ಕರ್ನಾಟಕದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಆಚಾರ ವಿಚಾರಗಳು, ಸಂಪದ್ರಾಯಗಳು, ಭಾಷೆ ಹಾಗೂ ಪಾಕವಿಧಾನಗಳಲ್ಲಿ ಸಾಕಷ್ಟು ಭಿನ್ನತೆಯನ್ನು ಕಾಣಬಹುದಾಗಿದೆ.ಆಹಾರ ಪ್ರಿಯರಂತೂ ಕರುನಾಡಿಗೆ ಬಂದರೆ ಆಹಾರಗಳ ರುಚಿಯ ವಿಚಾರದಲ್ಲಿ ಮೋಸವಂತೂ ಆಗುವುದೇ ಇಲ್ಲ. ಒಂದೊಂದು ಪ್ರದೇಶದ ಆಹಾರವು ಪ್ರಾಂತೀಯ ವೈವಿಧ್ಯತೆಯಿಂದ ಕೂಡಿದ್ದು, ಒಂದಕ್ಕಿಂತ ಒಂದು ರುಚಿಕರವಾಗಿದೆ. ಎಲ್ಲಾ ಆಹಾರವು ಸ್ವಾದಿಷ್ಟ ರುಚಿಯನ್ನು ಹೊಂದಿರುವ ಕಾರಣ ಆಹಾರ ಪ್ರಿಯರ ಮನಸ್ಸನ್ನು ಗೆದ್ದುಕೊಂಡಿದೆ.
* ಮೈಸೂರು ಪಾಕ್: ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದೇ ಕರೆಸಿಕೊಂಡಿರುವ ಈ ಮೈಸೂರಿನ ಸ್ಪೆಷಲ್ ತಿಂಡಿ ತಿನಿಸುಗಳಲ್ಲಿ ಈ ಮೈಸೂರ್ ಪಾಕ್ ಕೂಡ ಒಂದು. ತುಪ್ಪ, ಸಕ್ಕರೆ ಮತ್ತು ಕಡ್ಲೆಹಿಟ್ಟಿನಿಂದ ತಯಾರಿಸಲಾಗುವ ಈ ಸಿಹಿ ತಿಂಡಿ ಬಹುತೇಕರ ಅಚ್ಚು ಮೆಚ್ಚಿನ ಸ್ವೀಟ್ ಆಗಿದೆ.
* ನೀರ್ ದೋಸೆ: ನೀವು ಮಂಗಳೂರಿಗೆ ಬಂದರೆ ನೀರ್ ದೋಸೆ ಕಾಯಿ ಚಟ್ನಿಯನ್ನು ಸವಿದರೆ ಮತ್ತೆ ಮತ್ತೆ ಬೇಕು ಎನ್ನುತ್ತೀರಿ. ಈ ನೀರ್ ದೋಸೆಯು ಅಕ್ಕಿಯಿಂದ ತಯಾರಿಸಲಾಗುವ ಸುಲಭವಾದ ತಿಂಡಿ. ಕರಾವಳಿಯ ಜನರ ಬೆಳಗ್ಗಿನ ಉಪಹಾರದಲ್ಲಿ ನೀರ್ ದೋಸೆ ಮೊದಲಿರುತ್ತದೆ.
* ಉಡುಪಿ ಸಾಂಬಾರ್: ಹೆಸರೇ ಹೇಳುವಂತೆ ಉಡುಪಿಯ ಫೇಮಸ್ ಆಹಾರಗಳಲ್ಲಿ ಇದು ಕೂಡ ಒಂದು. ಅನ್ನ, ಇಡ್ಲಿ, ಚಪಾತಿಗೆ ಈ ಉಡುಪಿ ಸಾಂಬಾರ್ ಒಳ್ಳೆಯ ಕಾಂಬಿನೇಶನ್ ಆಗಿದ್ದು, ಒಮ್ಮೆ ನಾಲಿಗೆಗೆ ರುಚಿ ಹತ್ತಿಸಿಕೊಂಡರೆ ಕೃಷ್ಣನಗರಿ ಬಂದರೆ ಇದನ್ನೇ ತಿನ್ನದೇ ಹೋಗುವುದೇ ಇಲ್ಲ. ಹೌದು, ರುಚಿಕರವಾಗಿರುವ ಈ ಸಾಂಬಾರನ್ನು ತರಕಾರಿ, ಬೇಳೆ, ತೆಂಗಿನಕಾಯಿ ಹಾಗೂ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ.
* ಪಂದಿ ಕರಿ: ಕೊಡಗಿನ ಫೇಮಸ್ ಆಹಾರವಾಗಿರುವ ಪಂದಿ ಕರಿಯನ್ನು ಮಾಂಸ ಪ್ರಿಯರು ಸಹಜವಾಗಿ ಇಷ್ಟ ಪಟ್ಟು ಸೇವಿಸುತ್ತಾರೆ. ನೀವು ಕೊಡಗಿಗೆ ಟ್ರಿಪ್ ಪ್ಲಾನ್ ಮಾಡಿಕೊಂಡರೆ ಒಮ್ಮೆಯಾದರೂ ಈ ಪಂದಿ ಕರಿಯ ರುಚಿಯನ್ನು ಸವಿದೇ ಬರುವುದು ಒಳ್ಳೆಯದು.
* ಮದ್ದೂರ ವಡಾ: ಕರ್ನಾಟಕದಲ್ಲಿ ಫೇಮಸ್ ಕರಿದ ತಿಂಡಿ ತಿನಿಸುಗಳಲ್ಲಿ ಮದ್ದೂರು ವಡಾ ಕೂಡ. ಮಂಡ್ಯ ಜಿಲ್ಲೆಯ ಮದ್ದೂರಿನ ಹೆಸರಿನೊಂದಿಗೆ ಬೆರೆತು ಹೋಗಿರುವ ಈ ಕರಿದ ತಿಂಡಿ ಮದ್ದೂರು ವಡಾವನ್ನು ನೋಡುತ್ತಿದ್ದರೇನೇ ಬಾಯಲ್ಲಿ ನೀರೂರುತ್ತದೆ.
* ಹಾಲುಬಾಯಿ: ಕರ್ನಾಟಕದ ಸಿಹಿ ತಿಂಡಿಗಳ ಸಾಲಿನಲ್ಲಿ ಈ ಹಾಲುಬಾಯಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ತೆಂಗಿನ ಕಾಯಿ, ಬೆಲ್ಲ, ಅಕ್ಕಿ ಹಿಟ್ಟಿನಿಂದ ತಯಾರಿಸುವ ಈ ಖಾದ್ಯವನ್ನು ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ.
* ಜೋಳದ ರೊಟ್ಟಿ: ಉತ್ತರ ಕರ್ನಾಟಕ ಖಡಕ್ ಜೋಳದ ರೊಟ್ಟಿ ಸಖತ್ ಫೇಮಸ್. ಇಲ್ಲಿನ ಜನರು ಈ ಖಡಕ್ ಜೋಳದ ರೊಟ್ಟಿ ತಿಂದೇ ದೇಹವನ್ನು ಗಟ್ಟಿಯಾಗಿಟ್ಟುಕೊಂಡಿರುತ್ತಾರೆ. ಈ ಜೋಳದ ರೊಟ್ಟಿ ಜೊತೆಗೆ ಎಣ್ಣೆಗಾಯಿ ಪಲ್ಯವು ಉತ್ತಮ ಕಾಂಬಿನೇಶನ್ ಆಗಿದೆ.
* ದಾವಣಗೆರೆ ಬೆಣ್ಣೆ ದೋಸೆ: ಹೆಸರೇ ಹೇಳುವಂತೆ ದಾವಣಗೆರೆಗೆ ಹೋದರೆ ಇಲ್ಲಿನ ಬೆಣ್ಣೆ ದೋಸೆ ಸಿಕ್ಕಾಪಟ್ಟೆ ಫೇಮಸ್. ಬೆಳಗಿನ ಉಪಹಾರಕ್ಕೆ ಇಲ್ಲಿನ ಹೋಟೆಲ್ ಗಳಲ್ಲಿ ಸದಾ ಲಭ್ಯವಿರುವ ದೋಸೆಯೂ ತನ್ನ ರುಚಿಯಿಂದಲೇ ಆಹಾರ ಪ್ರಿಯರ ಮನಸ್ಸನ್ನು ಗೆದ್ದುಕೊಂಡಿದೆ. ದೋಸೆಗೆ ಬೆಣ್ಣೆ ಸವರಿ, ಆಲೂಗಡ್ಡೆ ಪಲ್ಯದೊಂದಿಗೆ ನಿಮ್ಮ ಮುಂದೆ ಇಡುತ್ತಾರೆ. ದೋಸೆಯನ್ನು ಪಲ್ಯದಲ್ಲಿ ನೆಚ್ಚಿಕೊಂಡು ಬಾಯಲ್ಲಿ ಇಟ್ಟುಕೊಂಡರೆ ರುಚಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಒಂದೆಗಲದಲ್ಲಿದೆ ಆರೋಗ್ಯ ಗುಟ್ಟು, ಒಮ್ಮೆ ತಿಳಿದರೆ ಮತ್ತೆ ಮತ್ತೆ ಬಳಸ್ತೀರಾ
* ಬಿಸಿ ಬೇಳೆ ಬಾತ್ : ಅಕ್ಕಿ, ಬೇಳೆ, ತರಕಾರಿ ಹಾಗೂ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುವ ಈ ಬಿಸಿ ಬೇಳೆ ಬಾತ್ ಕರ್ನಾಟಕದ ಜನಪ್ರಿಯ ಆಹಾರವಾಗಿದೆ. ಬೆಳಗ್ಗಿನ ಉಪಹಾರದಲ್ಲಿ ಹೆಚ್ಚಾಗಿ ಈ ಬಿಸಿ ಬೇಳೆ ಬಾತ್ ಕರ್ನಾಟಕದ ಹೆಚ್ಚಿನ ಹೋಟೆಲ್ ಗಳಲ್ಲಿ ಲಭ್ಯವಿರುತ್ತದೆ.
* ಮಂಗಳೂರು ಬನ್ಸ್ : ಇದು ಕರ್ನಾಟಕದ ಮಂಗಳೂರಿನಲ್ಲಿ ಹುಟ್ಟಿದ ಸ್ವಾದಿಷ್ಟವಾದ ತಿನಿಸಾಗಿದೆ. ಮುಟ್ಟಿದರೆ ಮೃದುವಾಗಿದ್ದು, ಸ್ವಲ್ಪ ಸಿಹಿಯಾಗಿರುವ ಈ ಬನ್ಸ್ ಗೆ ಸಾಂಬಾರ್ ಇದ್ದರೆ ಒಳ್ಳೆಯ ಕಾಂಬಿನೇಶನ್ ಆಗಿದೆ. ಮೈದಾ ಹಿಟ್ಟು, ಬಾಳೆಹಣ್ಣು, ಮೊಸರು ಹಾಗೂ ಸಕ್ಕರೆಯನ್ನು ಬಳಸಿ ತಯಾರಿಸಲಾಗುವ ಈ ಬನ್ಸ್ ರುಚಿಕರವಾಗಿರುತ್ತದೆ.
* ಕರದಂಟು : ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಈ ಸಿಹಿ ತಿಂಡಿ ಈ ಕರದಂಟು. ಹೆಸರಿನಷ್ಟೇ ಗೋಕಾಕ್ ಕರದಂಟು ರುಚಿಕರವಾಗಿದ್ದು, ಬೆಲ್ಲ, ಕೊಬ್ಬರಿ ಮತ್ತು ಡ್ರೈ ಫ್ರುಟ್ಸ್ ಗಳಿಂದ ತಯಾರಿಸಲಾಗುತ್ತದೆ. ಈ ಸಿಹಿ ತಿಂಡಿಯನ್ನು ನೋಡಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Sat, 16 March 24