Kannada Rajyotsava 2025: ಕನ್ನಡ ರಾಜ್ಯೋತ್ಸವ ಸಂಭ್ರಮ; ಮೈಸೂರು ರಾಜ್ಯ ಕರ್ನಾಟಕವಾದ ಇತಿಹಾಸದ ಬಗ್ಗೆ ನೀವು ತಿಳಿಯಲೇಬೇಕು
ನವೆಂಬರ್ 01 ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಏಕೆಂದರೆ ಇದು ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ಸುದಿನ. ಪ್ರತಿ ವರ್ಷವೂ ನವೆಂಬರ್ 1 ರಂದು ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿಯ ರಾಜ್ಯೋತ್ಸವ ಆಚರಣೆಗೂ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ನವೆಂಬರ್ 1 ರಂದೇ ಏಕೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ, ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದರ ಬಗ್ಗೆ ತಿಳಿಯಿರಿ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡದ ಕಂಪನ್ನು ಪಸರಿಸುವ ನಾಡ ಹಬ್ಬ ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ದಿನ ಗಣನೆ ಶುರುವಾಗಿದೆ. ಪ್ರತಿ ವರ್ಷ ನವೆಂಬರ್ 01 ರಂದು ನಾಡಿನ ಮೂಲೆ ಮೂಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಷ್ಟಕ್ಕೂ ನವೆಂಬರ್ 01 ರಂದೇ ಏಕೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ, ಕನ್ನಡ ನಾಡು-ನುಡಿಗೆ ಸಂಬಂಧಿಸಿ ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ಕನ್ನಡ ರಾಜ್ಯೋತ್ಸವದ ಇತಿಹಾಸವೇನು?
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾಷೆಗಳ ಆಧಾರದ ಮೇಲೆ ಭಾರತದ ವಿವಿಧ ಪ್ರಾಂತ್ಯಗಳು ರಾಜ್ಯಗಳಾಗಿ ರೂಪುಗೊಂಡವು. ಅದೇ ರೀತಿ ಮೈಸೂರು ಸಂಸ್ಥಾನ 1956 ರ ನವೆಂಬರ್ 1 ರಂದು ಮೈಸೂರು ರಾಜ್ಯವಾಗಿ ನಿರ್ಮಾಣವಾಯಿತು. ಹೌದು ದಕ್ಷಿಣ ಭಾರದ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವಾಗಿ (ಇಂದಿನ ಕರ್ನಾಟಕ) ಘೋಷಣೆ ಮಾಡಲಾಯಿತು. ಕನ್ನಡಿಗರ ರಾಜ್ಯ ಉದಯವಾದ ಈ ದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದಿದ್ದು ಯಾವಾಗ?
ಕರ್ನಾಟಕ ಮೊದಲು ಮೈಸೂರು ಪ್ರಾಂತ್ಯವಾಗಿತ್ತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1950 ರಲ್ಲಿ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಯ ಆಧಾರದ ಮೇಲೆ ವಿವಿಧ ರಾಜ್ಯಗಳಾಗಿ ರೂಪುಗೊಂಡವು. ಅದೇ ರೀತಿ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿಗೆ ಸೂಚಿಸಿದರು. ಹಾಗೂ 1956 ರ ನವೆಂಬರ್ 1 ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಹೌದು ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಕನ್ನಡ ಭಾಷಿಗರ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂತು.
ಕರ್ನಾಟಕ ಹುಟ್ಟಿಗೆ ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ ಅಂದರೆ 1905 ರಲ್ಲಿ ಆರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956 ರ ನವೆಂಬರ್ 1 ರಂದು ಕನ್ನಡ ರಾಜ್ಯ ಉದಯವಾಯಿತು. ನಂತರ ನವೆಂಬರ್ 01 1973 ರಲ್ಲಿ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಡಲಾಯಿತು. ಹೌದು ಮೈಸೂರು ರಾಜ್ಯ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡಬೇಕೆಂದು ಇದಾದೆ ಇದ್ದ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ ನವೆಂಬರ್ 1, 1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು. ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಆಯ್ಕೆ ಮಾಡಲಾಯಿತು, ಇದರ ಮಾನ್ಯತೆ ಆಲೂರು ವೆಂಕಟರಾವ್ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಕಾರಣರಾದ ಸಾಹಿತಿಗಳಾದ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ. ಎನ್. ಕೃಷ್ಣ ರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯರಿಗೂ ಸೇರುತ್ತದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ
ಕರ್ನಾಟಕ ಪದದ ಮೂಲದ ಬಗ್ಗೆ ನಿಮಗೆ ಗೊತ್ತಾ?
ಕರ್ನಾಟಕ ಎಂಬ ಪದದ ಮೂಲವು ಸಂಸ್ಕೃತ ಭಾಷೆಯಿಂದ ಬಂದಿದ್ದು,ಸಂಸ್ಕೃತದಲ್ಲಿ ಕರುನಾಡು ಪದದ ಅರ್ಥ ಕಪ್ಪು ಮಣ್ಣಿನ ನಾಡು. ಕರ್ನಾಟಕ ಹೆಸರು ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಮಹಾಭಾರತದ ಕಾಲದಲ್ಲಿ ಕರ್ನಾಟಕವನ್ನು ಕನ್ನಡ ನಾಡು ಅಥವಾ ಕುಂತಳ ನಾಡು ಎಂದು ಕರೆಯಲಾಗುತ್ತಿತ್ತು.
ಕನ್ನಡ ರಾಜ್ಯೋತ್ಸವವನ್ನು ಹೇಗೆ ಆಚರಿಸಲಾಗುತ್ತದೆ?
ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಕನ್ನಡಿಗರ ಸ್ಫೂರ್ತಿಯ ಸಂಕೇತವಾಗಿರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಆರಿಸಲಾಗುತ್ತದೆ. ನಾಡಿನೆಲ್ಲೆಡೆ ಸರ್ಕಾರಿ ಕಚೇರಿಗಳು, ಶಾಲಾಕಾಲೇಜು, ಸಂಘ ಸಂಸ್ಥೆಗಳಲ್ಲಿ ಕನ್ನಡ ಭಾಷೆ, ನಾಡು ನುಡಿಗೆ ಸಂಬಂಧಿಸಿದಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




