Christmas 2025: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್ ಕೇಕ್
ವಿಶ್ವದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುವ ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೇನೂ ದಿನಗಣನೆ ಶುರುವಾಗಿದೆ. ಕೇಕ್ ಇಲ್ಲದೆ ಈ ಹಬ್ಬ ಪೂರ್ಣ ಆಗೋದೆ ಇಲ್ಲ. ಸಾಮಾನ್ಯವಾಗಿ ಬಹುತೇಕರು ಹಬ್ಬಕ್ಕೆ ತಮಗೆ ಬೇಕಾದ ಕೇಕ್‌ಗಳನ್ನು ಮಾರುಕಟ್ಟೆಗಳಿಂದ ಖರೀದಿ ಮಾಡ್ತಾರೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಅವುಗಳನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ. ಹೀಗಿರುವಾಗ ನೀವು ಮನೆಯಲ್ಲಿಯೇ ಬಹಳ ಈಸಿಯಾಗಿ ಹೆಲ್ತಿ ಡ್ರೈಫೂಟ್ಸ್ ಕೇಕ್ ತಯಾರಿಸಬಹುದು. ಈ ಡ್ರೈಫ್ರೂಟ್ಸ್ ಕೇಕ್ ರೆಸಿಪಿ ಇಲ್ಲಿದೆ.

ಕ್ರಿಸ್ಮಸ್ (Christmas) ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರಪಂಚದಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ಇಟ್ಟು ಅದನ್ನು ವರ್ಣರಂಜಿತ ದೀಪಗಳು, ಇತ್ಯಾದಿ ವಸ್ತುಗಳಿಂದ ಅಲಂಕರಿಸುತ್ತಾರೆ. ಜೊತೆಗೆ ವಿಶೇಷ ಖಾದ್ಯಗಳನ್ನೂ ತಯಾರಿಸುತ್ತಾರೆ. ಇನ್ನೂ ಕೇಕ್ ಇಲ್ಲದೆ ಈ ಹಬ್ಬ ಪರಿಪೂರ್ಣ ಆಗೋದೇ ಇಲ್ಲ. ಹೌದು ಈ ದಿನದಂದು, ಹೆಚ್ಚಿನ ಮನೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆಗಳು ನಡೆಯುತ್ತವೆ. ಹೆಚ್ಚಿನವರು ಈ ಕೇಕ್‌ಗಳನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಇದರ ಬದಲು ಮನೆಯಲ್ಲಿಯೇ ಆರೋಗ್ಯಕರ ರೀತಿಯಲ್ಲಿ ಕೇಕ್ ತಯಾರಿಸಬಹುದು. ಇಂದಿನ ಈ ಲೇಖನದಲ್ಲಿ ಸುಲಭವಾಗಿ ಡ್ರೈಫೂರ್ಟ್ಸ್ ಕೇಕ್ ಹೇಗೆ ತಯಾರಿಸೋದು ಎಂಬುದನ್ನು ನೋಡೋಣ ಬನ್ನಿ.
ಕ್ರಿಸ್‌ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ಡ್ರೈ ಫ್ರೂಟ್ ಕೇಕ್:
ಕ್ರಿಸ್‌ಮಸ್ ಹಬ್ಬದಲ್ಲಿ ಪ್ಲಮ್ ಕೇಕ್ ತಯಾರಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಆದರೆ ಈ ಬಾರಿ ಹೊಸ ಕೇಕ್ ರೆಸಿಪಿಯನ್ನು ಟ್ರೈ ಮಾಡ್ಬೇಕು ಅಂತಿದ್ರೆ, ಈ ಡ್ರೈಫ್ರೂಟ್ ಕೇಕ್ ರೆಸಿಪಿಯನ್ನು ತಯಾರಿಸಿ.
ಡ್ರೈಫ್ರೂಟ್ಸ್ ಕೇಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
- ಮೈದಾ ಹಿಟ್ಟು – 1 ಕಪ್
- ಸಕ್ಕರೆ ಪುಡಿ – ಅರ್ಧ ಕಪ್
- ಬೆಣ್ಣೆ – ಅರ್ಧ ಕಪ್
- ಹಾಲು – ಅರ್ಧ ಕಪ್
- ಅಡುಗೆ ಸೋಡಾ – ಅರ್ಧ ಟೀ ಚಮಚ
- ಬೇಕಿಂಗ್ ಪೌಡರ್ – ಅರ್ಧ ಟೀಚಮಚ
- ವೆನಿಲ್ಲಾ ಎಸೆನ್ಸ್ – 1 ಟೀಸ್ಪೂನ್
- ಮಿಶ್ರ ಒಣ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ಸ್, ಟುಟ್ಟಿ-ಫ್ರೂಟಿ ಇತ್ಯಾದಿ) – 1 ಕಪ್
- ದಾಲ್ಚಿನ್ನಿ ಪುಡಿ – ಅರ್ಧ ಟೀಚಮಚ
ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಸುಲಭವಾಗಿ ಒತ್ತಡದಿಂದ ಮುಕ್ತಿ ಪಡೆಯಬಹುದು
ಕ್ರಿಸ್‌ಮಸ್ ಸ್ಪೆಷಲ್ ಡ್ರೈ ಫ್ರೂಟ್ಸ್ ಕೇಕ್ ಮಾಡುವುದು ಹೇಗೆ?
- ಮೊದಲು ಡ್ರೈ ಫ್ರೂಟ್ಸ್ ಅನ್ನು ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ.
- ಈಗ, ಒಂದು ಬಟ್ಟಲಿನಲ್ಲಿ ಬೆಣ್ಣೆ ಮತ್ತು ಸಕ್ಕರೆಯನ್ನು ಸೇರಿಸಿ, ಕೆನೆಯ ವಿನ್ಯಾಸ ಬರುವವರೆಗೆ ಬೀಟ್ ಮಾಡಿ. ಮತ್ತು ಅದಕ್ಕೆ ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಇದರ ನಂತರ, ಹಿಟ್ಟು, ಅಡಿಗೆ ಸೋಡಾ, ಬೇಕಿಂಗ್ ಪೌಡರ್ ಮತ್ತು ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಶೋಧಿಸಿ, ಬೆಣ್ಣೆ ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಈಗ ಈ ಮಿಶ್ರಣಕ್ಕೆ ಕತ್ತರಿಸಿಟ್ಟ ಡ್ರೈಫ್ರೂಟ್ಸ್, ಟುಟ್ಟಿ-ಫ್ರೂಟಿ ಸೇರಿಸಿ.
- ಇದಾದ ಬಳಿಕ ಕೇಕ್ ಟಿನ್‌ಗೆ ಬೆಣ್ಣೆ ಹಚ್ಚಿ, ತಯಾರಾದ ಕೇಕ್ ಕೇಕ್ ಹಿಟ್ಟನ್ನು ಅದರಲ್ಲಿ ಹಾಕಿ ಬೇಕ್ ಮಾಡಬೇಕು.
- ಓವನ್‌ನಲ್ಲಿ ಕೇಕ್ ತಯಾರಿಸುತ್ತೀರಿ ಎಂದಾದರೆ ಕೇಕ್ ತಯಾರಿಸುವ 10 ನಿಮಿಷಗಳ ಮೊದಲು ಓವನ್‌ನನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ ನಂತರ 35 ರಿಂದ 40 ನಿಮಿಷಗಳ ಕಾಲ ಕೇಕ್ ಬೇಯಿಸಿ.
- ಕುಕ್ಕರ್‌ನಲ್ಲಿ ತಯಾರಿಸಲು, ಮೊದಲು ಕುಕ್ಕರ್‌ನಲ್ಲಿ ಉಪ್ಪು ಸೇರಿಸಿ 10 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಕೇಕ್ ಟಿನ್ ಅನ್ನು ಕುಕ್ಕರ್‌ನಲ್ಲಿ ಹಾಕಿ 45-50 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
- ಕೇಕ್ ಬೆಂದ ನಂತರ, ಅದನ್ನು ತಣ್ಣಗಾಗಲು ಬಿಡಿ ಮತ್ತು ಅಂತಿಮವಾಗಿ ಒಣ ಹಣ್ಣುಗಳಿಂದ ಅಲಂಕರಿಸಿದರೆ ಕ್ರಿಸ್‌ಮಸ್ ಸ್ಪೆಷಲ್ ಡ್ರೈಫ್ರೂಟ್ ಕೇಕ್ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




