
ರೈತ (Farmers) ದೇಶದ ಬೆನ್ನೆಲುಬು. ಆತ ಬೆವರು ಸುರಿಸಿ ದುಡಿದರೆ ಮಾತ್ರ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ರೈತರು ತಾವು ಹಸಿದಿದ್ದರೂ, ಕಷ್ಟದಲ್ಲಿದ್ದರೂ, ಕಷ್ಟಪಟ್ಟು ಬೆವರು ಸುರಿಸಿ ದುಡಿದು ಇತರರು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳುವಂತೆ ನೋಡುತ್ತಾರೆ. ಜೊತೆಗೆ ದೇಶದ ಆರ್ಥಿಕತೆಯಲ್ಲಿಯೂ ಸಹ ರೈತರ ಕೊಡುಗೆ ಅಪಾರ. ರಾಷ್ಟ್ರದ ಪ್ರಗತಿಗೆ ರೈತರ ಕೊಡುಗೆಗಳನ್ನು ಗೌರವಿಸಲು, ಕಷ್ಟಪಟ್ಟು ಶ್ರಮಿಸುವ ಪ್ರತಿಯೊಬ್ಬರ ರೈತನನ್ನು ಗೌರವಿಸಲು, ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಧ್ವನಿ ಎತ್ತಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆ, ಮಹತ್ವವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ದೇಶದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 23 ರಂದು ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಅವರು 1979 ರಿಂದ 1980 ರ ವರೆಗೆ ದೇಶದ ಪ್ರಧಾನಿಯಾಗಿದ್ದರು. ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದರು. ರೈತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗದ ಹೊರತು ದೇಶದ ಒಟ್ಟಾರೆ ಅಭಿವೃದ್ಧಿ ಅಸಾಧ್ಯ ಎಂದು ನಂಬಿದ್ದ ಚೌಧರಿ ಚರಣ್ ಸಿಂಗ್ ರೈತರ ಸಬಲೀಕರಣಕ್ಕಾಗಿ ಹಲವು ಕಾನೂನು, ಕೃಷಿ ಸುಧಾರಣೆಗಳು, ನೀತಿಗಳನ್ನು ರೂಪಿಸಿದ್ದರು. ಅವರ ಸಂಪೂರ್ಣ ರಾಜಕೀಯ ಜೀವನವು ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಆರ್ಥಿಕತೆಯ ಉನ್ನತಿಗೆ ಮೀಸಲಾಗಿತ್ತು. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ 2001 ರಲ್ಲಿ ಭಾರತ ಸರ್ಕಾವು ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 23 ರಂದು ದೇಶದಲ್ಲಿ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ