Promise Day 2024: ನಿಮ್ಮ ಸಂಗಾತಿಗೆ ಈ ಆರು ಭರವಸೆ ನೀಡುವ ಮೂಲಕ ಪ್ರೀತಿಯ ಬಂಧವನ್ನು ಬಲಪಡಿಸಿಕೊಳ್ಳಿ
ಪ್ರೇಮಿಗಳ ವಾರದ ಐದನೇ ದಿನದಂದು ಪ್ರಾಮಿಸ್ ಡೇ ಯನ್ನು ಆಚರಿಸಲಾಗುತ್ತದೆ. ಟೆಡ್ಡಿ ಡೇ ನಂತರ ಬರುವ ಈ ದಿನವನ್ನು ಪ್ರೇಮಿಗಳ ನಡುವಿನ ನಂಬಿಕೆ ಮತ್ತು ಪ್ರೀತಿಯ ಬಂಧವನ್ನು ಬಲಪಡಿಸುವ ಸಲುವಾಗಿ ಭರವಸೆಗಳನ್ನು ವ್ಯಕ್ತಪಡಿಸಲು ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಸಂಗಾತಿಗೆ ಕೆಲವು ವಿಶೇಷ ಭರವಸೆಗಳನ್ನು ನೀಡುವ ಮೂಲಕ ಪ್ರಾಮಿಸ್ ಡೇ ಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಬಹುದು
ವ್ಯಾಲೆಂಟೈನ್ಸ್ ವೀಕ್ ಅನ್ನು ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಆಚರಿಸಲಾಗುತ್ತದೆ. ಅದರಲ್ಲಿ ಐದನೇ ದಿನದಂದು ಅಂದರೆ ಫೆಬ್ರವರಿ 11 ನೇ ತಾರೀಕಿನಂದು ಪ್ರಾಮಿಸ್ ಡೇ ಯನ್ನು ಆಚರಿಸಲಾಗುತ್ತದೆ. ಪ್ರಾಮಿಸ್ ಡೇ… ಹೆಸರೇ ಹೇಳುವಂತೆ ಇದು ಭರವಸೆ ನೀಡುವ ದಿನ. ಪ್ರೀತಿಯ ಬಂಧದಲ್ಲಿ ಬೆಸೆದುಕೊಂಡಿರುವ ಪ್ರೇಮಿಗಳಿಗೆ ಪರಸ್ಪರ ವಾಗ್ದಾನಗಳನ್ನು ನೀಡಲು ಇರುವ ಅವಕಾಶವಿದು. ಸಂಬಂಧದಲ್ಲಿ ಭರವಸೆಗಳು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಭರವಸೆಗಳನ್ನು ನೀವು ಉಳಿಸಿಕೊಂಡರೆ, ಅದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ. ಹಾಗಾಗಿ ಈ ವಿಶೇಷ ದಿನದಂದು ನಿಮ್ಮ ಸಂಗಾತಿಗೆ ಕೆಲವೊಂದು ಭರವಸೆಗಳನ್ನು ನೀಡಬಹುದು. ಈ ಭರವಸೆಗಳು ನಿಮ್ಮ ಪ್ರೀತಿಯನ್ನು ಬಲಪಡಿಸುತ್ತದೆ. ನೀವು ಕೂಡಾ ನಿಮ್ಮ ಸಂಗಾತಿ ಅಥವಾ ಪ್ರೇಮಿಯ ಜೊತೆಗೆ ಪ್ರಾಮಿಸ್ ಡೇ ಯನ್ನು ಆಚರಿಸುತ್ತಿದ್ದರೆ, ಈ ಕೆಲವು ವಿಶೇಷ ಭರವಸೆಗಳನ್ನು ನೀಡುವ ಮೂಲಕ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸಬಹುದು.
ನಿಮ್ಮ ಭರವಸೆಯ ಮಾತುಗಳು ಹೀಗಿರಲಿ:
ಮೊದಲ ಭರವಸೆ:
ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಲ್ಲುವೆ: ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು ಎಂಬುದು ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ನಮ್ಮ ಪ್ರೀತಿ ಪಾತ್ರರ ಬೆಂಬಲದ ಅವಶ್ಯಕತೆ ಇರುತ್ತದೆ. ಹಾಗಿರುವಾಗ ಈ ಪ್ರಾಮಿಸ್ ಡೇ ಯಂದು ನಿಮ್ಮ ಸಂಗಾತಿಗೆ ನೀವು ಅವರ ಜೀವನದುದ್ದಕ್ಕೂ ಪ್ರತಿ ಕ್ಷಣವೂ ಬೆನ್ನೆಲುಬಾಗಿ ನಿಲ್ಲುವಿರಿ ಎಂಬ ವಿಶೇಷ ಭರವಸೆಯನ್ನು ನೀಡಬಹುದು.
ಎರಡನೇ ಭರವಸೆ:
ನಿನ್ನ ಮೇಲಿನ ನಂಬಿಕೆ ಕಿಂಚಿತ್ತು ಕಡಿಮೆಯಾಗಲಾರದು: ಈ ಜಗತ್ತಿನಲ್ಲಿ ಅತ್ಯಂತ ದುಬಾರಿಯಾದುದು ಯಾವುದು ಎಂದರೆ ಅದು ನಂಬಿಕೆ. ಸಂಬಂಧದಲ್ಲಿ ಈ ನಂಬಿಕೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಯಾವುದೇ ಸಂಬಂಧವನ್ನು ಬಲಪಡಿಸಲು ಪ್ರಾಮಾಣಿಕತೆ ಮತ್ತು ನಂಬಿಕೆ ಅತ್ಯಂತ ಅವಶ್ಯಕವಾಗಿದೆ. ಹೀಗಿರುವಾಗ ಪ್ರತಿಯೊಂದು ವಿಷಯದಲ್ಲೂ ನಾನು ನಿನ್ನನ್ನು ನಂಬುತ್ತೇನೆ, ಯಾವುದೇ ಕಾರಣಕ್ಕೂ ನಿನ್ನನ್ನು ಅನುಮಾನಿಸಲಾರೆ ಎಂಬ ಭರವಸೆಯನ್ನು ನೀಡಬಹುದು.
ಮೂರನೇ ಭರವಸೆ:
ಬದಲಾಯಿಸಲು ಪ್ರಯತ್ನಿಸಬೇಡಿ: ಈ ಸಂಬಂಧದಲ್ಲಿ ಯಾವುದೇ ರೀತಿಯ ನಿರ್ಬಂಧವನ್ನು ಇಟ್ಟುಕೊಳ್ಳಬೇಡಿ. ಹೆಚ್ಚಿನವರು ಪ್ರೀತಿಗೆ ಬಿದ್ದ ನಂತರ ಅಥವಾ ಮದುವೆಯಾದ ನಂತರ ತಮ್ಮ ಸಂಗಾತಿಯನ್ನು ಅವರ ಇಚ್ಛೆಗೆ ತಕ್ಕಂತೆ ರೂಪಿಸಲು ಪ್ರಯತ್ನಿಸುತ್ತಾರೆ. ಈ ಒಂದು ಅಭ್ಯಾಸ ಸಂಬಂಧವನ್ನು ಹಾಳು ಮಾಡಬಹುದು. ಹಾಗಾಗಿ ಈ ಒಂದು ವಿಶೇಷ ದಿನ ನೀವು ನಿಮ್ಮ ಸಂಗಾತಿಗೆ ನೀವು ಹೇಗೆ ಇದ್ದಿಯೋ ಹಾಗೇ ನಿನ್ನನ್ನು ಸ್ವೀಕರಿಸುವುವೇ, ನಮ್ಮ ಸಂಬಂಧದಲ್ಲಿ ಯಾವುದೇ ರಿಸ್ಟ್ರಿಕ್ಷನ್ ಇಟ್ಟುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನೀಡಬಹುದು.
ಇದನ್ನೂ ಓದಿ: ಪ್ರಾಮಿಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?
ನಾಲ್ಕನೇ ಭರವಸೆ:
ಜೀವನ ಪೂರ್ತಿ ನಿನ್ನ ಜೊತೆಯಾಗಿಯೇ ಇರುವೆ: ನಿಮ್ಮ ಜೀವನದುದ್ದಕ್ಕೂ ನೀವು ಒಬ್ಬರಿಗೊಬ್ಬರು ಇರುತ್ತೀರಿ ಎಂದು ಪ್ರಾಮೀಸ್ ಡೇ ಯಂದು ನೀವು ಭರವಸೆ ನೀಡಿದರೆ, ಈ ಭರವಸೆ ನಿಮ್ಮಿಬ್ಬರಿಗೂ ಸಂತೋಷವನ್ನು ನೀಡುತ್ತದೆ. ಅದು ಕಷ್ಟದ ಸಮಯವಾಗಿರಲಿ ಅಥವಾ ಒಳ್ಳೆಯ ಸಮಯವಾಗಿರಲಿ ನಿಮ್ಮ ಸಂಗಾತಿಯನ್ನು ಯಾವಾಗಲು ಬೆಂಬಲಿಸುವುದಾಗಿ ಭರವಸೆ ನೀಡಿ,, ಇದು ನಿಮ್ಮ ಸಂಗಾತಿಗೆ ಯಾವುದೇ ಪರಿಸ್ಥಿತಿಯಲ್ಲಿ ಒಂಟಿತನವನ್ನು ಅನುಭವಿಸದಿರಲು ಅವರಿಗೆ ಸಹಾಯ ಮಾಡುತ್ತದೆ.
ಐದನೇ ಭರವಸೆ:
ಅವರ ಇಚ್ಛೆಯಂತೆ ಜೀವನ ನಡೆಸಲು ಬೆಂಬಲ ನೀಡುವುದು: ಪ್ರಾಮಿಸ್ ಡೇ ದಿನದಂದು ನೀವು ಮಾಡಬಹುದಾದ ಐದನೇ ಭರವಸೆಯೆಂದರೆ, ನೀವು ನಿಮ್ಮ ಸಂಗಾತಿಗೆ ಯಾವುದೇ ರಿಸ್ಟ್ರಿಕ್ಷನ್ಸ್ ಗಳನ್ನು ಹೇರದೆ ಅವರ ಇಚ್ಛೆಯಂತೆ ಅವರು ಸ್ವತಂತ್ರವಾಗಿ ಬದುಕಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತೀರಿ ಎಂಬ ಭರವಸೆಯನ್ನು ನೀಡಿ ಮತ್ತು ನಿಮ್ಮ ಸಂಗಾತಿಗೆ ಏನಾದರೂ ಕನಸುಗಳಿದ್ದರೆ, ಅದನ್ನು ಈಡೇರಿಸುವ ಭರವಸೆಯನ್ನು ನೀಡಿ.
ಆರನೇ ಭರವಸೆ:
ಯಾವುದೇ ಕಾರಣಕ್ಕೂ ಸುಳ್ಳು ಹೇಳಲಾರೆ: ಯಾವುದೇ ಕಾರಣಕ್ಕೂ ಒಂದು ಸುಳ್ಳು ಕೂಡಾ ಹೇಳಲಾರೆ ಎಂಬ ಭರವಸೆಯನ್ನು ನೀಡಬಹುದು. ಸಂಬಂಧದಲ್ಲಿ ನಂಬಿಕೆ ಎನ್ನುವುದು ತುಂಬಾನೇ ಮುಖ್ಯ. ಹಾಗಿರುವಾಗ ನೀವೇನಾದರೂ ಒಂದು ಸಣ್ಣ ಸುಳ್ಳು ಹೇಳಿದರೂ ಅದು ನಿಮ್ಮ ಸಂಗಾತಿಯ ನಂಬಿಕೆಗೆ ಪೆಟ್ಟು ಬೀಳುವಂತೆ ಮಾಡಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ