ತಪ್ಪಿಯೂ ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದಂತೆ
ಚಹಾ ಬಹುತೇಕರ ನೆಚ್ಚಿನ ಪಾನೀಯ. ಚಹಾ ಪ್ರೇಮಿಗಳಂತಲೂ ದಿನಕ್ಕೆ 4 ರಿಂದ 5 ಬಾರಿ ಟೀ ಕುಡಿಯುತ್ತಾರೆ. ಟೀ ಜೊತೆಗೆ ಬಿಸ್ಕೆಟ್, ರಸ್ಕ್ ಇತ್ಯಾದಿ ತಿಂಡಿಗಳನ್ನು ಸಹ ಸವಿಯುತ್ತಾರೆ. ನೀವು ಸಹ ಟೀಯೊಂದಿಗೆ ಏನಾದ್ರೂ ತಿಂಡಿ ತಿನ್ನುವ ಅಭ್ಯಾಸ ಇದ್ಯಾ? ಹಾಗಿದ್ದರೆ ಈ ಕೆಲವೊಂದು ತಿಂಡಿಗಳನ್ನು ಚಹಾದೊಂದಿಗೆ ಸೇವಿಸಲೇಬೇಡಿ, ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಯಾವೆಲ್ಲಾ ಆಹಾರಗಳನ್ನು ಚಹಾದೊಂದಿಗೆ ಸವಿಯಬಾರದು ಎಂಬುದನ್ನು ನೋಡೋಣ ಬನ್ನಿ.

ಚಹಾ (tea) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗಂತೂ ಬಿಸಿ ಬಿಸಿ ಚಹಾ ಹಾಟ್ ಫೇವರೇಟ್. ಅದೆಷ್ಟೋ ಜನಕ್ಕೆ ಒಂದು ಕಪ್ ಚಹಾ ಕುಡಿಯದೆ ದಿನವೇ ಆರಂಭವಾಗುವುದಿಲ್ಲ, ಇನ್ನೂ ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯದಿದ್ದರೇ ತಲೆಯೇ ಓಡುವುದಿಲ್ಲ. ಹೆಚ್ಚಾಗಿ ಟೀ, ಬಿಸ್ಕೆಟ್, ಪಕೋಡಾ ಇತ್ಯಾದಿ ತಿನಿಸುಗಳೊಂದಿಗೆ ಸವಿಯಲಾಗುತ್ತದೆ. ಇದು ಬಾಯಿ ರುಚಿ ಹೆಚ್ಚಿಸಬಹುದು. ಆದರೆ ಕೆಲವು ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡಬಾರದು ಎಂಬುವುದನ್ನು ತಿಳಿಯಿರಿ.
ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದು:
ಬಿಸ್ಕೆಟ್: ಹೆಚ್ಚಿನವರು ಚಹಾದೊಂದಿಗೆ ಬಿಸ್ಕೆಟ್ ಅಥವಾ ರಸ್ಕ್‌ಗಳನ್ನು ತಿನ್ನುತ್ತಾರೆ. ಈ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಲ್ಲಿ ಸಂಸ್ಕರಿಸಿದ ಹಿಟ್ಟು, ಟ್ರಾನ್ಸ್ ಫ್ಯಾಟ್ ಮತ್ತು ಹೆಚ್ಚಿನ ಸಕ್ಕರೆ ಇದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಮತ್ತು ಇದು ತೂಕ ಹೆಚ್ಚಳ, ಗ್ಯಾಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ ಸೇರಿದಂತೆ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಎಣ್ಣೆಯಲ್ಲಿ ಕರಿದ ತಿಂಡಿ: ಚಹಾದೊಂದಿಗೆ ಸಮೋಸಾ, ಪಕೋಡದಂತಹ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಲು ಬಲು ರುಚಿಯಾಗಿರಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇದು ಹೃದಯ ಮತ್ತು ಹೊಟ್ಟೆ ಎರಡಕ್ಕೂ ಹಾನಿಕಾರಕವಾಗಿದೆ. ಈ ತಿಂಡಿಗಳಲ್ಲಿರುವ ಹೆಚ್ಚುವರಿ ಎಣ್ಣೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಸಿಹಿತಿಂಡಿಗಳು: ಕೇಕ್, ಪೇಸ್ಟ್ರಿ ಅಥವಾ ಇತರ ಸಿಹಿತಿಂಡಿಗಳನ್ನು ಚಹಾದೊಂದಿಗೆ ಸೇವಿಸುವುದು ಒಳ್ಳೆಯದಲ್ಲ. ಇವುಗಳನ್ನು ಚಹಾದೊಂದಿಗೆ ಸೇವನೆ ಮಾಡುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಹೊಟ್ಟೆ ಭಾರ ಮತ್ತು ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಅಲ್ಲದೆ ಚಹಾದೊಂದಿಗೆ ಅತಿಯಾದ ಸಕ್ಕರೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಕ್ರಮೇಣ ಹೆಚ್ಚಾಗುತ್ತದೆ. ಇದು ಬೊಜ್ಜು, ಮಧುಮೇಹ ಮತ್ತು ಆಯಾಸಕ್ಕೆ ಕಾರಣವಾಗಬಹುದು.
ಚಹಾ ಕುಡಿದ ತಕ್ಷಣ ಹಣ್ಣು ತಿನ್ನುವುದು: ಅನೇಕ ಜನರು ಇದನ್ನು ಆರೋಗ್ಯಕರವೆಂದು ಪರಿಗಣಿಸುತ್ತಾರೆ ಆದರೆ ಈ ಅಭ್ಯಾಸವು ಹಾನಿಕಾರಕವಾಗಿದೆ. ಚಹಾದಲ್ಲಿರುವ ಟ್ಯಾನಿನ್ ದೇಹ ಹಣ್ಣಿನಿಂದ ಕಬ್ಬಿಣ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದಾಗಿ ದೇಹವು ಸಂಪೂರ್ಣ ಪೋಷಣೆಯನ್ನು ಪಡೆಯುವುದಿಲ್ಲ. ಚಹಾ ಕುಡಿಯುವ ಅರ್ಧ ಗಂಟೆ ಮೊದಲು ಅಥವಾ ನಂತರ ಹಣ್ಣು ತಿನ್ನಿರಿ.
ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ
ಚಾಕೊಲೇಟ್: ಚಾಕೊಲೇಟ್ ಮತ್ತು ಚಹಾ ಎರಡರಲ್ಲೂ ಕೆಫೀನ್ ಇರುತ್ತದೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ, ಚಡಪಡಿಕೆ ಉಂಟಾಗುತ್ತದೆ ಮತ್ತು ನಿದ್ರೆಯ ಸಮಸ್ಯೆ ಉಂಟಾಗುತ್ತದೆ. ಚಹಾದೊಂದಿಗೆ ಚಾಕೊಲೇಟ್ ತಿನ್ನುವುದರಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗಬಹುದು.
ಚಹಾದೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳುವುದು: ಕೆಲವರು ಚಹಾದೊಂದಿಗೆ ಔಷಧಿಗಳನ್ನು ನುಂಗುತ್ತಾರೆ, ಇದು ದೊಡ್ಡ ತಪ್ಪು. ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಾಗಿ ಔಷಧಿಗಳನ್ನು ಯಾವಾಗಲೂ ನೀರಿನೊಂದಿಗೆ ತೆಗೆದುಕೊಳ್ಳಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




