Kitchen Hacks : ಹಣ್ಣು, ತರಕಾರಿ ಸಿಪ್ಪೆಯನ್ನು ಎಸೆಯುತ್ತೀರಾ? ಹಾಗಾದ್ರೆ ಹೀಗೆ ಬಳಸಿ ನೋಡಿ
ಪ್ರತಿಯೊಬ್ಬರು ಕೂಡ ವಿವಿಧ ತರಕಾರಿಗಳು ಮತ್ತು ಹಣ್ಣುಗಳು ಸೇವಿಸುತ್ತಾರೆ. ಈ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯವೆಂಬುದು ಗೊತ್ತೇ ಇದೆ. ಆದರೆ ಬಹುತೇಕರು ಇದರ ಸಿಪ್ಪೆ ತೆಗೆದು ಕಸ ಬುಟ್ಟಿಗೆ ಎಸೆಯುತ್ತಾರೆ. ಈ ಸಿಪ್ಪೆಗಳು ಕೂಡ ಅಷ್ಟೇ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದ್ರೆ ಬೇಡ ಎಂದು ಬಿಸಾಡುವ ಹಣ್ಣು ಹಾಗೂ ತರಕಾರಿಗಳ ಸಿಪ್ಪೆಯನ್ನು ಯಾವ ರೀತಿ ಬಳಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾವು ಅಡುಗೆ ಮಾಡುವಾಗ ಸಾಮಾನ್ಯವಾಗಿ ತರಕಾರಿಗಳ ಸಿಪ್ಪೆಯನ್ನು ತೆಗೆದು ಬಳಕೆ ಮಾಡುತ್ತೇವೆ. ಇನ್ನು ಕೆಲವು ಹಣ್ಣುಗಳನ್ನು ಸೇವಿಸುವಾಗ ಸಿಪ್ಪೆಗಳನ್ನು ಸುಲಿದು ಸೇವಿಸುತ್ತೇವೆ. ಆದರೆ, ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯಲ್ಲಿ ಹಣ್ಣಿನ ಭಾಗಕ್ಕಿಂತ ಹೆಚ್ಚಿನ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಇದರ ಪ್ರಯೋಜನಗಳನ್ನು ಒಮ್ಮೆ ತಿಳಿದರೆ ನೀವು ಈ ಸಿಪ್ಪೆಗಳನ್ನು ತ್ಯಾಜ್ಯವೆಂದು ಎಸೆಯುವ ಕೆಲಸಕ್ಕೆ ಹಾಕುವುದೇ ಇಲ್ಲ.
- ಆಲೂಗಡ್ಡೆ ಸಿಪ್ಪೆ : ವಿವಿಧ ಪದಾರ್ಥ ಹಾಗೂ ಖಾದ್ಯಗಳ ತಯಾರಿಕೆಯಲ್ಲಿ ಆಲೂಗಡ್ಡೆಯನ್ನು ಬಳಸುತ್ತೇವೆ. ಆದರೆ ಆಲೂಗಡ್ಡೆ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಇದು ಜೀವಸತ್ವಗಳು ಮತ್ತು ಕಿಣ್ವಗಳಿಂದ ಸಮೃದ್ಧವಾಗಿದ್ದು ಕಣ್ಣುಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆಲೂಗಡ್ಡೆಯ ಸಿಪ್ಪೆಯನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಇರಿಸಿ, ತಣ್ಣಗಾದ ಬಳಿಕ ಕಣ್ಣುಗಳ ಸುತ್ತಲೂ ಇಡಿ. ಹದಿನೈದು ನಿಮಿಷಗಳ ಬಿಟ್ಟು ಈ ಸಿಪ್ಪೆ ತೆಗೆದು ತಣ್ಣೀರಿನಿಂದ ಕಣ್ಣನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕಣ್ಣಿನ ಆಯಾಸ ಹಾಗೂ ಡಾರ್ಕ್ ಸರ್ಕಲ್ ನಂತಹ ಸಮಸ್ಯೆಗಳು ದೂರವಾಗುತ್ತದೆ.
- ಕಿತ್ತಳೆ ಸಿಪ್ಪೆ : ಕಿತ್ತಳೆ ಸಿಪ್ಪೆಯೂ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಉಜ್ಜಿಕೊಳ್ಳುವುದರಿಂದ ಹಳದಿಗಟ್ಟಿದ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಹಾಗೂ ಇದು ಹಲ್ಲಿನ ದಂತಕವಚಕ್ಕೆ ಒಳ್ಳೆಯದು. ಅದಲ್ಲದೇ ಕಿತ್ತಳೆ ಸಿಪ್ಪೆಯೂ ನೈಸರ್ಗಿಕ ಕೀಟನಾಶಕವಾಗಿದ್ದು, ಇದರ ವಾಸನೆಗೆ ಕೀಟಗಳು ಹತ್ತಿರ ಕೂಡ ಸುಳಿಯಲ್ಲ.
- ಸೇಬಿನ ಸಿಪ್ಪೆ: ಸೇಬಿನ ಸಿಪ್ಪೆಯಲ್ಲಿರುವ ವಿಟಮಿನ್ ಇ ಅಧಿಕವಾಗಿದ್ದು ಇದು ಚರ್ಮವನ್ನು ಮೃದುವಾಗಿ ಮತ್ತು ತೇವಾಂಶದಿಂದ ಇಡುತ್ತದೆ. ಇದರಲ್ಲಿರುವ ಕಾಲಜನ್ ಚರ್ಮವನ್ನು ಯೌವನವಾಗಿಡುವಂತೆ ಮಾಡುತ್ತದೆ. ಸೇಬಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಯಂತಹ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಸೌತೆ ಕಾಯಿ ಸಿಪ್ಪೆ : ಸೌತೆಕಾಯಿಯ ಸಿಪ್ಪೆಯನ್ನು ಮುಖಕ್ಕೆ ಲೇಪಿಸುವುದರಿಂದ ಕಾಂತಿಯೂ ಹೆಚ್ಚಾಗುತ್ತದೆ. ಅದಲ್ಲದೇ, ಮನೆಯಲ್ಲಿ ಸ್ವಚ್ಛತೆ ವೇಳೆ ನೆಲೆಕ್ಕೆ ಬಿದ್ದಿರುವ ವಿಷಕಾರಿ ರಾಸಾಯನಿಕಗಳನ್ನು ತೆಗೆದು ಹಾಕಲು ಸೌತೆಕಾಯಿ ತಿರುಳನ್ನು ಬಳಸಬಹುದಾಗಿದೆ.
- ಬಾಳೆಹಣ್ಣಿನ ಸಿಪ್ಪೆ : ಬಾಳೆಹಣ್ಣು ತಿಂದು ಸಿಪ್ಪೆ ಎಸೆಯುವ ಬದಲು ಇದರಿಂದ ಶೂ ಪಾಲಿಶ್ ಮಾಡಬಹುದು. ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಬೂಟುಗಳನ್ನು ಉಜ್ಜಿದರೆ, ಶೂ ಮೇಲಿರುವ ಕೊಳಕು ಹಾಗೂ ಧೂಳನ್ನು ಸ್ವಚ್ಛಗೊಳಿಸಿ ಫಳಫಳನೇ ಹೊಳೆಯುವಂತೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ