ನುಗ್ಗೆ ಮರದ ಪ್ರತಿಯೊಂದು ಭಾಗವು ಔಷಧೀಯ ಗುಣವನ್ನು ಹೊಂದಿದೆ. ಹೀಗಾಗಿ ಆಯುರ್ವೇದದಲ್ಲಿ ಔಷಧಿಗಳ ತಯಾರಿಕೆಯಲ್ಲಿ ನುಗ್ಗೆ ಮರದ ಪ್ರತಿಯೊಂದು ಭಾಗವನ್ನು ಬಳಸಲಾಗುತ್ತದೆ. ಅದರಲ್ಲಿಯೂ ಈ ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ಎ, ಬಿ-ಕಾಂಪ್ಲೆಕ್ಸ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿದ್ದು, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ಮನೆಯ ಸುತ್ತ ಮುತ್ತ ನುಗ್ಗೆಯ ಮರವಿದ್ದರೆ ನುಗ್ಗೆ ಸೊಪ್ಪಿನಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
* ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ, ಅದಕ್ಕೆ ಬೆಳ್ಳುಳ್ಳಿ ರಸ ಬೆರೆಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
* ನುಗ್ಗೆ ಸೊಪ್ಪಿನ ರಸವನ್ನು ಕುದಿಸಿ ಕುಡಿಯುತ್ತಿದ್ದರೆ ಮಲಬದ್ಧತೆ ಸಮಸ್ಯೆ ಯೂ ದೂರವಾಗುತ್ತದೆ.
* ನುಗ್ಗೆಸೊಪ್ಪು, ಹೆಚ್ಚಿದ ಶುಂಠಿ, ಹರಳು ಗಿಡದ ಎಲೆ, ತುಳಸಿ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿ ಬೆನ್ನುನೋವು ಇರುವ ಜಾಗಕ್ಕೆ ಬಿಸಿ ಶಾಖವಿಟ್ಟರೆ ಬೆನ್ನುನೋವು ಕಡಿಮೆಯಾಗುತ್ತದೆ.
* ನುಗ್ಗೆಸೊಪ್ಪು, ತುಳಸಿ ಎಲೆಗಳನ್ನು ಹುರಿದು ಕೀಲುನೋವಿರುವ ಜಾಗಕ್ಕೆ ಶಾಖವನ್ನು ಕೊಟ್ಟರೆ ನೋವು ನಿವಾರಣೆಯಾಗುತ್ತದೆ.
* ತಲೆ ನೋವಿನಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪಿನ ಒಂದು ತೊಟ್ಟು ರಸವನ್ನು ಕಿವಿಗೆ ಹಾಕುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ರಸ ತೆಗೆದು ಅದಕ್ಕೆ ಅಡಿಗೆ ಉಪ್ಪು ನಿಂಬೆರಸ, ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಗ್ಗೆ ಸೇವಿಸಿದರೆ ಸಂಭೋಗದ ಶಕ್ತಿಯು ವೃದ್ಧಿಯಾಗುತ್ತದೆ.
ಇದನ್ನೂ ಓದಿ: ಒಡೆದ ಹಿಮ್ಮಡಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ, ಇಲ್ಲಿದೆ ಮನೆ ಮದ್ದು
* ನುಗ್ಗೆ ಸೊಪ್ಪನ್ನು ನುಣ್ಣಗೆ ರುಬ್ಬಿ ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
* ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತವು ಶುದ್ಧಿಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು ಅದಕ್ಕೆ ನಿಂಬೆರಸ ಹಿಂಡಿ ಒಂದು ವಾರಗಳ ಕಾಲ ಸೇವಿಸಿದರೆ ತಲೆಸುತ್ತುವ ಸಮಸ್ಯೆಯೂ ದೂರವಾಗುತ್ತದೆ.
* ಎಳೆಯ ನುಗ್ಗೆಸೊಪ್ಪು ಹಾಗೂ ನುಗ್ಗೆಯ ಹೂವಿನಿಂದ ತಯಾರಿಸಿದ ಸೂಪನ್ನು ಕುಡಿಯುತ್ತಿದ್ದರೆ ರಕ್ತಹೀನತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Fri, 2 February 24