
ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Shri Krishna Janmashtami) ಆಚರಿಸಲಾಗುತ್ತದೆ. ಈ ಬಾರಿಯ ಕೃಷ್ಣಾಷ್ಟಮಿಗೆ ದಿನಗಣನೆ ಶುರುವಾಗಿದ್ದು, ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಷ್ಟಮಿ ಬಂತೆಂದರೆ ಪುಟ್ಟ ಮಕ್ಕಳಿಗೆ ಮುದ್ದು ಮುದ್ದಾಗಿ ರಾಧ ಕೃಷ್ಣರ ವೇಷ ತೊಡಿಸಿ ಹೆತ್ತವರು ಸಂಭ್ರಮಿಸುತ್ತಾರೆ. ಅಲ್ಲದೆ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಕ್ಕಳು ಮಾತ್ರವಲ್ಲದೆ ವಯಸ್ಸಿನ ಯಾವುದೇ ಮಿತಿಯಿಲ್ಲದೆ ದೊಡ್ಡವರು ಕೂಡಾ ಕೃಷ್ಣ ವೇಷ ಧರಿಸಿ ಸಂಭ್ರಮಿಸುತ್ತಾರೆ. ಹೀಗೆ ಕೃಷ್ಣಾಷ್ಟಮಿಯಂದು ಕೃಷ್ಣ ವೇಷ ತೊಡುವುದಕ್ಕೆ ವಯಸ್ಸಿನ ಮಿತಿ ಅನ್ನೋದು ಇದ್ಯಾ? ಯಾವ ವಯಸ್ಸಿನವರು ಕೃಷ್ಣ ವೇಷದ ಧರಿಸಿದರೆ ಸೂಕ್ತ ಅನ್ನೋದನ್ನು ತಿಳಿಯಿರಿ.
ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಹೆತ್ತವರು ರಾಧ-ಕೃಷ್ಣರ ವೇಷ ತೊಡಿಸುವ ಸಂಪ್ರದಾಯವಿದೆ. ಹೆಚ್ಚಿನವರು ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ತೊಡಿಸುತ್ತಾರೆ. ಇದಲ್ಲದೆ ಈಗಂತೂ ಯುವಕ ಯುವತಿಯರು ರಾಧ-ಕೃಷ್ಣರ ವೇಷ ತೊಟ್ಟು ಸಂಭ್ರಮಿಸುತ್ತಾರೆ. ಹೀಗೆ ಕೃಷ್ಣ ವೇಷ ತೊಡುವುದಕ್ಕೆ ವಯಸ್ಸಿನ ಮಿತಿ ಇದೆಯಾ ಎಂಬ ಗೊಂದಲ ಹಲವರಲ್ಲಿರುತ್ತದೆ. ಕೃಷ್ಣ ವೇಷವನ್ನು ಯಾರು ಧರಿಸಬಹುದು ಎಂಬುದನ್ನು ನೋಡುವುದಾದರೆ,
ಕೃಷ್ಣ ವೇಷ ಧರಿಸಲು ಯಾವುದೇ ವಯಸ್ಸಿನ ಮಿತಿ ಅನ್ನೋದು ಇಲ್ಲ. ಶಿಶುಗಳಿಂದ ಹಿಡಿದು ದೊಡ್ಡವರವರೆಗೆ ಶ್ರದ್ಧಾ ಭಕ್ತಿಯಿಂದ ಯಾರು ಬೇಕಾದರೂ ಕೃಷ್ಣ ವೇಷ ಧರಿಸಬಹುದು. ಹೆಚ್ಚಾಗಿ ಪುಟ್ಟ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ತೊಡಿಸುತ್ತಾರೆ. ಹೌದು ಕೃಷ್ಣನ ಪ್ರಿಯ ಬಣ್ಣವಾದ ಹಳದಿ ಬಣ್ಣದ ಧೋತಿ ತೊಡಿಸಿ, ಕೈಯಲ್ಲಿ ಕೊಳಲು, ತಲೆಗೊಂದು ನವಿಲು ಗರಿ ಇಟ್ಟು ಲಕ್ಷಣವಾಗಿ ಮಕ್ಕಳನ್ನು ಸಿಂಗರಿಸುತ್ತಾರೆ.
ಧೋತಿ: ಹಳದಿ ಬಣ್ಣ ಶ್ರೀಕೃಷ್ಣನ ಪ್ರಿಯವಾದ ಬಣ್ಣ ಎಂಬ ನಂಬಿಕೆಯಿದೆ. ಹಾಗಾಗಿ ನಿಮ್ಮ ಮಗುವಿಗೆ ಹಳದಿ ಬಣ್ಣದ ಧೋತಿಯನ್ನೇ ತೊಡಿಸಿ.
ಕಿರೀಟ: ಕಿರೀಟ ಶ್ರೀಕೃಷ್ಣನ ಉಡುಪಿನ ಭಾಗವಾಗಿದ್ದು, ಮಗುವಿಗೆ ಕೃಷ್ಣ ವೇಷ ತೊಡಿಸುತ್ತೀರಿ ಎಂದಾದರೆ ಕಿರೀಟ ಇರಲೇಬೇಕು.
ನವಿಲು ಗರಿ: ನಿಮ್ಮ ಮಗು ಶ್ರೀ ಕೃಷ್ಣನಂತೆ ಕಾಣಲು ನವಿಲು ಗರಿ ಇರಲೇಬೇಕು. ಕಿರೀಟದ ಜೊತೆಗೆ ತಲೆಗೊಂದು ನವಿಲು ಗರಿಯನ್ನು ಸಹ ಇಡಿ. ಇದು ನಿಮ್ಮ ಮಗು ಬಾಲ ಗೋಪಾಲನಂತೆ ಕಾಣುವಂತೆ ಮಾಡುತ್ತದೆ.
ಕೊಳಲು: ಮಕ್ಕಳಿಗೆ ಕೃಷ್ಣ ವೇಷ ಧರಿಸುತ್ತೀರಿ ಎಂದಾದರೆ ಕೊಳಲು ಸಹ ಇರಲೇಬೇಕು. ಈ ಕೊಳಲನ್ನು ಕೈಯಲ್ಲೂ ಕೊಡಬಹುದು ಅಥವಾ ಮಗುವಿನ ಸೊಂಟದಲ್ಲಿಯೂ ನೇತು ಹಾಕಬಹುದು.
ಇದನ್ನೂ ಓದಿ: ಶ್ರೀಕೃಷ್ಣ ಜಗತ್ತಿಗೆ ಹೇಳಿದ ಈ ಮೂರು ಕಟು ಸತ್ಯಗಳ ಬಗ್ಗೆ ನಿಮಗೆ ತಿಳಿದಿದ್ಯಾ?
ಬೆಣ್ಣೆ ಪಾತ್ರೆ: ಮಗುವಿನ ಕೈಯಲ್ಲಿ ಪುಟಾಣಿ ಬೆಣ್ಣೆ ಪಾತ್ರೆಯನ್ನು ಕೊಡಿ. ಇದು ನೋಟವನ್ನು ಪರಿಪೂರ್ಣಗೊಳಿಸುತ್ತದೆ.
ಆಭರಣ: ಕೃಷ್ಣನ ನೋಟವನ್ನು ಪರಿಪೂರ್ಣಗೊಳಿಸುವಲ್ಲಿ ಆಭರಣಗಳು ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಮುತ್ತಿನ ಹಾರ, ಹಾರ, ಬಳೆಗಳು, ತೋಳುಬಂದಿ, ಕಾಲ್ಗೆಜ್ಜೆ, ತೊಡಿಸಿ.
ಮೇಕಪ್: ಬಾಲ ಗೋಪಾಲನ ಮೇಕಪ್‌ಗಾಗಿ ನೀವು ಲೈಟ್ ಮೇಕಪ್ ಮಾಡಿ. ಇದಕ್ಕಾಗಿ, ನೀವು ಮಗುವಿನ ಮುಖಕ್ಕೆ ತಿಳಿ ಗುಲಾಬಿ ಬಣ್ಣದ ಬ್ಲಶ್, ಹಣೆಗೆ ಶ್ರೀಗಂಧ ಅಥವಾ ಕುಂಕುಮ ತಿಲಕ ಮತ್ತು ಕಣ್ಣುಗಳಿಗೆ ಕಾಜಲ್ ಹಚ್ಚಬಹುದು. ಈ ರೀತಿಯಾಗಿ, ತಯಾರು ಮಾಡಿದರೆ ನಿಮ್ಮ ಮಗು ಬಾಲ ಕೃಷ್ಣನಂತೆ ತುಂಬಾ ಮುದ್ದಾಗಿ ಕಾಣಿಸುವುದರಲ್ಲಿ ಎರಡು ಮಾತಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ