Raksha Bandhan 2025: ರಾಖಿ ಖರೀದಿಸುವ ಬದಲು ನೀವೇ ಮನೆಯಲ್ಲಿ ಹೀಗೆ ತಯಾರಿಸಿ
ರಕ್ಷಾ ಬಂಧನಕ್ಕೆ ಇನ್ನೇನು ಒಂದೆರಡು ದಿನಗಳಷ್ಟೇ ಬಾಕಿಯಿವೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹಾಗೂ ರಂಗುರಂಗಿನ ರಾಖಿಗಳು ಲಗ್ಗೆ ಇಟ್ಟಿವೆ. ಹೀಗಿರುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ರಾಖಿ ಖರೀದಿಸಿ ಅಣ್ಣನಿಗೆ ರಾಖಿ ಕಟ್ಟಿ ಸಹೋದರಿಯರು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ನಿಮ್ಮ ಕೈಯಾರೆ ರಾಖಿ ತಯಾರಿಸಿ ನೂಲ ಹುಣ್ಣಿಮೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬಹುದು.

ಅಣ್ಣ ತಂಗಿಯರ ನಡುವಿನ ಬಾಂಧವ್ಯ ಸಾರುವ ರಕ್ಷಾ ಬಂಧನ (Raksha Bandhana) ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವು ಈ ಬಾರಿ ಆಗಸ್ಟ್ 09 ರಂದು ಬಂದಿದೆ. ರಕ್ಷಾ ಬಂಧನ ಎಂದ ಕೂಡಲೇ ನೆನಪಾಗುವುದೇ ಬಣ್ಣ ಬಣ್ಣದ ರಾಖಿಗಳು. ಈ ಹಬ್ಬದ (festivals) ದಿನವು ರಾಖಿ ಪ್ರಮುಖ ಸಂಕೇತವಾಗಿದ್ದು, ಈ ದಾರವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ, ರಕ್ಷಣೆ ಮತ್ತು ಬಾಂಧವ್ಯವನ್ನು ಸೂಚಿಸುತ್ತದೆ. ಈ ದಿನ ವಿಶೇಷವಾಗಿ ಅಣ್ಣನಿಗೆ ಅಥವಾ ತಮ್ಮನಿಗೆ ರಾಖಿ ಕಟ್ಟಿ ಆ ದೇವರಲ್ಲಿ ತನ್ನ ಪ್ರೀತಿಯ ಆರೋಗ್ಯ ಭಾಗ್ಯ, ಆಯುಷ್ಯ ಕರುಣಿಸಲಿ ಎಂದು ಸಹೋದರಿಯರು ಪ್ರಾರ್ಥಿಸುತ್ತಾರೆ. ಕೆಲವರು ಚಿನ್ನ ಬೆಳ್ಳಿಯ ರಾಖಿಯನ್ನು ಕಟ್ಟುವುದನ್ನು ನೀವು ನೋಡಿರಬಹುದು. ನಿಮ್ಮ ಸಹೋದರಿಗೆ ಸರ್ಪ್ರೈಸ್ ನೀಡಲು ಬಯಸಿದ್ರೆ ಈ ಬಾರಿ ರಕ್ಷಾ ಬಂಧನಕ್ಕೆ ನಿಮ್ಮ ಕೈಯಾರೆ ತಯಾರಿಸಿದ ರಾಖಿಯನ್ನೇ ಕಟ್ಟಬಹುದು. ಮನೆಯಲ್ಲೇ ಸುಲಭವಾಗಿ ರಾಖಿ ಮಾಡುವುದು ಹೇಗೆ? ಎಂದು ನೀವಿಲ್ಲಿ ತಿಳಿದುಕೊಳ್ಳಿ.
ರಾಖಿ ತಯಾರಿಸುವಾಗ ಈ ವಸ್ತುಗಳು ನಿಮ್ಮ ಬಳಿಯಿರಲಿ
ರಕ್ಷಾ ಬಂಧನದ ದಿನ ನಿಮ್ಮ ಅಣ್ಣನಿಗೋ ಅಥವಾ ತಮ್ಮನ ಕೈಗೆ ಕಟ್ಟುವ ರಾಖಿಯನ್ನು ನೀವು ಅಂಗಡಿಯಲ್ಲಿ ಹಣಕೊಟ್ಟು ಖರೀದಿಸುವುದಕ್ಕಿಂತ ನಿಮ್ಮ ಕೈಯಾರೆ ತಯಾರಿಸುವುದರಿಂದ ಅದರ ಮೌಲ್ಯವು ಹೆಚ್ಚುತ್ತದೆ. ನೀವೇನಾದ್ರೂ ರಾಖಿ ಮಾಡುತ್ತೀರಿ ಅಂತಾದ್ರೆ ಬಣ್ಣ ಬಣ್ಣದ ರೇಷ್ಮೆ ಅಥವಾ ಹತ್ತಿಯ ದಾರ, ಮಣಿಗಳು, ಸ್ಟಿಕ್ಕರ್, ಕತ್ತರಿ, ಅಂಟು ಇವಿಷ್ಟು ನಿಮ್ಮ ಬಳಿಯಿರಬೇಕು.
ರಾಖಿ ತಯಾರಿಸುವ ವಿಧಾನ ಹೀಗಿದೆ
- ಮೊದಲಿಗೆ ನಿಮಗೆ ಬೇಕಾದ ಉದ್ದಕ್ಕೆ ಹತ್ತಿ ಅಥವಾ ರೇಷ್ಮೆ ದಾರವನ್ನು ಕತ್ತರಿಸಿಕೊಳ್ಳಿ.
- ನಿಮಗೆ ಯಾವ ಡಿಸೈನ್ ಬೇಕು, ಆ ರೀತಿಯಾಗಿಈ ದಾರಕ್ಕೆ ನಿಮ್ಮ ಬಳಿಯಿರುವ ಬಣ್ಣ ಬಣ್ಣದ ಮಣಿಗಳನ್ನು ಒಂದೊಂದಾಗಿ ಪೋಣಿಸಿಕೊಳ್ಳಿ. ಆದರೆ ಮಣಿಗಳು ಒಂದಕ್ಕೊಂದು ಅಂಟಿಕೊಳ್ಳದ್ದಂತೆ ನೋಡಿಕೊಳ್ಳಿ.
- ಈ ದಾರದ ಮಧ್ಯಭಾಗಕ್ಕೆ ಸ್ಟಿಕ್ಕರ್ ಇಲ್ಲವಾದರೆ ಆಕರ್ಷಕ ಅಲಂಕಾರಿಕ ವಸ್ತುವನ್ನು ಗಮ್ ಸಹಾಯದಿಂದ ಅಂಟಿಸಿಕೊಳ್ಳಿ.
- ಈ ರಾಖಿಯನ್ನು ತಯಾರಿಸುವಾಗ ನಿಮ್ಮ ಕ್ರಿಯೇಟಿವಿಯನ್ನು ಬಳಸಿಕೊಂಡು ಈ ದಾರದ ಮಧ್ಯಭಾಗದಲ್ಲಿ ನಿಮ್ಮ ಅಣ್ಣನ ಹೆಸರಿನ ಮೊದಲ ಅಕ್ಷರವನ್ನು ಅಂಟಿಸಿಕೊಳ್ಳಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








