ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವ ತಪ್ಪನ್ನು ಮಾಡದಿರಿ
ಹಣ್ಣು, ತರಕಾರಿ ಸೇರಿದಂತೆ ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ದೀರ್ಘ ಕಾಲದ ವರೆಗೆ ತಾಜಾವಾಗಿರಲೆಂದು ಫ್ರಿಡ್ಜ್‌ನಲ್ಲಿ ಶೇಖರಿಸಿಡುತ್ತಾರೆ. ಆದ್ರೆ ಈ ಕೆಲವೊಂದು ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟರೆ, ತಾಜಾವಾಗಿ ಕಂಡರೂ ಸಹ ಅವುಗಳ ರುಚಿ ಕೆಡುತ್ತದಂತೆ. ಹಾಗಿದ್ರೆ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವಲ್ಲ ಎಂಬುದನ್ನು ನೋಡೋಣ ಬನ್ನಿ.

ರೆಫ್ರಿಜರೇಟರ್‌ಗಳನ್ನು (refrigerator) ಆಹಾರ ಪದಾರ್ಥಗಳು ಕೆಡದಂತೆ ರಕ್ಷಿಸುವ ಆಪತ್ಬಾಂಧವ ಅಂತಾನೇ ಹೇಳಬಹುದು. ಇವುಗಳು ಹಣ್ಣು, ತರಕಾರಿ, ಹಾಲು, ಮೊಟ್ಟೆ ಸೇರಿದಂತೆ ಹೆಚ್ಚಿನ ಆಹಾರ ಪದಾರ್ಥಗಳನ್ನು ಕೆಡದಂತೆ ನೋಡಿಕೊಳ್ಳುತ್ತವೆ. ಮತ್ತು ಫ್ರಿಡ್ಜ್‌ನಲ್ಲಿ ಇಟ್ಟಂತಹ ಆಹಾರಗಳು ದೀರ್ಘ ಕಾಲದವರೆಗೆ ತಾಜಾವಾಗಿರುತ್ತದೆ. ಆದ್ರೆ ಏನ್ ಗೊತ್ತಾ, ಫ್ರಿಡ್ಜ್‌ನಲ್ಲಿ ಇಡುವಂತಹ ಎಲ್ಲಾ ಆಹಾರಗಳು ತಾಜಾವಾಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ, ಹೌದು ಈ ಒಂದಷ್ಟು ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳು ಬೇಗನೆ ಹಾಳಾಗುವುದರ ಜೊತೆಗೆ, ಅವುಗಳ ರುಚಿಯೂ ಕೆಡುತ್ತದೆ. ಹಾಗಿದ್ರೆ ಯಾವೆಲ್ಲಾ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದು ಎಂಬುದನ್ನು ತಪ್ಪದೆ ತಿಳಿಯಿರಿ.
ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು:
ಬ್ರೆಡ್: ಹೆಚ್ಚಿನವರು ತಾಜಾವಾಗಿರಲೆಂದು ಬ್ರೆಡನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಬ್ರೆಡ್ ರುಚಿ ಕಳೆದುಕೊಳ್ಳುವುದರ ಜೊತೆಗೆ ಅದು ಬೇಗನೆ ಒಣಗಿ ಹೋಗುತ್ತದೆ. ಅದ್ದರಿಂದ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು ಕೋಣೆಯ ಉಷ್ಣಾಂಶದಲ್ಲಿ ಗಾಳಿಯಾಡದ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ.
ಜೇನುತುಪ್ಪ: ಜೇನುತುಪ್ಪವನ್ನು ಸಹ ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವಲ್ಲವಂತೆ. ಏಕೆಂದರೆ ಫ್ರಿಡ್ಜ್‌ನಲ್ಲಿ ಇಡುವುದರಿಂದ ಜೇನುತುಪ್ಪ ದಪ್ಪವಾಗುವುದರ ಜೊತೆಗೆ ಅದರ ಪರಿಮಳವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಜೇನುತುಪ್ಪ ದೀರ್ಘಕಾಲ ಬಾಳಿಕೆ ಬರಲು, ಅದರ ಪರಿಮಳ, ರುಚಿ ಕೆಡದಿರಲು ನೀವು ಫ್ರಿಡ್ಜ್ ಬದಲು ಕೋಣೆಯ ಉಷ್ಣಾಂಶದಲ್ಲಿ ಒಂದು ಜಾರ್‌ನಲ್ಲಿ ಸಂಗ್ರಹಿಸಿಡಿ,
ಈರುಳ್ಳಿ: ನೀವು ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ. ಏಕೆಂದರೆ ರೆಫ್ರಿಜರೇಟರ್‌ನಲ್ಲಿನ ತೇವಾಂಶವು ಈರುಳ್ಳಿಗೆ ಹಾನಿಕಾರಕವಾಗಿದೆ. ಇದರಿಂದ ಈರುಳ್ಳಿ ಒದ್ದೆಯಾಗಿ, ಮೃದುವಾಗಿ ಬೇಗನೆ ಕೆಡಲು ಆರಂಭಿಸುತ್ತದೆ. ಆದ್ದರಿಂದ ಯಾವಾಗಲೂ ಈರುಳ್ಳಿಯನ್ನು ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸಿ.
ಆಲೂಗಡ್ಡೆ: ಫ್ರಿಡ್ಜ್‌ನಲ್ಲಿ ಆಲೂಗಡ್ಡೆಯನ್ನು ಇಡುವುದು ಸಹ ಸೂಕ್ತವಲ್ಲ. ಏಕೆಂದರೆ ಆಲೂಗಡ್ಡೆಯಲ್ಲಿರುವ ಪಿಷ್ಟವು ತಣ್ಣಗಾದಾಗ ಅವು ಸಕ್ಕರೆಯಾಗಿ ಬದಲಾಗುತ್ತದೆ, ಇದು ಅವುಗಳ ರುಚಿ ಮತ್ತು ವಿನ್ಯಾಸ ಎರಡನ್ನೂ ಬದಲಾಯಿಸುತ್ತದೆ. ನಂತರ ಆ ಆಲೂಗಡ್ಡೆಯಿಂದ ಅಡುಗೆ ಮಾಡಿದಾಗ, ಸ್ವಲ್ಪ ರುಚಿಯನ್ನು ನೀಡುತ್ತದೆ. ಇದರಿಂದ ಸಂಪೂರ್ಣ ಅಡುಗೆಯ ರುಚಿ ಕೆಟ್ಟುಹೋಗುತ್ತದೆ. ಹಾಗಾಗಿ ಆಲೂಗಡ್ಡೆಗಳನ್ನು ಅಡುಗೆ ಮನೆಯಲ್ಲಿ ಬುಟ್ಟಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.
ಇದನ್ನೂ ಓದಿ: ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿಡುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ, ಅಲ್ಲವೋ ಈ ಸ್ಟೋರಿ ಮೂಲಕ ತಿಳಿಯಿರಿ
ಬೆಳ್ಳುಳ್ಳಿ: ರೆಫ್ರಿಜರೇಟರ್ ತಾಪಮಾನವು ಬೆಳ್ಳುಳ್ಳಿ ಬೇಗನೆ ಮೊಳಕೆಯೊಡೆಯಲು ಮತ್ತು ಅದರ ಪರಿಮಳವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು ತೇವಾಂಶವಿರದ, ಗಾಳಿ ಬೀಳುವ ಸ್ಥಳದಲ್ಲಿ ಸಂಗ್ರಹಿಸಿಡಿ
ಟೊಮೆಟೊ: ನೀವು ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅವುಗಳ ಮೂಲ ಪರಿಮಳ ಕಳೆದುಹೋಬಹುದು. ಜೊತೆಗೆ ಟೊಮೆಟೊ ಬೇಗನೆ ಕೆಡಬಹುದು. ಆದ್ದರಿಂದ ಮನೆಗೆ ತಂದಂತಹ ಟೊಮೆಟೊ ದೀರ್ಘ ಕಾಲ ಬಾಳಿಕೆ ಬರಬೇಕೆಂದರೆ ಅವುಗಳನ್ನು ರೆಫ್ರಿಜರೇಟರ್ ಬದಲು ಬುಟ್ಟಿಯಲ್ಲಿ ಸಂಗ್ರಹಿಸಿಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




