National Road Safety Week 2025: ದೇಶದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳು, ಈ ಅಂಕಿಅಂಶದಲ್ಲಿ ಏನಿದೆ?

| Updated By: ಅಕ್ಷತಾ ವರ್ಕಾಡಿ

Updated on: Jan 11, 2025 | 7:56 AM

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಭಾರತದಲ್ಲಿಯೇ ಪ್ರತಿ ವರ್ಷ ಸರಿಸುಮಾರು ಎಂಭತ್ತು ಸಾವಿರಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತದ ಒಟ್ಟು ಸಾವಿನ ಹದಿಮೂರು ಪ್ರತಿಶತದಷ್ಟಿದೆ. ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 11 ರಿಂದ ಒಂದು ವಾರಗಳ ಕಾಲ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

National Road Safety Week 2025: ದೇಶದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳು, ಈ ಅಂಕಿಅಂಶದಲ್ಲಿ ಏನಿದೆ?
National Road Safety Week 2025
Follow us on

ದಿನಬೆಳಗಾದರೆ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಿದರೂ, ಅಪಘಾತ ತಡೆಗಟ್ಟಲು ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಕಾನೂನು ಜಾರಿ ಮಾಡಿದರೂ ಕೂಡ ರಸ್ತೆ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 11 ರಿಂದ ಜನವರಿ 17 ರವರೆಗೆ ಸರಿಸುಮಾರು ಒಂದು ವಾರಗಳ ಕಾಲ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಇತಿಹಾಸ:

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಮೊದಲು 1989 ರಲ್ಲಿ ಆಚರಿಸಲಾಯಿತು. ಸುಂದರ್ ಸಮಿತಿಯು ಶಿಫಾರಸು ಮಾಡಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿಯನ್ನು ಮಾರ್ಚ್ 15, 2010 ರಂದು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜನವರಿ 11 ರಿಂದ ಜನವರಿ 17 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಮಹತ್ವ ಹಾಗೂ ಆಚರಣೆ:

ರಸ್ತೆ ಸುರಕ್ಷತಾ ಸಪ್ತಾಹವು ರಾಷ್ಟ್ರವ್ಯಾಪಿ ಅಭಿಯಾನವಾಗಿದೆ. ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮವು ಜನರಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಚಯಿಸುವುದು ರಸ್ತೆ ಅಪಘಾತಗಳ ಸಂಭವವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅಪಘಾತಗಳು ಮತ್ತು ಸಾವುಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಜವಾಬ್ದಾರಿಯುತ ಚಾಲನೆ, ಪಾದಚಾರಿ ಸುರಕ್ಷತೆ ಮತ್ತು ಉತ್ತಮ ರಸ್ತೆ ಮೂಲಸೌಕರ್ಯದ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. ಈ ದಿನದಂದು ವಿವಿಧ ಸಂಘ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತವೆ. ರಸ್ತೆ ಸುರಕ್ಷತೆಯ ಕುರಿತು ಶಾಲೆ ಕಾಲೇಜುಗಳಲ್ಲಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತವೆ.

ಇದನ್ನೂ ಓದಿ: ಈ ಗುಣಗಳಿರುವ ವ್ಯಕ್ತಿಗಳು ಸ್ವಾರ್ಥಿಗಳಂತೆ, ದೂರವಿದ್ದರೆ ನಿಮಗೆ ಒಳ್ಳೆಯದಂತೆ

ರಸ್ತೆ ಅಪಘಾತದ ಅಂಕಿ ಅಂಶಗಳ ವರದಿಯಲ್ಲಿ ಏನಿದೆ?

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ರಸ್ತೆ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ. ರಸ್ತೆ ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳಲ್ಲಿ 20 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದಲ್ಲದೇ, ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ರಸ್ತೆ ಅಪಘಾತಗಳ ವಾರ್ಷಿಕ ಪ್ರವೃತ್ತಿಯ ಪ್ರಕಾರವಾಗಿ 18 ರಿಂದ 45 ವರ್ಷದೊಳಗಿನ ಜನರು ಹೆಚ್ಚು ಸಾಯುತ್ತಿದ್ದು, ಅವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಾಗಿದ್ದಾರೆ. 70 ಪ್ರತಿಶತದಷ್ಟು ಅಪಘಾತಗಳು ಅತಿವೇಗದ ಚಾಲನೆಯಿಂದ ಸಂಭವಿಸುತ್ತವೆ. 2022 ರ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 4.62 ಲಕ್ಷ ರಸ್ತೆ ಅಪಘಾತಗಳು ವರದಿಯಾಗಿದ್ದು, ಅದರಲ್ಲಿ 1.68 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ 4.44 ಲಕ್ಷ ಜನರು ಗಾಯಗೊಂಡಿದ್ದಾರೆ. ಇನ್ನುಳಿದಂತೆ ವಿಶ್ವ ರಸ್ತೆ ಅಂಕಿ ಅಂಶಗಳ ವರದಿಯಲ್ಲಿ ಅಪಘಾತದಿಂದ ಸಾಯುವ ಟಾಪ್ 20 ದೇಶಗಳ ಪಟ್ಟಿಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎನ್ನುವುದು ಬೇಸರದ ಸಂಗತಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 am, Sat, 11 January 25