National Doctor’s Day 2021: ಯುವ ವೈದ್ಯರೆಲ್ಲರೂ ಕೊರೊನಾ ಚಿಕಿತ್ಸೆಗೇ ಮೀಸಲು; ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಬಹುದು

National Doctor's Day 2021: ಯುವ ವೈದ್ಯರೆಲ್ಲರೂ ಕೊರೊನಾ ಚಿಕಿತ್ಸೆಗೇ ಮೀಸಲು; ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಬಹುದು
ಸಾಂದರ್ಭಿಕ ಚಿತ್ರ

ಕೊರೊನಾ ಸಂದರ್ಭದಲ್ಲಿ ಅಹರ್ನಿಶಿ ದುಡಿಯುತ್ತಾ, ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯ ಸಮೂಹದ ಸೇವೆ ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು. ಎಷ್ಟೋ ಕಷ್ಟ, ಅವಮಾನ, ದೌರ್ಜನ್ಯಗಳನ್ನು ಎದುರಿಸಿದರೂ ಅವುಡುಗಚ್ಚಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸುತ್ತಿರುವ ಎಲ್ಲಾ ವೈದ್ಯರಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.

Dr Lakshmeesha J Hegade

| Edited By: Skanda

Jul 01, 2021 | 8:53 AM

ಇಂದು ರಾಷ್ಟ್ರೀಯ ವೈದ್ಯರ ದಿನ. ಹುಟ್ಟಿನಿಂದ ಹಿಡಿದು ಸಾವಿನ ತನಕ ನಮ್ಮ ಬದುಕಿನಲ್ಲಿ ಅನೇಕ ಸಲ ಬಂದು ಹೋಗುವ ವೈದ್ಯರಿಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಅಹರ್ನಿಶಿ ದುಡಿಯುತ್ತಾ, ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯ ಸಮೂಹದ ಸೇವೆ ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು. ಎಷ್ಟೋ ಕಷ್ಟ, ಅವಮಾನ, ದೌರ್ಜನ್ಯಗಳನ್ನು ಎದುರಿಸಿದರೂ ಅವುಡುಗಚ್ಚಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸುತ್ತಿರುವ ಎಲ್ಲಾ ವೈದ್ಯರಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ವೈದ್ಯರು ಅನುಭವಿಸುತ್ತಿರುವ ಸಂಕಟ, ಭವಿಷ್ಯದಲ್ಲಿ ವೈದ್ಯಲೋಕ ಎದುರಿಸಬೇಕಾದ ಸವಾಲು, ವೈದ್ಯ ದಿನಾಚರಣೆಯ ನೆಪದಲ್ಲಿ ಗಮನಹರಿಸಬೇಕಾದ ಕೆಲ ವಿಚಾರಗಳ ಬಗ್ಗೆ ಡಾ.ಲಕ್ಷ್ಮೀಶ ಜೆ ಹೆಗಡೆ ಬರೆದ ಲೇಖನ ಇಲ್ಲಿದೆ.

ಅದು ಕೊರೊನಾ ಮೊದಲ ಅಲೆಯ ಸಮಯ. ಆಗಸ್ಟ್ 9, 2020ರ ರಾತ್ರಿ ಸೂರತ್​ನ ಆಸ್ಪತ್ರೆಯೊಂದರ ಕೊವಿಡ್ ಐಸಿಯುಗೆ 71 ವರ್ಷದ ರೋಗಿಯೊಬ್ಬರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲಾಯಿತು. ತಕ್ಷಣ ಆ ರೋಗಿಯ ಶ್ವಾಸನಾಳದೊಳಕ್ಕೆ polyvinyl chlorideನಿಂದ ತಯಾರಿಸಲಾದ ನಳಿಕೆಯೊಂದನ್ನು ಹಾಕಿ ವೆಂಟಿಲೇಟರ್​ಗೆ ಅಳವಡಿಸಿ ಸಂಪೂರ್ಣವಾಗಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಾಗಿತ್ತು. ಅದಕ್ಕೆ Endotracheal Intubation ಎನ್ನುತ್ತಾರೆ. ವೈದ್ಯಶಾಸ್ತ್ರದಲ್ಲಿ ಅಥವಾ ಅರಿವಳಿಕೆ ಶಾಸ್ತ್ರದಲ್ಲಿ ತಜ್ಞರಾದ ವೈದ್ಯರಷ್ಟೇ ಅದನ್ನು ಮಾಡಲು ಸಾಧ್ಯ. ವಿಪರ್ಯಾಸವೆಂದರೆ 37 ವರ್ಷದ ಡಾ.ಸಂಕೇತ್ ಮೆಹ್ತಾ ಎಂಬ ಅರಿವಳಿಕೆ ತಜ್ಞರು ತೀವ್ರ ಸ್ವರೂಪದ ಕೊವಿಡ್ ರೋಗಕ್ಕೆ ತುತ್ತಾಗಿ ಅದೇ ಐಸಿಯುನಲ್ಲಿ ಆಕ್ಸಿಜನ್ ಸಹಾಯದಲ್ಲಿದ್ದರು. ಹೊಸದಾಗಿ ಬಂದ ಆ ರೋಗಿಯ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ Intubation ಮಾಡಲು ಬರುವ ತಜ್ಞ ವೈದ್ಯರು ಯಾರೂ ಹತ್ತಿರದಲ್ಲಿ ಇರಲಿಲ್ಲವಾದ್ದರಿಂದ ಸ್ವತಃ 10 ಲೀಟರ್ ಆಕ್ಸಿಜನ್ ಪಡೆಯುತ್ತಿದ್ದ ಡಾ.ಸಂಕೇತ್ ಮೆಹ್ತಾ ತಮ್ಮ ಮಾಸ್ಕ್ ತೆಗೆದುಹಾಕಿ ಉಸಿರಾಡಲು ಕಷ್ಟವಾಗುತ್ತಿದ್ದರೂ ತಮ್ಮ ಬೆಡ್​ನಿಂದ ಎದ್ದು ಬಂದು ಆ ವೃದ್ಧ ರೋಗಿಯ ಶ್ವಾಸನಾಳದೊಳಕ್ಕೆ ನಳಿಕೆ ಹಾಕಿ ವೆಂಟಿಲೇಟರ್​ಗೆ ಅಳವಡಿಸಿ ರೋಗಿಯ ಜೀವ ಉಳಿಸಿದರು.

ಇನ್ನೊಂದು ತೀರಾ ಇತ್ತೀಚಿನ ಘಟನೆ. ಜೂನ್ 25ರ ರಾತ್ರಿ ಮುಂಬೈನ ಲೋಕಮಾನ್ಯ ತಿಲಕ್ ಮುನಿಸಿಪಲ್ ಜನರಲ್ ಆಸ್ಪತ್ರೆಗೆ ಕಿಡ್ನಿಗೆ ಸಂಬಂಧಪಟ್ಟ ರೋಗದಿಂದ ಬಳಲುತ್ತಿದ್ದ ಒಬ್ಬ ವೃದ್ಧ ರೋಗಿ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿ ಅಡ್ಮಿಟ್ ಆಗಿದ್ದರು. ರೋಗಿಯ ಸ್ಥಿತಿ ತೀರಾ ಗಂಭೀರವಾಗಿದೆಯೆಂದು ರೋಗಿಯ ಕಡೆಯವರಿಗೆ ತಿಳಿಸಿಯೇ ಕರ್ತವ್ಯನಿರತ ವೈದ್ಯರಾಗಿದ್ದ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಚಿಕಿತ್ಸೆ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ ರೋಗಿಗೆ ಹೃದಯ ಸ್ತಂಭನವಾಗಿ ಸಾವನ್ನಪ್ಪಿದರು. ರೋಗಿಯ ಸಂಬಂಧಿಕರು ಆಕ್ರೋಶಗೊಂಡು ಅಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿದರು. ಹಲ್ಲೆಗೊಳಗಾದ ವೈದ್ಯರು ದೂರು ಕೊಡಲು ಹೋದರೆ ಆ ರೋಗಿಯ ಕಡೆಯವರು ಯಾವುದೋ ರಾಜಕಾರಣಿಯ ಪರಿಚಯದವರೆಂದು FIR ದಾಖಲಿಸಿಕೊಳ್ಳಲು ಪೋಲೀಸರು ತಡ ಮಾಡಿದರು. ಕೊನೆಗೆ ವೈದ್ಯಕೀಯ ವಲಯದ ಒತ್ತಡದ ನಂತರ FIR ದಾಖಲಿಸಿಕೊಂಡು 72 ಗಂಟೆಗಳ ನಂತರ ತಲೆ ಮರೆಸಿಕೊಂಡಿದ್ದ ಹಲ್ಲೆಕೋರರನ್ನು ಬಂಧಿಸಲಾಯಿತು.

ಮೇಲಿನ ಎರಡು ಘಟನೆಗಳನ್ನು ಪ್ರಸ್ತಾಪಿಸಲು ಕಾರಣವಿದೆ. ಇಂದು (ಜುಲೈ 1) ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಡಾ.ಬಿ.ಸಿ ರಾಯ್ ಅವರ ಜನ್ಮದಿನವನ್ನು ನಾವು ವೈದ್ಯರ ದಿನವಾಗಿ ಆಚರಿಸುತ್ತೇವೆ. ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಲೇವರೆ, ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ಎಂಬ ಸುಭಾಷಿತವನ್ನು ಹೇಳುವ ದೇಶ ನಮ್ಮದು. ಶ್ರೀಮನ್ನಾರಾಯಣನನ್ನು ವೈದ್ಯ ಧನ್ವಂತರಿ ಅವತಾರದಲ್ಲಿ ಪೂಜಿಸಿ ಆದಿ ವೈದ್ಯರಾದ ಚರಕ, ಸುಶ್ರುತರನ್ನು ಪ್ರಾತಃಸ್ಮರಣೀಯರನ್ನಾಗಿಸಿದವರು ಭಾರತೀಯರು. ಇಂಥ ಹಿನ್ನೆಲೆಯುಳ್ಳ ನಮ್ಮ ನಾಡಿನಲ್ಲಿ ದಿನೇ ದಿನೇ ವೈದ್ಯರ ಮೇಲೆ ಹಲ್ಲೆ ಜಾಸ್ತಿಯಾಗುತ್ತಿದೆ. ದೌರ್ಜನ್ಯವಾದಾಗ ವೈದ್ಯಕೀಯ ಸಮುದಾಯದವರನ್ನು ಬಿಟ್ಟು ಬೇರೆ ಯಾರೂ ಅದರ ವಿರುದ್ಧ ಅಷ್ಟಾಗಿ ಧ್ವನಿ ಎತ್ತುತ್ತಿಲ್ಲ ಎನ್ನುವುದೂ ಖೇದನೀಯ.

ಗಂಟೆಗಟ್ಟಲೆ ನೀರನ್ನೂ ಸೇವಿಸಲೂ ಅವಕಾಶವಿಲ್ಲದಂತೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಾ ತಿಂಗಳುಗಟ್ಟಲೆ ಮನೆಯಿಂದ ದೂರವಿರಬೇಕಾದ ಅನಿವಾರ್ಯತೆ ಹೆಚ್ಚಿನ ವೈದ್ಯರಿಗೆ ಎದುರಾಗಿದೆ. ರೋಗಿಗಳ ಸೇವೆ ಮಾಡುತ್ತ ತಾವೂ ರೋಗಕ್ಕೆ ತುತ್ತಾಗಿ ಅನೇಕ ಭಾರತೀಯ ವೈದ್ಯರೂ ಸಾವನ್ನಪ್ಪಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (IMA) ನೀಡಿರುವ ವರದಿಯ ಪ್ರಕಾರ 2020ರಲ್ಲಿ ಕೊವಿಡ್ ಮೊದಲ ಅಲೆಯಲ್ಲಿ 748 ವೈದ್ಯರು ಭಾರತದಲ್ಲಿ ಮೃತಪಟ್ಟಿದ್ದಾರೆ. ಇತ್ತೀಚಿನ ಜೂನ್ 25ನೇ ತಾರೀಖಿನ ವರದಿಯ ಪ್ರಕಾರ ಎರಡನೇ ಅಲೆಯಲ್ಲಿ ಇಲ್ಲಿಯವರೆಗೆ 776 ಭಾರತೀಯ ವೈದ್ಯರು ಉಸಿರು ಚೆಲ್ಲಿದ್ದಾರೆ. ಈ ಎಲ್ಲ ವೈದ್ಯರ ತ್ಯಾಗವನ್ನು ರಾಷ್ಟ್ರೀಯ ವೈದ್ಯರ ದಿನದಂದು ನಾವು ನೆನೆಯದಿದ್ದರೆ ಹೇಗೆ?

ಯುವ ವೈದ್ಯರೆಲ್ಲಾ ಕೊರೊನಾ ಚಿಕಿತ್ಸೆಗೆ ಮೀಸಲು! ಕೊರೊನಾ ಬೇರೆ ಬೇರೆ ಕ್ಷೇತ್ರಗಳಿಗೆ ಹೊಡೆತ ನೀಡಿದಂತೆಯೇ ವೈದ್ಯಕೀಯ ಲೋಕದ ಮೇಲೂ ಸಾಕಷ್ಟು ಅಡ್ಡಪರಿಣಾಮ ಬೀರಿದೆ. 2020ರ ಏಪ್ರಿಲ್ ತಿಂಗಳಿನಿಂದ ಕೊವಿಡ್ ಬಹುವಾಗಿ ದೇಶಾದ್ಯಂತ ವ್ಯಾಪಿಸಿದ್ದರಿಂದ ಎಲ್ಲ ಕಡೆಯೂ ಕೊವಿಡ್ ರೋಗಿಗಳೇ ತುಂಬಿದ್ದರು. ಆ ವೇಳೆ ಬೇರೆ ರೋಗಕ್ಕೆ ತುತ್ತಾದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿರಲಿಲ್ಲ. ಬಂದರೂ ತೀರಾ ಎಮರ್ಜೆನ್ಸಿ ರೋಗಿಗಳನ್ನು ಮಾತ್ರ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುತ್ತಿದ್ದವು. ಇನ್ನೂ ಪದವಿ ಪಡೆಯದ ಅಂತಿಮ ವರ್ಷದ ವೈದ್ಯವಿದ್ಯಾರ್ಥಿಗಳೂ ಕೊವಿಡ್ ಸೇವೆಗೆ ಬಂದರು. ಮನುಷ್ಯನ ಸಂಪೂರ್ಣ ದೇಹವನ್ನು, ಎಲ್ಲ ರೀತಿಯ ರೋಗಗಳನ್ನು ಅಧ್ಯಯನ ಮಾಡಬೇಕಾಗಿದ್ದ ವಿದ್ಯಾರ್ಥಿಗಳು ಕೇವಲ ಕೊವಿಡ್​ಗೆ ಸೀಮಿತವಾದರು. ಇತ್ತ ಎಂಬಿಬಿಎಸ್ ಮುಗಿಸಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವವರಿಗೆ ಪ್ರವೇಶ ಕೊಡಲು ಮಾಡುವ ನೀಟ್ ಪಿಜಿ ಪರೀಕ್ಷೆ ಎರಡನೇ ಅಲೆಯ ಕಾರಣದಿಂದಾಗಿ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲ್ಪಟ್ಟಿದೆ. ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಜನ ವೈದ್ಯರು ಸ್ನಾತಕೋತ್ತರ ಪದವಿ ಪಡೆಯುವ ಕನಸು ಹೊತ್ತು ಈ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ. ಪ್ರವೇಶ ಪರೀಕ್ಷೆಗೆ ಅಧ್ಯಯನ ಮಾಡುವ ಸಲುವಾಗಿ ಒಂದು ವರ್ಷ ಎಲ್ಲಿಯೂ ಕೆಲಸಕ್ಕೆ ಹೋಗದೇ ಮನೆಯಲ್ಲಿ ಕುಳಿತು ಹಗಲು ರಾತ್ರಿ ಓದಿದ ವೈದ್ಯರೆಲ್ಲ ಈಗ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ಇನ್ನು ಕಳೆದ ವರ್ಷ ಸ್ನಾತಕೋತ್ತರ ಪದವಿಗೆ ಸೇರಿಕೊಂಡ ವೈದ್ಯರೂ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಉದಾಹರಣೆಗೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸೇರಿಕೊಂಡ ವೈದ್ಯರಿಗೆ ಆಪರೇಷನ್ ಮಾಡಲು ರೋಗಿಗಳು ಸಿಗುತ್ತಿಲ್ಲ. ಎಮರ್ಜೆನ್ಸಿ ಸರ್ಜರಿಗಳನ್ನು ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನೆಲ್ಲ ಅನಿರ್ದಿಷ್ಟಾವಧಿಗೆ ಮುಂದೆ ಹಾಕಿದ್ದಾರೆ. ನುರಿತ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರ ಮಾರ್ಗದರ್ಶನದಲ್ಲಿ ಬೇರೆ ಬೇರೆ ರೀತಿಯ ಆಪರೇಷನ್​ ಕಲಿಯಬೇಕಾಗಿದ್ದವರಿಗೆ ನಷ್ಟವಾಗುತ್ತಿದೆ. ಅವರೆಲ್ಲ ಅನಿವಾರ್ಯವಾಗಿ ಕೊವಿಡ್ ಡ್ಯೂಟಿ ಮಾಡುತ್ತಿದ್ದಾರೆ. ಯಾವ ವಿಷಯದಲ್ಲಿ ತಾವು ಪರಿಣತಿ ಪಡೆಯಬೇಕಿತ್ತೋ ಅದಕ್ಕೆ ಸಂಬಂಧಿಸಿದ್ದನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಕಡೆ ಪೂರ್ತಿ ಮೆಡಿಕಲ್ ಕಾಲೇಜ್ ಕೊವಿಡ್ ಕೇರ್ ಸೆಂಟರ್ ಆಗಿ ಬದಲಾಗಿದ್ದೂ ಇದೆ. ಅಂತಹ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಸೇರಿದ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ, ಬಾಲರೋಗ ಶಾಸ್ತ್ರ, ಅರಿವಳಿಕೆ ಶಾಸ್ತ್ರಕ್ಕೆ ಸಂಬಂಧಿಸಿದ ವೈದ್ಯ ವಿದ್ಯಾರ್ಥಿಗಳಿಗೆಲ್ಲ ಕೊವಿಡ್​ ಹೊರತಾಗಿ ಬೇರೇನೂ ತಿಳಿದುಕೊಳ್ಳಲಾಗುತ್ತಿಲ್ಲ.

ಇಂತಹ ಅವ್ಯವಸ್ಥೆಗಳ ನಡುವೆ ದೌರ್ಜನ್ಯಗಳ ಬರೆಯನ್ನೂ ವೈದ್ಯರು ಅನುಭವಿಸಬೇಕಾಗಿದೆ. ವೈದ್ಯಕೀಯ ಪ್ರಬಂಧಗಳು, ವಿಮರ್ಶೆಗಳಿಗೆ ಸಂಬಂಧಪಟ್ಟ NCBI ಜಾಲತಾಣ ಕೊಡುವ ವರದಿಯ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಶೇ.80ರಷ್ಟು ವೈದ್ಯರು ಯಾವ ಸಮಯದಲ್ಲಿ ತಮ್ಮ ಮೇಲೆ ಹಲ್ಲೆಯಾಗುವುದೋ ಎಂಬ ಭಯದಲ್ಲೇ ಬದುಕುತ್ತಿದ್ದಾರಂತೆ. ಮಾನಸಿಕ ತೊಂದರೆಗಳಿಂದ ಬಳಲುತ್ತಿರುವ ವೈದ್ಯರಲ್ಲಿ ಶೇ.46.3 ವೈದ್ಯರು ಆಸ್ಪತ್ರೆಗಳಲ್ಲಿ ತಮ್ಮ ಮೇಲೆ ಹಲ್ಲೆಯಾಗುವ ಭಯದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ಹೇಳಿದ್ದಾರಂತೆ. ತಮ್ಮ ಮೇಲೆ ಆಗುತ್ತಿರುವ ಹಲ್ಲೆಯನ್ನು ವಿರೋಧಿಸಿ 2017 ರಲ್ಲಿ 17 ಸಲ ಬೇರೆ ಬೇರೆ ಕಡೆಗಳಲ್ಲಿ ವೈದ್ಯರು ಪ್ರತಿಭಟನೆ ಮಾಡಿದ್ದಾರೆ. 2018ರಲ್ಲಿ 10 ಸಲ, 2019 ರಲ್ಲಿ 12 ಸಲ ಭಾರತದಲ್ಲಿ ವೈದ್ಯರು ತಮ್ಮ ಮೇಲಾಗುತ್ತಿರುವ ಹಲ್ಲೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ವೈದ್ಯೋ ನಾರಯಣೋ ಹರಿಃ ಎಂದು ಹೇಳುವ ಜನರೇ ತಮ್ಮ ಕಡೆಯ ರೋಗಿಗಳು ಸಾವನ್ನಪ್ಪಿದಾಗ ಆಕ್ರೋಶಗೊಂಡು ಹಲ್ಲೆ ನಡೆಸುತ್ತಾರೆ ಎಂದರೆ ಯಾರನ್ನು ನಂಬುವುದು?

ಕೊರೊನಾ ಸಮಯದಲ್ಲಿ ವೈದ್ಯ ಸಮುದಾಯ ಪಟ್ಟ ಕಷ್ಟಗಳನ್ನು ಕಣ್ಣಾರೆ ಕಂಡ ಕೆಲವರಿಗಾದರೂ ವೈದ್ಯರ ಕಷ್ಟಗಳು ಅರ್ಥವಾಗಿರಬಹುದು. ಇಷ್ಟಕ್ಕೂ ಪ್ರತಿ ವರ್ಷ ವೈದ್ಯರ ದಿನಾಚರಣೆಯನ್ನು ಆಚರಿಸುವುದು ಬಹುತೇಕ ವೈದ್ಯರು ಮತ್ತು ವೈದ್ಯಕೀಯ ಸಂಘದವರು ಮಾತ್ರ. ತಮ್ಮ ದಿನಾಚರಣೆಯನ್ನು ಸಾಮಾನ್ಯ ಜನರು ಆಚರಿಸಬೇಕೆಂದು ವೈದ್ಯರು ಬಯಸುತ್ತಿಲ್ಲ. ವೈದ್ಯರು ಹೇಗಿದ್ದಾರೆ, ಅವರ ಜೀವನದಲ್ಲಿ ಎಲ್ಲವೂ ಸರಿಯಾಗಿದೆಯೇ, ಏನಾದರೂ ಸಮಸ್ಯೆಗಳಿದ್ದರೆ ನಮ್ಮಲ್ಲಿ ಹೇಳಿಕೊಳ್ಳಿ, ನಿಮಗೆ ಕಷ್ಟ ಒದಗಿದರೆ ಸಹಾಯಕ್ಕೆ ನಾವಿದ್ದೇವೆ ಎಂಬ ಭರವಸೆಯ ಮಾತುಗಳನ್ನು ಜನ ಆಡುವಂತಾದರೆ ಸಾಕು. ವೈದ್ಯರ ದಿನಾಚರಣೆಯನ್ನು ವರ್ಷಕ್ಕೊಮ್ಮೆ ಮಿಕ್ಕೆಲ್ಲಾ ದಿನಾಚರಣೆಗಳಂತೆಯೇ ಆಚರಿಸಿ ಸುಮ್ಮನಾಗುವ ಬದಲು ಒಂದಷ್ಟು ಆತ್ಮಾವಲೋಕನ, ಸಮಸ್ಯೆ ಪರಿಹಾರಗಳತ್ತ ಯೋಚನೆ ಮಾಡಬೇಕು. ಈಗಂತೂ ಕೊರೊನಾ ದೆಸೆಯಿಂದ ಬಹುತೇಕ ಯುವ ವೈದ್ಯರು ಕೊವಿಡ್​ ರೋಗಿಗಳ ಚಿಕಿತ್ಸೆಗೆ ಮೀಸಲು ಎಂಬಂತಾಗಿರುವುದು ಮುಂದೆ ಇಡೀ ವ್ಯವಸ್ಥೆಯ ಬಹು ಗಂಭೀರ ಪರಿಣಾಮ ಬೀರಬಹುದು. ಸದ್ಯ ಇವುಗಳನ್ನು ಸರಿದೂಗಿಸುವತ್ತ ಗಮನ ಹರಿಸಿದರೆ ಮಾತ್ರ ಈ ಬಾರಿಯ ವೈದ್ಯರ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈದ್ಯರನ್ನು ಉದ್ದೇಶಿಸಿ ಮಾತಾಡಲಿದ್ದಾರೆ

Follow us on

Most Read Stories

Click on your DTH Provider to Add TV9 Kannada