
ಸುರಕ್ಷಿತೆ (Safety) ಎನ್ನುವುದು ಎಲ್ಲರಿಗೂ ಕೂಡ ಅಗತ್ಯ. ಸುರಕ್ಷಿತರಾಗಿದ್ದಾಗ ಮಾತ್ರ ತಮ್ಮ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ. ಆದರೆ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೇನೇ ಅವಘಡಗಳು ಸಂಭವಿಸುತ್ತದೆ. ನಮ್ಮ ಬೇಜವಾಬ್ದಾರಿತನದಿಂದ ಜೀವ ಸೇರಿದಂತೆ ಆಸ್ತಿಪಾಸ್ತಿಗಳಿಗೂ ಹಾನಿಯಾಗುತ್ತದೆ. ಅಪಘಾತ, ಅಗ್ನಿ ಅವಘಡ ಹೀಗೆ ಅಚಾನಕ್ಕಾಗಿ ಅನಾಹುತಗಳು ಸಂಭವಿಸಬಹುದು. ಹೀಗಾದಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ರಕ್ಷಣಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಪ್ರತಿ ವರ್ಷ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನ (National Safety Day) ವನ್ನು ಆಚರಿಸಲಾಗುತ್ತದೆ.
1966ರ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷತಾ ಮಂಡಳಿಯನ್ನು ಪ್ರಾರಂಭಿಸಲಾಯಿತು. ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಹಾಗೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಕುರಿತು ಅರಿವು ಮೂಡಿಸಲು ಭಾರತ ಸರ್ಕಾರವು ರಾಷ್ಟ್ರೀಯ ಸುರಕ್ಷತಾ ಮಂಡಳಿಯನ್ನು ರಚಿಸಿದೆ. ರಸ್ತೆ ಸುರಕ್ಷತೆ, ಕೆಲಸದ ಸ್ಥಳದಲ್ಲಿನ ಸುರಕ್ಷತೆ, ಮಾನವ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಈ ರಾಷ್ಟ್ರೀಯ ಸುರಕ್ಷತಾ ಮಂಡಳಿ ಪ್ರಾರಂಭವಾದ ಸವಿನೆನಪಿಗಾಗಿ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಹೀಗಾಗಿ ಪ್ರತಿವರ್ಷವು ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂ ತ ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ.
ನಮಗೆಲ್ಲರಿಗೂ ತಿಳಿದಿರುವಂತೆ ಅಪಘಾತಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ ಅನೇಕ ಬಾರಿ ಅಪಘಾತಗಳು ಸಂಭವಿಸುತ್ತವೆ. ಈ ದಿನವನ್ನು ಆಚರಿಸುವ ವಿಶೇಷ ಉದ್ದೇಶವೆಂದರೆ ಪ್ರತಿಯೊಂದು ವಲಯದಲ್ಲಿನ ಸುರಕ್ಷತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಸ್ವಲ್ಪ ಅಜಾಗರೂಕತೆಯು ದೊಡ್ಡ ಅಪಘಾತಗಳಿಗೆ ಕಾರಣವಾಗಬಹುದು ಎನ್ನುವುದು ತಿಳಿದುಕೊಳ್ಳುವುದು ಮುಖ್ಯ. ಹೀಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವರ್ಷ ವಿಕ್ಷಿತ್ ಭಾರತಕ್ಕೆ ಸುರಕ್ಷತೆ ಮತ್ತು ಯೋಗಕ್ಷೇಮ ನಿರ್ಣಾಯಕ ಎನ್ನುವ ಥೀಮ್ ನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ಈ ರಾಷ್ಟ್ರೀಯ ಸುರಕ್ಷತಾ ಮಂಡಳಿಯು ತನ್ನ ಸುರಕ್ಷತಾ ನಿಯಮಗಳು ಮತ್ತು ಪ್ರೋಟೋಕಾಲ್‌ಗಳಲ್ಲಿ ರಸ್ತೆ ಸುರಕ್ಷತೆ, ಕೆಲಸದ ಸ್ಥಳ ಸುರಕ್ಷತೆ, ಮಾನವ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತದೆ. ಈ ದಿನದಂದು ದೇಶಾದ್ಯಂತ ವಿವಿಧ ಸಂಸ್ಥೆಗಳು ವಿವಿಧ ರೀತಿಯ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಇದನ್ನೂ ಓದಿ: ತೋರು ಬೆರಳಿಗಿಂತ ಉಂಗುರ ಬೆರಳು ಚಿಕ್ಕದಿದ್ಯಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
* ಕೈಗಾರಿಕಾ ಪ್ರದೇಶಗಳಲ್ಲಿ ಹೆಲ್ಮೆಟ್, ಕೈಗೆ ಗ್ಲೋಸ್ ಹಾಗೂ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
* ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿ.
* ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳು ಬಳಸುವಾಗ ಎಚ್ಚರವಿರಲಿ. ವಿದ್ಯುತ್ ಉಪಕರಣಗಳು ಕೆಟ್ಟಿದ್ದರೆ ರಿಪೇರಿ ಮಾಡಿಸಿ ಬಳಸಿ.
* ಸೈಬರ್ ಭದ್ರತೆಗಾಗಿ ಪಾಸ್‌ವರ್ಡ್‌ಗಳು ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ.
* ವಿಪತ್ತು ನಿರ್ವಹಣಾ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ವಿಕೋಪಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ