ಸಾಂದರ್ಭಿಕ ಚಿತ್ರ
ವಿಶ್ವದ ಅತ್ಯಂತ ಮಹತ್ವದ ಮತ್ತು ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ
ಪ್ರವಾಸೋದ್ಯಮವೂ ಒಂದು. ಈ ಕ್ಷೇತ್ರವು ಉದ್ಯೋಗ ಸೃಷ್ಟಿಸುವುದರೊಂದಿಗೆ ಒಂದು ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರದಿಂದಲೇ ಹೆಚ್ಚಿನ ಮಟ್ಟದ ಆದಾಯವನ್ನು ಗಳಿಸುವ ಹಲವು ದೇಶಗಳಿವೆ. ಇದು ಉದ್ಯೋಗ ಸೃಷ್ಟಿ ಮತ್ತು ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ದೇಶದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹೌದು ಹೆಚ್ಚಿನ ಪ್ರವಾಸಿಗರಗನ್ನು ಆಕರ್ಷಿಸಲು ಪ್ರತಿಯೊಂದು ದೇಶದ ಸರ್ಕಾರಗಳು ಕೂಡಾ ಪ್ರವಾಸಿ ಸ್ಥಳಗಳ ಹಾಗೂ ದೇಶದ ಸೌಂದರ್ಯವನ್ನು ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಇಷ್ಟು ಮಾತ್ರವಲ್ಲದೆ ಪ್ರವಾಸೋದ್ಯವು ಇತರ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಬೆಳೆಸಲು ಹಾಗೂ ವಿವಿಧ ದೇಶಗಳ ಸಂಸ್ಕೃತಿ, ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳಲು ಪ್ರವಾಸಿಗರಿಗೆ ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಪ್ರವಾಸೋದ್ಯವು ಒಂದು ಉದ್ಯಮ ವಲಯವಾಗಿ ಜಾಗತಿಕ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತದೆ. ಈ ಕಾರಣದಿಂದಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದ ಉದ್ಯಮವನ್ನು ಉತ್ತೇಜಿಸಲು ಪ್ರತಿವರ್ಷ ಸೆಪ್ಟೆಂಬರ್ 27 ರಂದು ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ:
ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1980ರಲ್ಲಿ ಆಚರಿಸಲಾಯಿತು. ವಿಶ್ವ ಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು (UNWTO) ಈ ಆಚರಣೆಯನ್ನು ಪ್ರಾರಂಭಿಸಿತು. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಸ್ಪೇನ್ ದೇಶದ ಟೊರೆಮೊಲಿನೋಸ್ನಲ್ಲಿ ನಡೆದ ತನ್ನ ಮೂರನೇ ಅಧಿವೇಶನದಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಿತು. ಸೆಪ್ಟೆಂಬರ್ 27 ರಂದು ಈ ದಿನವನ್ನು ಆಚರಿಸಲು ಕಾರಣವೇನೆಂದರೆ, 1970 ರಲ್ಲಿ ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯ ಶಾಸನಗಳನ್ನು ಈ ದಿನದಂದು ಅಂಗೀಕರಿಸಲಾಯಿತು. ಈ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
ಪ್ರವಾಸೋದ್ಯಮ ದಿನವನ್ನು ಏಕೆ ಆಚಸಲಾಗುತ್ತದೆ?
ಪ್ರವಾಸೋದ್ಯಮದ ಮೂಲಕ ಉದ್ಯೋಗವನ್ನು ಉತ್ತೇಜಿಸುವುದು, ಪ್ರವಾಸೋದ್ಯಮ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಹೆಚ್ಚು ಹೆಚ್ಚು ಮಾಹಿತಿ ನೀಡುವುದು ಪ್ರವಾಸೋದ್ಯಮ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ಪ್ರವಾಸ ಹೋಗಲು ಇಷ್ಟಪಡುವ ಜನರು ಯಾವಾಗಲೂ ಹೊಸ ಹೊಸ ಪ್ರವಾಸಿ ತಾಣಗಳ ಹುಡುಕಾಟದಲ್ಲಿರುತ್ತಾರೆ. ಈ ಕಾರಣಕ್ಕಾಗಿ ಎಲ್ಲಾ ದೇಶಗಳು ಸಹ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಲೇ ಇರುತ್ತದೆ. ಇದೇ ಕಾರಣಕ್ಕಾಗಿ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಮತ್ತು ಆಕರ್ಷಿಸಲು ಪ್ರತಿವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಪ್ರವಾಸೋದ್ಯಮ ದಿನದ ಆಚರಣೆಯ ಮಹತ್ವ:
ಈ ದಿನವು ಪ್ರವಾಸೋದ್ಯಮದ ಪ್ರಾಮುಖ್ಯತೆ ಮತ್ತು ಅದರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ. ಅಲ್ಲದೆ ಈ ವಿಶೇಷ ದಿನವು ವಿವಿಧ ದೇಶಗಳ ಸಂಸ್ಕೃತಿಗಳ ನಡುವೆ ಉತ್ತಮ ತಿಳುವಳಿಕೆಯನ್ನು ಬೆಳೆಸುವಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ಒತ್ತಿ ಹೇಳುತ್ತದೆ. ಮುಖ್ಯವಾಗಿ ಪ್ರವಾಸೋದ್ಯಮವು ಜಾಗತಿಕ ಸಾಮರಸ್ಯ ಮತ್ತು ಶಾಂತಿ, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಶ್ವ ಪ್ರವಾಸೋದ್ಯಮ ದಿನವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಪ್ರವಾಸೋದ್ಯಮದ ವಿಷಯದಲ್ಲಿ ದೇಶಗಳು ಪರಸ್ಪರ ಸಂಪರ್ಕ ಹೊಂದಬಹುದು. ಇದರಿಂದ ದೇಶದೇಶಗಳ ನಡುವೆ ಉತ್ತಮ ಸ್ನೇಹ ಸಂಬಂಧ ಬೆಳೆಯುತ್ತದೆ.