ಸಾಂದರ್ಭಿಕ ಚಿತ್ರ
ಭಾರತೀಯ ಅಡುಗೆಯಲ್ಲಿ ಟೊಮೆಟೊಗೆ ಅತ್ಯಗತ್ಯ ತರಕಾರಿಗಳಲ್ಲಿ ಒಂದಾಗಿದೆ. ಯಾವುದೇ ಖಾದ್ಯಗಳನ್ನು ಮಾಡಲಿ, ಟೊಮೆಟೊ ಹಾಕಿದರೆ ರುಚಿಯೇ ಹೆಚ್ಚು. ಅದಲ್ಲದೇ ಅಡುಗೆಯಲ್ಲಿ ಮಾತ್ರವಲ್ಲದೆ ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು, ಪಿಜ್ಜಾಗಳ ತಯಾರಿಕೆಯಲ್ಲಿ ಈ ಟೊಮೆಟೊವನ್ನು ಹೇರಳವಾಗಿ ಬಳಸಲಾಗುತ್ತದೆ. ಆದರೆ ತರಕಾರಿಯನ್ನು ಸಂಗ್ರಹಿಸಿಡುವುದು ಕಷ್ಟದ ಕೆಲಸ. ಶೇಖರಿಸಿಡುವಾಗ ಸ್ವಲ್ಪ ವ್ಯತ್ಯಾಸವಾದರೂ ಕೂಡ ಟೊಮೊಟೊ ಬೇಗನೆ ಹಾಳಾಗುತ್ತದೆ. ಹಾಗಾದ್ರೆ ಈ ತರಕಾರಿಯನ್ನು ಬಹಳ ದಿನಗಳವರೆಗೆ ಕೆಡದಂತೆ ಕಾಪಾಡಲು ಈ ಕೆಲವು ವಿಧಾನಗಳನ್ನು ಅನುಸರಿಸುವುದು ಉತ್ತಮ.
- ಮಾರುಕಟ್ಟೆಯಿಂದ ಟೊಮೆಟೊ ತಂದ ನಂತರ ತೊಳೆದು ಫ್ರಿಡ್ಜ್ ನಲ್ಲಿ ಇಡುವುದನ್ನು ಆದಷ್ಟು ತಪ್ಪಿಸಿ. ಹೆಚ್ಚು ತೇವವಾಗಿದ್ದರೆ ಚೆನ್ನಾಗಿ ಒರೆಸಿ, ನಂತರ ಫ್ರಿಡ್ಜ್ ನಲ್ಲಿ ಇರಿಸುವುದು ಉತ್ತಮ.
- ಉಳಿದ ತರಕಾರಿಗಳೊಂದಿಗೆ ಟೊಮೆಟೊ ಇಡಬೇಡಿ. ಉಳಿದ ತರಕಾರಿ ತೂಕದಿಂದ ಟೊಮೆಟೊ ಅಪ್ಪಚ್ಚಿ ಆಗುತ್ತದೆ. ಅದಲ್ಲದೇ ಉಳಿದ ಹಣ್ಣುಗಳು ಹಾಗೂ ತರಕಾರಿಗಳೊಂದಿಗೆ ಇಟ್ಟರೆ ಕೊಳೆತು ಹೋಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
- ಫ್ರಿಜ್ ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸಿಡುವಾಗ ಪೇಪರ್ ನಲ್ಲಿ ಸುತ್ತಿಡುವುದನ್ನು ಮರೆಯಬೇಡಿ. ಈ ರೀತಿ ಇಟ್ಟರೆ ತೇವಾಂಶವು ಶುಷ್ಕವಾಗಿದ್ದು, ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿರಲು ಸಾಧ್ಯ.
- ಟೊಮೆಟೊಗಳನ್ನು ಅರಿಶಿನ ನೀರಿನಲ್ಲಿ ತೊಳೆಯುವ ಅಭ್ಯಾಸವಿರಲಿ. ಮಾರುಕಟ್ಟೆಯಿಂದ ತಂದ ಟೊಮೆಟೊವನ್ನು ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ. ಹೀಗೆ ಮಾಡಿದ್ರೆ ಟೊಮೆಟೊ ತಾಜಾತನದಿಂದ ಕೂಡಿರುತ್ತದೆ.
- ಟೊಮೆಟೊಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿಡಬೇಡಿ. ಅವುಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಕಾರಣ ಟೊಮಾಟೊವು ತ್ವರಿತವಾಗಿ ಕೊಳೆಯಬಹುದು. ಹೀಗಾಗಿ ಟೊಮಾಟೊಗಳನ್ನು ಪ್ಲಾಸ್ಟಿಕ್ ಚೀಲದ ಬದಲಿಗೆ ಗಾಳಿಯಾಡದ ಪಾತ್ರೆಗಳಲ್ಲಿ, ಬುಟ್ಟಿಯಲ್ಲಿ ಸಂಗ್ರಹಿಸಿಡುವುದು ಉತ್ತಮ.
- ಅಡುಗೆಗೆ ಬಳಸುವಾಗ ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಮೊದಲು ಬಳಸಿ. ಮಾಗಿದ ಟೊಮೆಟೊಗಳಿದ್ದರೆ ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡಿ.
- ಟೊಮೆಟೊಗಳು ಹೆಚ್ಚು ದಿನಗಳವರೆಗೆ ತಾಜಾವಾಗಿರಿಸಲು ಕಾಂಡದ ಬದಿಯನ್ನು ಕೆಳಗೆ ಇರಿಸಿ. ಅದಲ್ಲದೇ, ಸೂರ್ಯನ ಬೆಳಕಿನಿಂದ ದೂರ ಇರಿಸುವುದು ಅಷ್ಟೇ ಮುಖ್ಯ.
- ಟೊಮೆಟೊ ಖರೀದಿಸುವಾಗ ಹಸಿರು ಬಣ್ಣವಿರುವ, ಸರಿಯಾಗಿ ಹಣ್ಣಾಗಿರದ ಟೊಮೆಟ್ಯೋ ಖರೀದಿಸಿ, ಇದು ದೀರ್ಘಕಾಲದವರೆಗೆ ಫ್ರೆಶ್ ಆಗಿರಲು ಸಾಧ್ಯ.
- ಹೆಚ್ಚು ಹಣ್ಣಾದ ಟೊಮೆಟೊಗಳನ್ನು ಖರೀದಿಸಿದ್ದರೆ ಅವುಗಳನ್ನು ಪ್ಯೂರಿ ತಯಾರಿಸಿ ಸಂಗ್ರಹಿಸಿಟ್ಟರೆ ಉತ್ತಮ. ಮಾರುಕಟ್ಟೆಯಿಂದ ತಂದ ಟೊಮೆಟೊಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ. ಆ ಬಳಿಕ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪ್ಯೂರಿ ತಯಾರಿಸಿಕೊಳ್ಳಿ. ಇದನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟು ಬಳಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ