Raw Mangoes: ಮಾವಿನಕಾಯಿ ಆರೋಗ್ಯಕರವೇ? ಹಸಿ ಮಾವಿನಕಾಯಿ ಚಟ್ನಿಯ ಊಟಕ್ಕೆ ಸೂಪರ್
ಮಾವಿನ ಹಣ್ಣುಗಳು ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಅತಿಯಾಗಿ ಲಭ್ಯವಿರುವ ಹಸಿ ಮಾವಿನಕಾಯಿಯಿಂದ, ಮಾವಿನಕಾಯಿ ಪನ್ನಾದಂತಹ ಪಾನೀಯ, ಮಾವಿನ ಉಪ್ಪಿನಕಾಯಿ, ಸಲಾಡ್ ಇತ್ಯಾದಿಗಳನ್ನು ತಯಾರಿಸುತ್ತಾರೆ. ಹಾಗೆಯೇ ಮಾವಿನಕಾಯಿಯನ್ನು ಬಳಸಿ ಸುಲಭವಾಗಿ ಚಟ್ನಿಯನ್ನು ತಯಾರಿಸಬಹುದು. ಪೌಷ್ಟಿಕತಜ್ಞೆ ಪೂಜಾ ಮಖಿಜಾ ಅವರು ಇತ್ತೀಚಿಗೆ ಆರೋಗ್ಯಕರ ಹಸಿ ಮಾವಿನಕಾಯಿ ಚಟ್ನಿಯ ಪಾಕವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ನಮ್ಮಲ್ಲಿ ಅನೇಕ ಜನರು ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪಕ್ವವಾದ ಮಾವಿನಹಣ್ಣಿನ ಹೊರತಾಗಿ, ಹಸಿ ಮಾವು ಕೂಡಾ ತಿನ್ನಲು ರುಚಿಕರವಾಗಿರುತ್ತದೆ. ಮಾವಿನಕಾಯಿಯನ್ನು ಸವಿಯಲು ಹಲವು ಮಾರ್ಗಗಳಿವೆ. ಕೆಲವರು ಮಾವಿನಕಾಯಿಯನ್ನು ತುಂಡರಿಸಿ ಉಪ್ಪು, ಮೆಣಸಿನ ಪುಡಿಯೊಂದಿಗೆ ಅದನ್ನು ಮಿಶ್ರಣ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಇನ್ನು ಕೆಲವರು ಬೆರೆ ಬೇರೆ ಪ್ರಾದೇಶಿಕ ಪಾಕವಿಧಾನಗಳನ್ನು ತಯಾರಿಸಲು ಬಳಸುತ್ತಾರೆ. ಇದರ ಹೊರತಾಗಿ ನೀವು ಮಾವಿನಕಾಯಿಯಿಂದ ತ್ವರಿತ ಮತ್ತು ಸುಲಭ ಪಾಕವಿಧಾನವನ್ನು ಹುಡುಕುತ್ತಿದ್ದರೆ, ಚಟ್ನಿಯನ್ನು ಸುಲಭವಾಗಿ ತಯಾರಿಸಬಹುದು. ಇದು ಊಟದೊಂದಿಗೆ ಸವಿಯಲು ಉತ್ತಮವಾಗಿರುತ್ತದೆ. ಸೆಲೆಬ್ರಿಟಿ ಪೌಷ್ಟಿಕತಜ್ಞೆ ಪೂಜಾ ಮಖಿಜಾ ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರುಚಿಕರವಾದ ಹಸಿ ಮಾವಿನಕಾಯಿ ಚಟ್ನಿಯ ಪಾಕ ವಿಧಾನವನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿರುವ ಹಸಿಮಾವಿನಕಾಯಿ ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.
ಮಾವಿನಕಾಯಿ ಆರೋಗ್ಯಕರವೇ? ಹಸಿ ಮಾವಿನಕಾಯಿಯ ಪ್ರಯೋಜನಗಳು:
ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ: ಹಸಿ ಮಾವಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ: ಮಾವಿನಕಾಯಿ ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಅಜೀರ್ಣ, ಮಲಬದ್ಧತೆ, ಅತಿಸಾರ ಮುಂತಾದ ಹೊಟ್ಟೆ ಸಂಬಂಧಿ ಕಾಯಿಲೆಯನ್ನು ಗುಣಪಡಿಸಲು ಸಹಾಯಕವಾಗಿದೆ.
ಹೃದಯಕ್ಕೆ ಒಳ್ಳೆಯದು: ಮಾವಿನಕಾಯಿ ನಿಯಾಸಿನ್ ಅಂಶವನ್ನು ಹೊಂದಿರುತ್ತದೆ. ಇದು ಉತ್ತಮ ಆರೋಗ್ಯಕರ ಕೊಲೆಸ್ಟಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ:Mangoes Benefits: ತಿನ್ನುವ ಮೊದಲು ಮಾವಿನಹಣ್ಣುಗಳನ್ನು ನೆನೆಸುವುದು ಮುಖ್ಯವೇ? ತಜ್ಞರು ಸಲಹೆ ಇಲ್ಲಿದೆ
ಶಾಖದ ಬಳಲಿಕೆಯನ್ನು ತಡೆಯುತ್ತದೆ: ಬೇಸಿಗೆಯ ಶಾಖದ ಬಳಲಿಕೆ ಮತ್ತು ಸೂರ್ಯನ ಶಾಖದ ಬೇಗೆಯಿಂದ ಅಪಾಯವಿರುವವರಿಗೆ ಹಸಿಮಾವಿನಕಾಯಿಯ ರಸವನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ. ಇದು ದೇಹವನ್ನು ನೈಸರ್ಗಿಕವಾಗಿ ನೀರಿನಾಂಶಕ್ಕೆ ಸಹಾಯ ಮಾಡುತ್ತದೆ.
ತೂಕನಷ್ಟಕ್ಕೆ ಸಹಕಾರಿ: ಹಸಿಮಾವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಮತ್ತು ಇದರಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ನಿಮ್ಮ ತೂಕನಷ್ಟದ ಆಹಾರ ಕ್ರಮಕ್ಕೆ ಇದು ಉತ್ತಮ ಆಯ್ಕೆಯಾಗಿದೆ.
ಮಾವಿನಕಾಯಿ ಚಟ್ನಿ ಪಾಕವಿಧಾನ:
ಒಂದು ಹಸಿ ಮಾವಿನಕಾಯಿಯನ್ನು ತೆಗೆದುಕೊಂದು ಅದನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆ ಸುಳಿದು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿ. ನಂತರ ಇದನ್ನು ತಣ್ಣೀರಿನ ಬಟ್ಟಿನಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಇರಿಸಿ. ನಂತರ ಹಸಿ ಮೆಣಸಿನಕಾಯಿ ಮತ್ತು ಒಣ ಕಾಶ್ಮೀರಿ ಮೆಣಸಿನಕಾಯಿಯ ಒಗ್ಗರಣೆ ತಯಾರಿಸಿ, ಈ ಮಿಶ್ರಣವನ್ನು ಒಂದು ಮಿಕ್ಸಿ ಜಾರ್ಗೆ ಸೇರಿಸಿ. ಮುಂದೆ ಸ್ವಲ್ಪ ಹೆಚ್ಚಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಅದೇ ಮಿಕ್ಸಿ ಜಾರ್ಗೆ ಸೇರಿಸಿ. ಬಳಿಕ ಬೆಳ್ಳುಳ್ಳಿ, ಲವಂಗ, ತೆಂಗಿನಕಾಯಿ ತುರಿ, ಕರಿಬೇವಿನ ಎಲೆಗಳನ್ನು ಅದಕ್ಕೆ ಸೇರಿಸಿಕೊಳ್ಳಿ. ಕೊನೆಗೆ ನೆನೆಸಿದ ಹಸಿ ಮಾವಿನ ಹೋಳುಗಳನ್ನು ಜಾರ್ಗೆ ಸೇರಿಸಿ, ಚೆನ್ನಾಗಿ ರುಬ್ಬಿ ನಯವಾದ ಚಟ್ನಿಯನ್ನು ತಯಾರಿಸಿಕೊಳ್ಳಿ. ಈ ಮಾವಿನಕಾಯಿ ಚಟ್ನಿ ಊಟದ ಜೊತೆ ಸವಿಯಲು ಉತ್ತಮವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ