕ್ಷಣಾ ಗುಂಪುಗಳ ಸಹಯೋಗದೊಂದಿಗೆ ಮುನ್ನಡೆಸಿತು. ಮೆಕ್ಸಿಕೋದಿಂದ ಅರ್ಜೆಂಟೀನಾವರೆಗಿನ 18 ದೇಶಗಳಲ್ಲಿ ಜಾಗ್ವಾರ್‌ಗಳ ನೈಸರ್ಗಿಕ ಆವಾಸಸ್ಥಾನವನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ʼಜಾಗ್ವಾರ್ ಕಾರಿಡಾರ್ ಇನಿಶಿಯೇಟಿವ್ʼ ಕಾರ್ಯಕ್ರಮವನ್ನು ಅಳವಡಿಸಿಕೊಂಡ ನೆನಪಿಗಾಗಿ ಈ ದಿನದ ಆಚರಣೆಗೆ ನವೆಂಬರ್ 29 ಅನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಟ್ಟ ಹೈನುಗಾರಿಕೆ
ಅಂತಾರಾಷ್ಟ್ರೀಯ ಜಾಗ್ವಾರ್ ದಿನದ ಮಹತ್ವವೇನು?
- ಜಾಗ್ವಾರ್‌ಗಳ ಪರಿಸರ ಪ್ರಾಮುಖ್ಯತೆ ಮತ್ತು ಅವು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು.
- ಜಾಗ್ವಾರ್‌ಗಳು ಮುಕ್ತವಾಗಿ ವಿಹರಿಸಲು ಅನುವು ಮಾಡಿಕೊಡುವ ಸಂರಕ್ಷಿತ ಮೀಸಲು ಪ್ರದೇಶಗಳು ಮತ್ತು ವನ್ಯಜೀವಿ ಕಾರಿಡಾರ್‌ಗಳಂತಹ ಉಪಕ್ರಮಗಳನ್ನು ಅಳವಡಿಸಲು ಪ್ರೇರೇಪಿಸುವುದು.
- ಸರ್ಕಾರಗಳು, ಸಂಸ್ಥೆಗಳು ಜಾಗ್ವಾರ್ ಸಂರಕ್ಷಣೆಗೆ ಹಣಕಾಸು ಇತ್ಯಾದಿ ಸಹಾಯ ಮಾಡುವ ಮೂಲಕ ಇವುಗಳ ರಕ್ಷಣೆಗೆ ಕೊಡುಗೆ ನೀಡಲು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




