Makeup Tips: ಮೇಕಪ್ ನ್ಯಾಚುಲರ್ ಆಗಿ ಬರಬೇಕಂದ್ರೆ ಈ ಟಿಪ್ಸ್ ಪಾಲಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 08, 2025 | 4:00 PM

ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿಕೊಳ್ಳುವುದು ಎಲ್ಲರಿಗೂ ಇಷ್ಟ. ಅಂತಹ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ, ಮೇಕಪ್ ಅತಿಯಾಗಬಾರದು ಎನ್ನುವುದಿರುತ್ತದೆ. ಆದರೆ, ಕೆಲವೊಮ್ಮೆ ಮೇಕಪ್ ಹೆಚ್ಚಾಗಿ ಅಸಹ್ಯವಾಗಿ ಕಾಣುತ್ತದೆ. ಮುಖಕ್ಕೆ ಹೆಚ್ಚು ಬಳಿಯುವುದಕ್ಕಿಂತ ನ್ಯಾಚುಲರ್ ಆಗಿದ್ದರೇನೇ ಚಂದ. ಹಾಗಾದ್ರೆ ಸಿಂಪಲ್ ಹಾಗೂ ನ್ಯಾಚುಲರ್ ಆಗಿ ಮೇಕಪ್ ಮಾಡಿಕೊಳ್ಳುವುದು ಹೇಗೆ? ಎನ್ನುವುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

Makeup Tips: ಮೇಕಪ್ ನ್ಯಾಚುಲರ್ ಆಗಿ ಬರಬೇಕಂದ್ರೆ ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us on

ಹೆಣ್ಮಕ್ಕಳಿಗೆ ಸೌಂದರ್ಯದ ಕಾಳಜಿ ತುಸು ಹೆಚ್ಚೇ ಇರುತ್ತದೆ. ಹಬ್ಬ ಹರಿದಿನ ಹಾಗೂ ಶುಭ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳನ್ನು ಮೇಕಪ್ ಇಲ್ಲದೇನೆ ನೋಡುವುದೇ ಕಷ್ಟ. ಎಲ್ಲರಂತೆ ತಾನು ಕೂಡ ಸುಂದರವಾಗಿ ಕಾಣಬೇಕು ಎನ್ನುವ ಆಸೆಯಿಂದ ವಿವಿಧ ರೀತಿಯ ಮೇಕಪ್ ಟ್ರೈ ಮಾಡುತ್ತಾರೆ. ಈ ವೇಳೆಯಲ್ಲಿ ದುಬಾರಿ ಬೆಲೆಯ ಮೇಕಪ್ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಆದರೆ ಮೇಕಪ್ ಉತ್ಪನ್ನಗಳ ಬಳಕೆ ಹೆಚ್ಚಾದರೆ ಅಂದವೇ ಹಾಳಾಗುತ್ತದೆ. ಈ ಟಿಪ್ಸ್ ಪಾಲಿಸಿದ್ರೆ ನ್ಯಾಚುರಲ್ ಆಗಿ ಮೇಕಪ್ ಮಾಡಿ ಸುಂದರವಾಗಿ ಕಾಣಿಸಿಕೊಳ್ಳಬಹುದು.

  • ಮುಖವನ್ನು ಸ್ವಚ್ಛಗೊಳಿಸಿ, ಮಾಯಿಶ್ಚರೈಸರ್‌ ಬಳಸಿ : ಮೇಕಪ್ ಮಾಡಿಕೊಳ್ಳುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಮುಖ ಒಮ್ಮೆ ಸ್ವಚ್ಛಗೊಳಿಸಿದ ನಂತರ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ. ಇದರಿಂದ ಚರ್ಮವನ್ನು ಹೈಡ್ರೇಟ್ ಆಗುತ್ತದೆ. ನ್ಯಾಚುರಲ್ ಮೇಕಪ್ ಗಾಗಿ ಮುಖವನ್ನು ಸ್ವಚ್ಚಗೊಳಿಸಿ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಲು ಮರೆಯದಿರಿ.
  • ಪ್ರೈಮರ್‌ ಬಳಕೆಯಿರಲಿ : ಮೇಕಪ್‌ ದೀರ್ಘಕಾಲದವರೆಗೆ ಪ್ರೈಮರ್‌ ಸಹಕಾರಿಯಾಗಿದೆ. ಮಾಯಿಶ್ಚರೈಸರ್‌ ನಂತರ ನ್ಯಾಚುಲರ್ ಮೇಕಪ್ ಲುಕ್ ಪಡೆಯಬೇಕಾದರೆ ಪ್ರೈಮರ್‌ ಹಚ್ಚಿಕೊಳ್ಳಿ. ಇದು ಚರ್ಮವನ್ನು ಮೃದುವಾಗಿಸಿ ಮೇಕಪ್‌ ಅಂದ ದುಪ್ಪಟ್ಟು ಮಾಡುತ್ತದೆ.
  • ಕ್ರೀಮ್ ಬಳಸುವುದನ್ನು ಮರೆಯದಿರಿ : ಮಾಯಿಶ್ಚರೈಸರ್‌, ಪ್ರೈಮರ್‌ ಬಳಸಿದ ನಂತರವೇ ನಿಮ್ಮ ಚರ್ಮದ ಆಧಾರದ ಮೇಲೆ ಕ್ರೀಮ್ ಬಳಸಿ. ನಿಮ್ಮ ಚರ್ಮವು ಸ್ವಲ್ಪ ಬಿಗಿಯಾಗಿದ್ದರೆ ಬಿಬಿ ಕ್ರೀಮ್ ಅನ್ನು ಪ್ರಯತ್ನಿಸಿ. ಕೈ ಅಥವಾ ಮೇಕಪ್ ಬ್ರಷ್ ಸಹಾಯದಿಂದ ತ್ವಚೆಗೆ ಕ್ರೀಮ್ ಸರಿಯಾಗಿ ಅನ್ವಯಿಸಿ. ಇದು ಮೇಕಪ್ ಪರ್ಫೆಕ್ಟ್ ಆಗಿ ಬರಲು ಸಹಾಯ ಮಾಡುತ್ತದೆ.
  • ತ್ವಚೆಯ ಮೇಲಿನ ಕಲೆಗೆ ಕನ್ಸೀಲರ್‌ ಬಳಕೆಯಿರಲಿ : ಕೆಲವರ ಮುಖದಲ್ಲಿ ಮೊಡವೆ ಕಲೆಗಳಿರುತ್ತದೆ. ಈ ಕಲೆ ಹಾಗೂ ಡಾರ್ಕ್ ಸರ್ಕಲ್ ಮರೆಮಾಚಲು ಕನ್ಸೀಲರ್‌ ಸಹಾಯ ಮಾಡುತ್ತದೆ. ಕನ್ಸೀಲರ್‌ ಹಚ್ಚಿ ವೃತ್ತಾಕಾರವಾಗಿ ಬ್ರಷ್‌ ಅಥವಾ ಸ್ಪಾಂಜ್‌ನಿಂದ ಮುಖಕ್ಕೆ ಹಚ್ಚಿಕೊಳ್ಳಿ.
  • ಸೆಟ್ಟಿಂಗ್ ಪೌಡರ್ ಬಳಸಿ : ಈ ಮೇಲಿನ ಹಂತಗಳು ಮುಗಿದ ಮೇಲೆ ಮುಖವನ್ನು ಸೆಟ್ಟಿಂಗ್‌ ಪೌಡರ್‌ನಿಂದ ಸೆಟ್‌ ಮಾಡಿಕೊಳ್ಳಿ. ಎಲ್ಲಾ ಕಡೆ ಒಂದೇ ರೀತಿ ಬರುವಂತೆ ಪೌಡರನ್ನು ಹಚ್ಚಿ ಸೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಸೆಟ್ ಮಾಡುವುದು ಸ್ವಲ್ಪ ವ್ಯತ್ಯಾಸವಾದರೂ ಕೂಡ ಮೇಕಪ್ ಪರ್ಫೆಕ್ಟ್ ಆಗಲ್ಲ.
  • ಬ್ಲಶ್ ಮತ್ತು ಹೈಲೈಟರ್ ಬಳಕೆ ಮಾಡಿ : ಮೇಕಪ್‌ ಬ್ಲಶ್‌ ಮತ್ತು ಹೈಲೈಟರ್‌ ಇಲ್ಲದೇ ಅಪೂರ್ಣವಾಗುತ್ತದೆ. ಹೀಗಾಗಿ ಪೌಡರ್ ಬಳಸಿ ಸೆಟ್ ಮಾಡಿದ ಬಳಿಕ ಮೂಗು, ಕಣ್ಣಿನ ಐಬ್ರೋ ಕೆಳಗೆ, ತುಟಿಯ ಮೇಲೆ ಹೈಲೈಟರ್‌ನಿಂದ ಈ ಜಾಗಗಳನ್ನು ಹೈಲೈಟ್‌ ಮಾಡುವುದನ್ನು ಮರೆದಿರಿ. ಇದು ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
  • ಕಣ್ಣಿನ ಮೇಕಪ್‌ ಹಾಗೂ ತುಟಿಗೆ ಲೈಟ್ ಲಿಪ್ಸ್ಟಿಕ್ ಬಳಸಿ : ಮೇಕಪ್‌ ನಲ್ಲಿ ನಿಮ್ಮ ಕಣ್ಣುಗಳೇ ಹೈ ಲೈಟ್ ಮಾಡುವುದು ಮುಖ್ಯ. ಹೀಗಾಗಿ ಐಬ್ರೋ, ಕಣ್ಣಿನ ಕೆಳಭಾಗಕ್ಕೆ ಮೇಕಪ್ ಮಾಡಿಕೊಳ್ಳಿ. ಐಶ್ಯಾಡೋ, ಕಣ್ಣಿನ ಕೆಳಗೆ ಕಾಡಿಗೆ, ಮಸ್ಕಾರ ಹಚ್ಚಿದರೆ ಕಣ್ಣಿನ ಮೇಕಪ್ ಪೂರ್ಣವಾಗುತ್ತದೆ. ತುಟಿಗೆ ಲಿಪ್ ಬಾಮ್ ಬಳಸಿ. ಅದಲ್ಲದೇ, ನೈಸರ್ಗಿಕ ತುಟಿ ಬಣ್ಣಕ್ಕೆ ಹೊಂದುವ ಲಿಪ್ ಲೈನರ್‌ ಹಾಗೂ ತಿಳಿ ಬಣ್ಣದ ಲಿಪ್ ಸ್ಟಿಕ್ ಬಳಸಿ. ಇದು ನ್ಯಾಚುಲರ್ ಮೇಕಪ್ ಲುಕ್ ಬರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ