ಪ್ರವಾಸಿಗರೇ… ಈ ಸಮಯದಲ್ಲಿ ತಪ್ಪಿಯೂ ರಮಣೀಯ ಕೂಡ್ಲು ತೀರ್ಥ ಜಲಪಾತದ ಕಡೆಗೆ ಹೋಗಬೇಡಿ

ಮಳೆಗಾಲದಲ್ಲಿ ಜಲಪಾತಗಳನ್ನು ನೋಡ ಹೋಗುವುದೆಂದರೆ ಹಲವರಿಗೆ ಬಲು ಇಷ್ಟ. ನೀವು ಸಹ ಈ ಬಾರಿ ಜಲಪಾತದ ಕಡೆ ಹೋಗಬೇಕು, ಅದರಲ್ಲೂ ಈ ಮಳೆಗಾಲದಲ್ಲಿ ಕೂಡ್ಲು ತೀರ್ಥ ಜಲಪಾತದ ಕಡೆ ಹೋಗ್ಬೇಕು ಎಂದು ಪ್ಲಾನ್‌ ಹಾಕಿಕೊಂಡಿದ್ದೀರಾ? ಹಾಗಿದ್ರೆ ಇಲ್ಲಿ ಕೇಳಿ, ಮಳೆಯಿಂದಾಗಿ ನೀರಿನ ಮಟ್ಟವೂ ಹೆಚ್ಚಿರುತ್ತದೆ ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ತಪ್ಪಿಯೂ ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗಬೇಡಿ. ಹಾಗಿದ್ರೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ ಯಾವುದು ಎಂಬ ಮಾಹಿತಿಯನ್ನು ಇಲ್ಲಿನ ಸ್ಥಳೀಯ ನಿವಾಸಿ ಶಂಕರ್‌ ನಾಯ್ಕ್‌ ಹೆಬ್ರಿ ಶೇರ್‌ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರವಾಸಿಗರೇ… ಈ ಸಮಯದಲ್ಲಿ ತಪ್ಪಿಯೂ ರಮಣೀಯ ಕೂಡ್ಲು ತೀರ್ಥ ಜಲಪಾತದ ಕಡೆಗೆ  ಹೋಗಬೇಡಿ
ಕೂಡ್ಲು ತೀರ್ಥ ಜಲಪಾತ

Updated on: Jul 02, 2025 | 3:54 PM

ಮಳೆಗಾಲದಲ್ಲಿ (Rainy season) ಭೋರ್ಗರೆದು ಧುಮ್ಮುಕ್ಕುವ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಹಾಲಿನ ನೊರೆಯಂತೆ ಮೈದುಂಬಿ ಹರಿಯುವ ಈ ಕಣ್ಮನ ಸೆಳೆಯುವ ನೋಟವನ್ನು ಸವಿಲೆಂದೇ ವಿಶೇಷವಾಗಿ ಮಳೆಗಾಲದಲ್ಲಿ ಪ್ರವಾಸಿಗರ ದಂಡೇ ಜಲಪಾತಗಳತ್ತ ಹರಿದು ಬರುತ್ತವೆ. ಮಳೆಯ ಅಬ್ಬರ ಜೋರಿದ್ದಾಗ, ಜಲಪಾತಗಳು ರೌದ್ರಾವತಾರ ತಾಳಿ ಧುಮ್ಮಿಕುತ್ತವೆ. ಇಂತಹ ಸಂದರ್ಭದಲ್ಲಿ ಅಪಾಯದ ಮಟ್ಟ ಮೀರಿದ ಜಲಪಾತ ಜಲಧಾರೆಯ ಮಧ್ಯೆ ಹೋಗದಿರುವುದೇ ಸೂಕ್ತ. ಇದೀಗ ಮಳೆಗಾಲ ಆರಂಭವಾಗಿದ್ದು, ಹೆಚ್ಚಿನವರು ಮೈದುಂಬಿ ಹರಿಯುವ ಜಲಪಾತಗಳ ಕಡೆ ಪ್ರವಾಸ ಹೋಗಲು ಬಯಸುತ್ತಿದ್ದಾರೆ. ನೀವು ಕೂಡಾ ಈ ಬಾರಿ ಜಲಪಾತ ವೀಕ್ಷಣೆಗೆ ಹೋಗಬೇಕೆಂದಿದ್ದೀರಾ, ಅದರಲ್ಲೂ ಕೂಡ್ಲೂ ತೀರ್ಥ ಫಾಲ್ಸ್‌ (Koodlu Thirtha Falls)  ಕಡೆ ಹೋಗೋ ಪ್ಲಾನ್‌ ಮಾಡಿದ್ದೀರಾ? ಹಾಗಿದ್ದರೆ ಈ ಟೈಮಲ್ಲಿ ಕೂಡ್ಲೂ ತೀರ್ಥ ಜಲಪಾತದ ಕಡೆ ಪ್ರವಾಸ ಹೋಗಬೇಡಿ, ಮೇಲಿನಿಂದ ಧುಮ್ಮಿಕ್ಕಿ ಹರಿಯುವ ಸ್ವಚ್ಛಂದವಾದ ಜಲಪಾತದ ನೀರಿನಲ್ಲಿ ಆಡುತ್ತಾ, ಪ್ರಕೃತಿಯೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಲು ಯಾವಾಗ ಕೂಡ್ಲುತೀರ್ಥ ಜಲಪಾತದ ಕಡೆಗೆ ಹೋದರೆ ಸೂಕ್ತ ಎಂಬುದನ್ನು ತಿಳಿಯಿರಿ.

ಕೂಡ್ಲು ತೀರ್ಥ ಜಲಪಾತ:

ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಕೂಡ್ಲು ತೀರ್ಥ ಫಾಲ್ಸ್‌ ಕೂಡ ಒಂದು. ಆಗುಂಬೆ ಬಳಿ ಹರಿಯುವ ಪವಿತ್ರ ಸೀತಾ ನದಿಯಿಂದ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾದ ಕಾರಣ ಈ ಸುಂದರ ಜಲಪಾತವನ್ನು ಸೀತಾ ಜಲಪಾತ ಎಂದೂ ಕರೆಯುತ್ತಾರೆ. ಸೀತಾ ನದಿಯ ಒಂದು ಕೊಳದಿಂದ ಸೃಷ್ಟಿಯಾಗಿರುವ ಈ ಜಲಪಾತ ಸುಮಾರು 300 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳು ಈ ಕೊಳದ ಬಳಿ ಧ್ಯಾನ ಮಾಡುತ್ತಿದ್ದರು ಎಂಬ ಪ್ರತೀತಿಯೂ ಇದೆ. ಹಾಗಾಗಿ ಸ್ಥಳೀಯರು ಈ ಜಲಪಾತದ ನೀರನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಎತ್ತರದಿಂದ ಧುಮ್ಮುಕ್ಕುವ ಜಲಪಾತದ ರಮಣೀಯ ಸೌಂದರ್ಯದ ಹೊರತಾಗಿ, ಈ ಸ್ಥಳ ಅದರ ಪ್ರಶಾಂತವಾದ ವಾತಾವರಣಕ್ಕೂ ಹೆಸರುವಾಸಿಯಾಗಿದೆ.

ಇದನ್ನೂ ಓದಿ
ಮಳೆಯಲ್ಲಿ ಒಂದು ರೌಂಡ್‌ ಆಗುಂಬೆಯ ಈ ಸ್ಥಳಗಳಿಗೆ ಹೋಗಿ ಬನ್ನಿ
ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ?
ಪ್ರೀತಿಸಿ ಮದುವೆಯಾಗುವವರಿಗೆ ಬರುವ ಎಲ್ಲ ಅಡೆತಡೆ ನಿವಾರಿಸುತ್ತಾಳೆ ಪದ್ಮಾವತಿ
ಕರ್ನಾಟಕದ ಅಪರೂಪದ ಪಕ್ಷಿತಾಣ ಕೊಕ್ಕರೆ ಬೆಳ್ಳೂರು

ಭೇಟಿ ನೀಡಲು ಸೂಕ್ತವಾದ ಸಮಯ:

ಮಳೆಗಾಲದಲ್ಲಿ ಬಹುತೇಕ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತವೆ. ಅದರಲ್ಲೂ ಜೂನ್‌, ಜುಲೈ ತಿಂಗಳಿನಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಜಲಪಾತಗಳಲ್ಲೂ ಹೆಚ್ಚಿನ ಪ್ರಮಾಣದ ನೀರಿರುತ್ತದೆ. ನೀರು ಹೆಚ್ಚಿರುತ್ತೆ, ಇಂತಹ ಸಮಯದಲ್ಲಿಯೇ ಫಾಲ್ಸ್‌ಗಳಿಗೆ ಭೇಟಿ ನೀಡಬೇಕೆಂದು ಹಲವರು ಮಳೆಗಾಲದಲ್ಲಿಯೇ ಜಲಪಾತಗಳತ್ತ ಭೇಟಿ ನೀಡುತ್ತಾರೆ. ಫೋಟೋ ರೀಲ್ಸ್‌ಗಾಗಿ ಭೋರ್ಗರೆವ ನೀರಿನ ಮಧ್ಯೆ, ಜಾರುವ ಬಂಡೆಯ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಾರೆ. ಹೀಗೆ ಮಳೆಗಾಲದ ಸಂದರ್ಭಗಳಲ್ಲಿ ಫಾಲ್ಸ್‌ ಬಳಿ ಆಟವಾಡಲು ಹೋಗಿ ಅದೆಷ್ಟೋ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ. ಇಲ್ಲಿನ ನೀರಿನಲ್ಲಿ ಆಟವಾಡುತ್ತಾ ಪ್ರಕೃತಿಯೊಂದಿಗೆ ಸಮಯ ಕಳೆಯಬೇಕು ಎಂಬುವವರು ಮಳೆಗಾಲದ ನಂತರ ನೀರಿನ ಮಟ್ಟ ಕಡಿಮೆ ಇರುವ ಸಮಯದಲ್ಲಿಯೇ  ಇಲ್ಲಿಗೆ ಭೇಟಿ ನೀಡಿ.

ಮಳೆಗಾಲದ ಸಮಯದಲ್ಲಿ ಕೂಡ್ಲು ತೀರ್ಥ ಫಾಲ್ಸ್‌ಗೆ ಭೇಟಿ ನೀಡಲು ನಿರ್ಬಂಧವಿದೆ. ಹೌದು ನಿರಂತರ ಮಳೆಯಿಂದಾಗಿ ಬಂಡೆಗಳು ಜಾರುವುದರಿಂದ ಹಾಗೂ ಮೇಲಿನಿಂದ ರಭಸವಾಗಿ ಧುಮ್ಮುಕ್ಕುವುದರಿಂದ ಮುಂಜಾಗ್ರತೆ ಕ್ರಮವಾಗಿ ಇಲ್ಲಿಗೆ ಪ್ರವೇಶವಿರುವುದಿಲ್ಲ. ಅಲ್ಲದೆ ಒಂದು ನದಿಯನ್ನು ದಾಟಿಯೇ ಈ ಸ್ಥಳವನ್ನು ತಲುಪಬೇಕಾದ ಕಾರಣ ಮಳೆಗಾಲದಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಈ ಸಮಯದಲ್ಲಿ ಇಲ್ಲಿಗೆ ಪ್ರವೇಶವಿಲ್ಲ. ಸಪ್ಟೆಂಬರ್‌ನಿಂದ ಏಪ್ರಿಲ್‌ವರೆಗೆ ಭೇಟಿ ನೀಡಲು ಸೂಕ್ತವಾದ ಸ್ಥಳ ಇದಾಗಿದೆ.

“ಈ ಸಮಯದಲ್ಲಿ ಅಂದ್ರೆ ಮಳೆಗಾಲದಲ್ಲಿ ನೀರಿನ ಮಟ್ಟ ಕೂಡಾ ತೀರ ಹೆಚ್ಚಿರುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದಲ್ಲಿ ಈ ಜಲಪಾತಕ್ಕೆ ಭೇಟಿ ನೀಡಲು ನಿರ್ಬಂಧವಿದೆ. ಹಾಗಾಗಿ ಪ್ರವಾಸಿಗರು ಮಳೆಗಾಲದ ನಂತರವೇ ಇಲ್ಲಿಗೆ ಬರುವುದು ಸೂಕ್ತ. ಹೆಬ್ರಿ ತಾಲೂಕಿನಲ್ಲಿರುವ ಏಕೈಕ ಪ್ರವಾಸಿ ತಾಣ ಇದಾಗಿದ್ದು, ಪ್ರಕೃತಿ ಪ್ರೇಮಿಗಳು ಖಂಡಿತ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇಲ್ಲಿಗೆ ಬರುವವರು ತಪ್ಪದೇ ವರಂಗ ಜೈನ ಬಸದಿಗೂ ಭೇಟಿ ನೀಡಬೇಕು” ಎನ್ನುತ್ತಾರೆ ಸ್ಥಳೀಯ ನಿವಾಸಿ ಶಂಕರ್‌ ನಾಯ್ಕ್‌ ಹೆಬ್ರಿ.

ಇದನ್ನೂ ಓದಿ: ಈಗ ಸರಿಯಾದ ಸಮಯ ಆಗುಂಬೆಯ ಈ ಸ್ಥಳಗಳಿಗೆ ಹೋಗಲು

ವಿಡಿಯೋ ಇಲ್ಲಿದೆ ನೋಡಿ:

ಕೂಡ್ಲು ತೀರ್ಥ ಜಲಪಾತದ ಕಡೆಗೆ ಹೋಗುವುದು ಹೇಗೆ?

ಕೂಡ್ಲು ತೀರ್ಥ ಜಲಪಾತ ಉಡುಪಿಯಿಂದ ಸುಮಾರು 55 ಕಿ.ಮೀ ಹಾಗೂ ಆಗುಂಬೆಯಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ತೀರಾ ದಟ್ಟವಾದ ಅರಣ್ಯಗಳಿಂದ ಕೂಡ್ಲು ತೀರ್ಥ ಸುತ್ತುವರೆದಿದ್ದು,  ಸುಮಾರು 7 ಕಿ.ಮೀ ನಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಮನೋಹರವಾಗಿ ಧುಮ್ಮುಕ್ಕುವ ಕೂಡ್ಲು ತೀರ್ಥ ಜಲಪಾತವನ್ನು ತಲುಪಬಹುದು. ಸುಂದರ ಜಲಪಾತವಿರುವ ಈ ತಾಣವು ಸಾಹಸಿಗಳಿಗೆ ಚಾರಣಕ್ಕೂ ಅವಕಾಶ ಮಾಡಿಕೊಡುತ್ತದೆ. ದಟ್ಟವಾದ ಮತ್ತು ಕಡಿದಾದ ಅರಣ್ಯದ ದಾರಿಯಲ್ಲಿ ಟ್ರೆಕ್ಕಿಂಗ್‌ ಮಾಡುತ್ತಾ ಸಾಗಿದರೆ ಈ ಸುಂದರ ತಾಣವನ್ನು ತಲುಪಬಹುದು.

ಈ ಜಲಪಾತವು ದಟ್ಟಾರಣ್ಯದ ನಡುವಿನಲ್ಲಿ ಇರುವುದರಿಂದ ಹತ್ತಿರದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಲ್ಲ. ಹೆಬ್ರಿಯ ಬಳಿ ಮಾತ್ರ ಅಂಗಡಿಗಳಿವೆ. ಆದ್ದರಿಂದ ಚಾರಣಕ್ಕೆ ಹೋಗುವವರು ಇಲ್ಲಿಂದಲೇ ನೀರು, ತಿಂಡಿಯನ್ನು ಕೊಂಡೊಯ್ಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ