
ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶದ (Nation) ಆರ್ಥಿಕ ಅಭಿವೃದ್ಧಿಯಲ್ಲಿ (Development), ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಒಟ್ಟಾರೆಯಾಗಿ ಜಗತ್ತಿನ ಅಭಿವೃದ್ಧಿಯಲ್ಲಿ ಕಾರ್ಮಿಕರ (Labour) ಪಾತ್ರ ಬಹು ಮುಖ್ಯವಾದದ್ದು. ಇವರು ಇಲ್ಲದೆ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹೌದು ಕಾರ್ಮಿಕರು ಹಗಲು ರಾತ್ರಿ, ಬಿಸಿಲು-ಮಳೆ ಎನ್ನದೆ ಸಮರ್ಪಣಾ ಭಾವದಿಂದ ಕಠಿಣ ಶ್ರಮ ವಹಿಸಿ ದುಡಿಯುತ್ತಾರೆ. ಇಂತಹ ದುಡಿಯುವ ವರ್ಗದವರ ಕೆಲಸವನ್ನು, ದೇಶದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಗೌರವಿಸಲು ಮತ್ತು ಅವರ ಕಷ್ಟಗಳನ್ನು ಸ್ಮರಿಸಲು ಪ್ರತಿವರ್ಷ ಮೇ 1 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ದಿನವನ್ನು (International Labour Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯಿರಿ.
ಪ್ರತಿ ವರ್ಷ ಮೇ 1 ರಂದು, ಮೇ ದಿನ ಎಂದೂ ಕರೆಯಲ್ಪಡುವ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಕಾರ್ಮಿಕ ದಿನವು ಕಾರ್ಮಿಕರ ಕಠಿಣ ಪರಿಶ್ರಮದ ಆಚರಣೆಯಷ್ಟೇ ಅಲ್ಲ, ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಪ್ರಮುಖ ದಿನವೂ ಆಗಿದೆ. ಈ ಅಂತಾರಾಷ್ಟ್ರೀಯ ಕಾರ್ಮಿಕ ದಿನವು 19 ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕನ್ ಕಾರ್ಮಿಕ ಚಳುವಳಿಯೊಂದಿಗೆ ಪ್ರಾರಂಭವಾಯಿತು.
ಮೇ 1, 1886 ರಂದು, 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯೊಂದಿದೆ ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮುಷ್ಕರವನ್ನು ಪ್ರಾರಂಭಿಸಿದರು. ನಂತರ ಈ ಪ್ರತಿಭಟನೆ ಚಿಕಾಗೋದ ಹೇಮಾರ್ಕೆಟ್ ಪ್ರದೇಶದಲ್ಲಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಈ ಘಟನೆಯಲ್ಲಿ ಏಳು ಪೊಲೀಸರು ಮತ್ತು ನಾಲ್ವರು ನಾಗರಿಕರು ಪ್ರಾಣ ಕಳೆದುಕೊಂಡರು. ಈ ಘಟನೆಯ ಸ್ಮರಣಾರ್ಥವಾಗಿ, ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು. 1889 ರಲ್ಲಿ, ಯುರೋಪಿನ ಅನೇಕ ಸಮಾಜವಾದಿ ಪಕ್ಷಗಳು ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಒಟ್ಟಾಗಿ ಬಂದವು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು 1923 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಕಮ್ಯುನಿಸ್ಟ್ ನಾಯಕ ಸಿಂಗಾರವೇಲು ಚೆಟ್ಟಿಯಾರ್ ಅವರು ಚೆನ್ನೈನಲ್ಲಿ ಪ್ರಾರಂಭಿಸಿದರು. ಕಾರ್ಮಿಕರ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಒತ್ತಾಯಿಸಿ ಅವರು ಮದ್ರಾಸ್ ಹೈಕೋರ್ಟ್ ಮುಂದೆ ಮೊದಲ ಕಾರ್ಮಿಕ ದಿನಾಚರಣೆಯ ಸಭೆಯನ್ನು ಆಯೋಜಿಸಿದರು. ಈ ಸಭೆಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: ʼಕಾಯಕವೇ ಕೈಲಾಸʼ ಎಂದು ಮನುಕುಲಕ್ಕೆ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕ ಬಸವೇಶ್ವರರು
ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಉದ್ದೇಶವು ಕಾರ್ಮಿಕರ ಕಠಿಣ ಪರಿಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ, ಶೋಷಣೆಯನ್ನು ತಪ್ಪಿಸಲು ಅವರ ಹಕ್ಕುಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದಾಗಿದೆ. ಈ ದಿನವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆ ಮತ್ತು ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸುತ್ತದೆ ಅಲ್ಲದೆ ಈ ದಿನವು ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ, ನ್ಯಾಯಯುತ ಕೆಲಸದ ಸಮಯ ಮತ್ತು ಶೋಷಣೆ ನಿರ್ಮೂಲನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಅನೇಕ ದೇಶಗಳಲ್ಲಿ, ಕಾರ್ಮಿಕರ ದಿನವು ರಾಷ್ಟ್ರೀಯ ರಜಾದಿನವಾಗಿದೆ. ಈ ದಿನದ ಸಂದರ್ಭದಲ್ಲಿ, ಕಾರ್ಮಿಕರ ಕೊಡುಗೆಯನ್ನು ಗೌರವಿಸಲು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸ್ಥಳಗಳಲ್ಲಿ ರ್ಯಾಲಿಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೆ, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳ ಮೂಲಕ ಕಾರ್ಮಿಕರ ಹಕ್ಕುಗಳನ್ನು ಎತ್ತಿ ತೋರಿಸಲಾಗುತ್ತದೆ. ಭಾರತ, ದಕ್ಷಿಣ ಆಫ್ರಿಕಾ, ಟುನೀಶಿಯಾ, ಟಾಂಜಾನಿಯಾ, ಜಿಂಬಾಬ್ವೆ ಮತ್ತು ಚೀನಾದಂತಹ ಪ್ರಪಂಚದ ಹಲವು ದೇಶಗಳಲ್ಲಿ, ಮೇ 1 ಸಾರ್ವಜನಿಕ ರಜಾದಿನವಾಗಿದೆ. ಈ ದಿನದಂದು ಕಾರ್ಮಿಕರ ಕೊಡುಗೆಯನ್ನು ಗೌರವಿಸಲಾಗುತ್ತದೆ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ